ಉಡುಪಿ: ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಕಟಪಾಡಿ, ಶಿರ್ವ 7 ಕೋಟಿ ಹಾಗೂ ಕುರ್ಕಾಲು ಪಾಜಕ ಕ್ಷೇತ್ರದಿಂದ ಉಡುಪಿ ಹಾಗೂ ಕಾರ್ಕಳಕ್ಕೆ 2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಸ್ತೆಗಳ ನಿರ್ಮಾಣಕ್ಕೆ ರಾಜ್ಯ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶಿಲಾನ್ಯಾಸ ನೆರವೇರಿಸಿದರು.
ಅವರು ಶುಕ್ರವಾರ ಕಟಪಾಡಿ ವ್ಯಾಪ್ತಿಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಕಟಪಾಡಿಯಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರಸ್ತೆಗಳು ಅಭಿವೃದ್ಧಿಗೆ ಅತ್ಯಗತ್ಯವಾಗಿದ್ದು, ಜನರ ಬದುಕಿಗೆ ವೇಗವನ್ನು ನೀಡುತ್ತದೆ. ಹಾಗಾಗಿ ರಸ್ತೆಗಳು ಜನರ ಜೀವನಾಡಿಗಳಾಗಿದ್ದು ಇದಕ್ಕೆ ಸರಕಾರ ಆದ್ಯತೆಯನ್ನು ನೀಡಿದೆ. ಆತ್ರಾಡಿ-ಶಿರ್ವ –ಏರ್‍ಪೋರ್ಟ್ ರಸ್ತೆಗೆ ಈಗಾಗಲೇ 4 ಕೋಟಿ ವೆಚ್ಚದಲ್ಲಿ ಕಾಮಗಾರಿ ಮುಗಿದಿದ್ದು,ಈ ರಸ್ತಗೆ ಇನ್ನೂ 11 ಕೋಟಿ ಮಂಜೂರಾಗಿದ್ದು, ಇದರಿಂದ ಸಮಗ್ರ ರಸ್ತೆ ನಿರ್ಮಾಣ ಮಾಡಲಾಗುವುದು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಶಿರ್ವದಲ್ಲಿ 3 ಕೋಟಿ ರೂ ವೆಚ್ಚದ ಕಾಮಗಾರಿ ಆಗಿದೆ, ಈ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಸಮಸ್ಯೆ ಇರುವಡೆ ಟ್ಯಾಂಕರ್ ಮೂಲಕ ನೀರು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯವಿರುವೆಡೆ ಹೊಸ ಬೋರ್‍ವೆಲ್ ಕೊರೆಯಲು ಮತ್ತು ಪೈಪ್ ಲೈನ್ ಕಾಮಗಾರಿಗೆ ಕೈಗೊಳ್ಳಲು ಸೂಚಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಸರ್ವತೋಮುಖ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಜೂಲಿಯಟ್ ಪಿರೇರಾ, ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶುಭಾ ಮತ್ತಿತರರು ಉಪಸ್ಥಿತರಿದ್ದರು. ಕ್ಯಾಥರಿನ್ ರೋಡ್ರಿಗ್ರಸ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಸವಲತ್ತು ವಿತರಣೆಯನ್ನು ನಡೆಸಲಾಯಿತು.(ಫೋಟೋ ಲಗತ್ತಿಸಿದೆ)