ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಾಟ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮರಳೆತ್ತುವ ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ತೀವ್ರ ಪರಿಶೀಲನೆ ನಡೆಸುತ್ತಿದೆ.
ಜೂ.15ರಿಂದ ಆಗಸ್ಟ್ 15ರವರೆಗೆ ಎರಡು ತಿಂಗಳ ಕಾಲ ಜಿಲ್ಲೆಯಲ್ಲಿ ನದಿಯಿಂದ ಮರಳು ಎತ್ತುವುದನ್ನು ಹಾಗೂ ಮರಳು ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಮರಳುಗಾರಿಕೆ, ಮರಳು ಗಣಿಗಾರಿಕೆ ಹಾಗೂ ಸಾಗಣಿಕೆಯನ್ನು ನಿಯಂತ್ರಿಸಲು ತಾಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಬುಧವಾರದಿಂದಲೇ ಕಾರ್ಯಾಚರಣೆಗಿಳಿದಿವೆ. ಮರಳು ಬಾರ್ಸ್ ಹಾಗೂ ಮರಳು ಬ್ಲಾಕ್‍ಗಳಲ್ಲಿ ದಕ್ಕೆಗಳಲ್ಲಿ ಇಟ್ಟಿರುವ ಮರಳು ಬೋಟುಗಳನ್ನು ನೀರಿನಿಂದ ಹಾಗೂ ನದಿ ದಡದಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಇದಲ್ಲದೇ, ನದಿ ತೀರದಲ್ಲಿರುವ ಶೆಡ್‍ಗಳನ್ನು ತೆರವುಗೊಳಿಸಲಾಗಿದೆ ಹಾಗೂ ಜೆಸಿಬಿ, ಲಾರಿ ಹಾಗೂ ಹಿಟಾಚಿಗಳನ್ನು ನದಿ ತೀರಲದಲ್ಲಿ ನಿಲ್ಲಲು ಅವಕಾಶ ನೀಡಲಾಗುತ್ತಿಲ್ಲ.
ಗುರುವಾರ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ವಿವಿಧ ನದಿ ತೀರದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳೂರು ತಹಶೀಲ್ದಾರ್ ಶಿವಶಂಕರಪ್ಪ ಅವರು ಮಂಗಳೂರು ತಾಲೂಕಿನ ಅಡ್ಯಾರು, ಕಣ್ನೂರು, ಜಪ್ಪಿನಮೊಗರು, ಕೂಳೂರು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ, ಬೋಟು ಹಗೂ ಶೆಡ್‍ಗಳ ತೆರವು ಕಾರ್ಯದ ಪರಿಶೀಲನೆ ನಡೆಸಿದರು.
ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ವಿವಿಧ ನದಿ ತೀರಗಳಿಗೆ ಭೇಟಿ ನೀಡಿದ್ದು, ನೇತ್ರಾವತಿ ತೀರದಲ್ಲಿ ಎಲ್ಲ ರೀತಿಯ ಮರಳುಗಾರಿಕೆ ಬೋಟು, ದೋಣಿ, ಯಂತ್ರಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇಟ್ಟಿದ್ದು, ಯಾವುದೇ ರೀತಿಯಲ್ಲಿ ಮರಳೆತ್ತದಂತೆ ಹಾಗೂ ಅಕ್ರಮ ಸಾಗಾಟ ನಿಯಂತ್ರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಲ್ಲೂ ತಪಾಸಣೆ ಬಿಗಿಗೊಳಿಸಲಾಗಿದೆ.
ಇಂದು ಭೇಟಿ ನೀಡಿದ್ದಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಯಾವುದೇ ರೀತಿಯ ಮರಳುಗಾರಿಕೆ ನಡೆಯುತ್ತಿಲ್ಲ ಎಂದು ಮಂಗಳೂರು ತಹಶೀಲ್ದಾರ್ ಶಿವಶಂಕರಪ್ಪ ತಿಳಿಸಿದ್ದಾರೆ.
ಮರಳುಗಾರಿಕೆ: ನದೀತೀರದ ಶೆಡ್‍ಗಳ ತೆರವು
Spread the love
Spread the love