ದೆಹಲಿ ಕರ್ನಾಟಕ ಸಂಘದಲ್ಲಿ ಆಹೋ ರಾತ್ರಿ ಬಡಗುತಿಟ್ಟಿನ ಯಕ್ಷಗಾನ

Spread the love

ದೆಹಲಿ ಕರ್ನಾಟಕ ಸಂಘದಲ್ಲಿ ಆಹೋ ರಾತ್ರಿ ಬಡಗುತಿಟ್ಟಿನ ಯಕ್ಷಗಾನ

ದೆಹಲಿ: ಕರ್ನಾಟಕದ ಸುಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಒಂದಾದ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ ಇವರಿಂದ ಇದೇ ಬರುವ 16.07.2016ರ ಶನಿವಾರ ರಾತಿ 8.30ರಿಂದ ಮರುದಿನ ಬೆಳಿಗ್ಗೆ 6.00ಗಂಟೆಯವರೆಗೆ ರಾಜಧಾನಿಯ ದೆಹಲಿಯಲ್ಲಿ ಪ್ರಪ್ರಥಮ ಬಾರಿಗೆ ಮೇಳದ ಆಟವೊಂದು ಪ್ರದರ್ಶನಗೊಳ್ಳಲಿದೆ. ದೆಹಲಿ ಕರ್ನಾಟಕ ಸಂಘದಲ್ಲಿ ಅಹೋ ರಾತ್ರಿ ‘ಭೀಷ್ಮ ವಿಜಯ’ ಮತ್ತು ‘ನಾಗಶ್ರೀ’ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಲು ಆಯೋಜಿಸಲಾಗಿದೆ.

yakshagan

ಸುಮಾರು ಸಾವಿರಾರು ಪ್ರದರ್ಶನಗಳನ್ನು ಕಂಡಿರುವ ಈ ನಾಗಶ್ರೀ ಪ್ರಸಂಗವು ಕರ್ನಾಟಕದ ಅದ್ವೀತಿಯ ಭಾಗವತರು ಹಾಗೂ ಕಲಾವಿದರು ಆಗಿದ್ದ ದಿ.ಕಾಳಿಂಗ ನಾವಡ ಅವರ ಒಂದು ಅಮೋಘ ರಚನೆಯಾಗಿದೆ. ಸಾಲಿಗ್ರಾಮ ಮೇಳವಷ್ಟೇ ಅಲ್ಲದೆ ಇನ್ನೂ ಹಲವಾರು ತಿರುಗಾಟದ ಮೇಳಗಳು ಈ ಪ್ರಸಂಗವನ್ನು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಆಡಿ ತೋರಿಸಿ ಜನಪ್ರಿಯಗೊಳಿಸುತ್ತಿವೆ. ಇದೇ ಮೊದಲ ಬಾರಿಗೆ ಇಂತಹ ಒಂದು ತಿರುಗಾಟದ ಮೇಳವು ದೆಹಲಿಯಲ್ಲಿ ಈ ಪ್ರಸಂಗವನ್ನು ಆಡಿ ತೋರಿಸಲಿದೆ.

ದೆಹಲಿ ಕರ್ನಾಟಕ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ದೆಹಲಿಯ ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳು ಹಾಗೂ ಕರ್ನಾಟಕ ಮೂಲದ ಬ್ಯಾಂಕುಗಳು, ಶ್ರೀ ಕ್ಷೇತ್ರ ಧರ್ಮಸ್ಥಳ, ದೆಹಲಿ ತುಳುಸಿರಿ, ಬಂಟ್ಸ್ ಕಲ್ಚರಲ್ ಅಸೋಸಿಯೇಶನ್, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ಗೋಕರ್ಣ ಮಂಡಳ ಹಾಗೂ ಇನ್ನಿತರ ದಾನಿಗಳ ವಿಶೇಷ ಸಹಕಾರ ಪಡೆದುಕೊಂಡು ಈ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಲು ನಿಶ್ಚಯಿಸಲಾಗಿದೆ.

ಬಡಗುತಿಟ್ಟಿನ ಸುಮಾರು 30-35 ಮಂದಿ ಪ್ರಖ್ಯಾತÀ ಕಲಾವಿದರುಗಳನ್ನೊಳಗೊಂಡ ಕಿಶನ್ ಹೆಗ್ಡೆ ಅವರ ನೇತೃತ್ವದ ಸಾಲಿಗ್ರಾಮ ಮೇಳದ ಕಲಾವಿದರೊಡನೆ ದಿನಾಂಕ 14.07.2016ರಂದು ಸಂಜೆ ಒಂದು ‘ಪರಸ್ಪರ’ ಮುಖಾಮುಖಿ ಕಾರ್ಯಕ್ರಮ ಹಾಗೂ ಮರುದಿನ ಕಲಾವಿದರನ್ನು ದೆಹಲಿಯ ವಿವಿಧ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಿಗೆ ಕೊಂಡೊಯ್ಯುವ ವ್ಯವಸ್ಥೆ ಮತ್ತು 16ರಂದು ಸಂಜೆ ಯಕ್ಷಗಾನದ ಎಲ್ಲ ಪರಂಪರೆಗಳನ್ನು ಒಳಗೊಂಡು-ಚೌಕಿ ಪೂಜೆ, ಒಡ್ಡೋಲಗ, ಎರಡು ಯಕ್ಷಗಾನ ಪ್ರದರ್ಶನಗಳು ಹಾಗೂ ಮಂಗಳದೊಂದಿಗೆ ಕಾರ್ಯಕ್ರಮವನ್ನು ಮರುದಿನ ಬೆಳಿಗ್ಗೆ ಸುಸೂತ್ರವಾಗಿ ಮುಕ್ತಾಯಗೊಳಿಸಲು ಕರ್ನಾಟಕ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ದೆಹಲಿಯ ನೂರಾರು ಮಂದಿ ಕಲಾರಸಿಕರು ಮತ್ತು ಗಣ್ಯ ಕನ್ನಡಿಗರು ಜೊತೆಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಸಂಘದ ಆವರಣದಲ್ಲಿರುವ ಸುಸಜ್ಜಿತವಾದ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಕೇಂದ್ರ ಸಚಿವರು, ಸಂಸದರು ಹಾಗೂ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಸಂಘಟಕ-ಸಂಚಾಲಕ ಪಿ.ಕಿಶನ್ ಹೆಗ್ಡೆ ಅವರನ್ನು ಸನ್ಮಾನಿಸಲಾಗುವುದು.

ಇಡೀ ರಾತ್ರಿ ನಡೆಯುವ ಈ ಕಾರ್ಯಕ್ರಮದಲ್ಲಿ ಊರಿನ ಪರಂಪರೆಯಂತೆ ಚಾಹಾ, ಕಾಫಿ, ಬೋಂಡ, ಬಜ್ಜಿ, ಚುರುಮುರಿ ಈ ಎಲ್ಲಾ ವ್ಯವಸ್ಥೆಗಳನ್ನು ಕೂಡಾ ಮಾಡಲಾಗಿರುತ್ತದೆ. ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಸಖಾರಾಮ ಉಪ್ಪೂರು ಹಾಗೂ ಈ ಯಕ್ಷಗಾನ ಕಾರ್ಯಕ್ರಮದ ವಿಶೇಷ ಸಂಚಾಲಕರಾದ ರಾಧಾಕೃಷ್ಣ ಅವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.


Spread the love