Home Mangalorean News Kannada News ನಿಗದಿಯಾಗದ ಶಾಲಾ ಮಕ್ಕಳ ವಾಹನ ಚಾಲಕರ ಸಭೆ ಚಾಲಕರಿಂದ RTO ಅಧಿಕಾರಿಗೆ ಘೆರಾವ್

ನಿಗದಿಯಾಗದ ಶಾಲಾ ಮಕ್ಕಳ ವಾಹನ ಚಾಲಕರ ಸಭೆ ಚಾಲಕರಿಂದ RTO ಅಧಿಕಾರಿಗೆ ಘೆರಾವ್

Spread the love

ನಿಗದಿಯಾಗದ ಶಾಲಾ ಮಕ್ಕಳ ವಾಹನ ಚಾಲಕರ ಸಭೆ ಚಾಲಕರಿಂದ RTO ಅಧಿಕಾರಿಗೆ ಘೆರಾವ್

ಮಂಗಳೂರು: ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ಹಾಗೂ ವಾಹನ ಚಾಲಕರ ಸಂಕಷ್ಟಗಳನ್ನು ಅರಿಯಲು, ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ತಿಳಿ ಹೇಳಲು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ಕರೆಯಬೇಕೆಂದು ಕಳೆದ 3 ವಾರಗಳ ಹಿಂದೆ ಪ್ರತಿಭಟನೆ ನಡೆಸಿ ಮನವಿಯನ್ನು ಅರ್ಪಿಸಿದರೂ, ಈವರೆಗೂ ಸಭೆಯನ್ನು ಕರೆಯದೆ ವಾಹನ ಚಾಲಕರನ್ನು ಸತಾಯಿಸುತ್ತಿರುವ RTO ಅಧಿಕಾರಿಗಳ ವಿರುದ್ಧ ಆಕ್ರೋಶಿತಗೊಂಡ ಶಾಲಾ ಮಕ್ಕಳ ವಾಹನ ಚಾಲಕರು  RTO ಕಚೇರಿಗೆ ಮುತ್ತಿಗೆ ಹಾಕಿದರು.

car-drivers

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಗೌರವಾಧ್ಯಕ್ಷರಾದ ಸುನೀಲ್‍ಕುಮಾರ್ ಬಜಾಲ್‍ರವರು, ಕುಂದಾಪುರದ ಘಟನೆಯನ್ನು ನೆಪವಾಗಿಟ್ಟುಕೊಂಡು ಶಾಲಾ ಮಕ್ಕಳ ವಾಹನ ಚಾಲಕರನ್ನೇ ಗುರಿಯನ್ನಾಗಿಸಿ ಕೇಸು ದಾಖಲಿಸಿ ಕಿರುಕುಳ ನೀಡುತ್ತಿರುವುದು ಸರ್ವಥಾ ಸರಿಯಲ್ಲ. ಪ್ರತಿಯೊಂದು ಅಪಘಾತಕ್ಕೆ ಅದರದ್ದೇ ಆದ ಬೇರೆ ಬೇರೆ ಆಯಾಮಗಳಿವೆಯೇ ಹೊರತು ಚಾಲಕರು ಮಾತ್ರ ಕಾರಣವಲ್ಲ. ಒಟ್ಟಿನಲ್ಲಿ ಮಕ್ಕಳ ಸುರಕ್ಷತೆ ಹಾಗೂ ಚಾಲಕರ ಸಂಕಷ್ಟದ ಬಗ್ಗೆ ಸಭೆ ಕರೆಯಬೇಕೆಂದು ಜಿಲ್ಲಾಧಿಕಾರಿಗಳು, RTO, ಪೊಲೀಸ್ ಅಧಿಕಾರಿಗಳು, ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿಯನ್ನು ಅರ್ಪಿಸಿದರೂ ಈವರೆಗೆ ಜಿಲ್ಲಾಡಳಿತ ಸಭೆ ಕರೆದಿಲ್ಲ. ಎರಡು ದಿನದಲ್ಲಿ ಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದ RTO ಅಧಿಕಾರಿಗಳು ಎರಡು ವಾರ ಕಳೆದರೂ ಸಭೆ ಕರೆಯಲಿಲ್ಲ. ಘಟನೆ ನಡೆದಾಗ ಮಾತ್ರ ಮಕ್ಕಳ ಸುರಕ್ಷತೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಜಿಲ್ಲಾಡಳಿತವು, ಪ್ರತೀ ಕ್ಷಣ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ವಾಹನ ಚಾಲಕರ ಸಂಕಷ್ಟವನ್ನು ಅರಿಯಲು ಸಭೆ ಕರೆಯದಿರುವುದು ಮಕ್ಕಳ ಸುರಕ್ಷತೆಯ ಬಗ್ಗೆ ಕೇವಲ ಬೂಟಾಟಿಕೆಯನ್ನು ಪ್ರದರ್ಶಿಸಿದಂತಾಗಿದೆ. ಈ ಕೂಡಲೇ ಜಿಲ್ಲಾಡಳಿತವು ಸಭೆಯನ್ನು ಕರೆಯದಿದ್ದಲ್ಲಿ ಜಿಲ್ಲೆಯಾದ್ಯಂತ ಶಾಲಾ ವಾಹನ ಬಂದ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಗೌರವ ಸಲಹೆಗಾರರಾದ ಉಮೇಶ್ ಶೆಟ್ಟಿಯವರು ಮಾತನಾಡುತ್ತಾ, ಶಾಲಾ ವಾಹನ ಚಾಲಕರ ಬದುಕಿನ ಬವಣೆಗಳನ್ನು ವಿವರಿಸುತ್ತಾ ಮಕ್ಕಳ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಶಾಲಾ ಆಡಳಿತ ಮಂಡಳಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಜಿಲ್ಲಾಡಳಿತದ ಆದೇಶವನ್ನು ಕೂಡಾ ಶಾಲಾ ಆಡಳಿತ ಮಂಡಳಿಗಳು ಧಿಕ್ಕರಿಸುತ್ತಿದೆ. ಸಮಸ್ಯೆಗಳನ್ನು ಪರಿಹರಿಸಲು ಏಕಾಏಕಿ ಕ್ರಮ ಕೈಗೊಳ್ಳುವ ಬದಲು ಕಾಲಾವಕಾಶವನ್ನು ನೀಡಿದರೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ. ಅದನ್ನು ಬಿಟ್ಟು ಏಕಾಏಕಿಯಾಗಿ ದಾಳಿ ನಡೆಸುವುದು ಸರಿಯಲ್ಲ ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆರ್‍ಟಿಓ ಅಧಿಕಾರಿಗಳಾದ ಶ್ರೀ ಜಿ.ಎಸ್. ಹೆಗಡೆಯವರು ಶಾಲಾ ಮಕ್ಕಳ ವಾಹನ ಚಾಲಕರ ನೋವನ್ನಾಲಿಸುತ್ತಾ, ಜುಲೈ 20ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವುದಾಗಿಯೂ, ಅಲ್ಲಿಯವರೆಗೆ ಕೇಸು ಹಾಕುವುದನ್ನು ನಿಲ್ಲಿಸುವುದಾಗಿಯೂ ಭರವಸೆಯನ್ನು ನೀಡಿದರು. ಆ ಬಳಿಕವೇ ಪ್ರತಿಭಟನೆಯನ್ನು ವಾಪಾಸ್ಸು ಪಡೆಯಲಾಯಿತು.

ಹೋರಾಟದ ನೇತೃತ್ವವನ್ನು ಸಂಘದ ಮುಖಂಡರಾದ ಮೋಹನ್ ಅತ್ತಾವರ, ಮುಹಮ್ಮದ್ ಅನ್ಸಾರ್, ಪ್ರವೀಣ್ ಲೇಡಿಹಿಲ್, ಗಂಗಾಧರ ರೈ, ಚಿತ್ತರಂಜನ್, ಸತೀಶ್ ಪೂಜಾರಿ, ಗಂಗಾಧರ ಶೆಟ್ಟಿಗಾರ್, ಜಯರಾಮ್, ಬೆಂಜಮಿನ್ ವೇಗಸ್, ಲೋಕೇಶ್ ಸುರತ್ಕಲ್, ಮುನ್ನಾ ಪದವಿನಂಗಡಿ, ಜೋಸ್ಸಿ ಡಿ’ಕುನ್ಹಾ, ರೆಹಮಾನ್ ಕುಂಜತ್ತಬೈಲ್, ಹಮೀದ್ ಪಾವುಲ, ಕಿರಣ್ ಲೇಡಿಹಿಲ್ ಮುಂತಾದವರು ವಹಿಸಿದ್ದರು.


Spread the love

Exit mobile version