Home Mangalorean News Kannada News 25 ವಾರ ಪೂರೈಸಿದ ಚಂಡಿಕೋರಿ ಸಿನಿಮಾಕ್ಕೆ 175 ದಿನಗಳ ಪ್ರದರ್ಶನದ ಸಂಭ್ರಮ

25 ವಾರ ಪೂರೈಸಿದ ಚಂಡಿಕೋರಿ ಸಿನಿಮಾಕ್ಕೆ 175 ದಿನಗಳ ಪ್ರದರ್ಶನದ ಸಂಭ್ರಮ

Spread the love

ಮಂಗಳೂರು: ಬೊಳ್ಳಿ ಬ್ಯಾನರ್‍ನಡಿಯಲ್ಲಿ, ದೇವದಾಸ್ ಕಾಪಿಕಾಡ್ ನಿರ್ದೇಶನ ಮತ್ತು ಶರ್ಮಿಳಾ ಡಿ. ಕಾಪಿಕಾಡ್ ಹಾಗೂ ಸಚಿನ್ ಎ.ಎಸ್.ಉಪ್ಪಿನಂಗಡಿ ಇವರು ನಿರ್ಮಾಣ ಮಾಡಿರುವ ‘ಚಂಡಿಕೋರಿ’ ಸಿನಿಮಾವು 25 ವಾರಗಳ ಪ್ರದರ್ಶನ ಕಾಣುವ ಮೂಲಕ ತುಳುವಿಗೆ ಮತ್ತೊಂದು ಸೂಪರ್  ಹಿಟ್ ಸಿನಿಮಾ ನೀಡಿದಂತಾಗಿದೆ. ಮಾರ್ಚ್ 18ಕ್ಕೆ 175 ದಿನಗಳ ಪ್ರದರ್ಶನ ಕಂಡಿರುವ ಈ ಸಿನಿಮಾ ಕೂಡ 500 ದಿನಗಳ ಪ್ರದರ್ಶನ ಕಂಡಿರುವ ‘ಚಾಲಿಪೊಲಿಲು’ ಸಿನಿಮಾದಂತೆ ತುಳುವಿಗೆ ಹೊಸ ಮನ್ನಣೆ ತಂದುಕೊಡುವಲ್ಲಿ ಯಶಸ್ವಿಯಾಗಿದೆ.

ಮಂಗಳೂರಿನ ಸುಚಿತ್ರಾ, ಬಿಗ್ ಸಿನೆಮಾಸ್ ಮತ್ತು ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಶತದಿನಗಳ ಪ್ರದರ್ಶನ ಕಂಡಿರುವ ಚಂಡಿಕೋರಿ ಸಿನಿಮಾವು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಬಿಗ್ ಸಿನೆಮಾಸ್‍ನಲ್ಲಿ 175 ದಿನಗಳ ಪ್ರದರ್ಶನ ಕಾಣುವ ಮೂಲಕ ಒಂದು ಅತ್ಯುತ್ತಮ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

image001chandi-kori-20160317-001

ಈ ಸಿನಿಮಾ ಕೂಡ ವಿದೇಶದಲ್ಲೂ ಪ್ರದರ್ಶನ ಕಂಡು ಪ್ರೇಕ್ಷಕರಿಂದ ಶಹಬ್ಬಾಸ್‍ಗಿರಿ ಪಡೆದುಕೊಂಡಿದೆ. ಕುವೈಟ್, ಬೆಹರಿನ್ ಲಂಡನ್‍ನಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಚಂಡಿಕೋರಿ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯ, ಮಸ್ಕತ್, ದುಬಾಯಿ, ಕತಾರ್‍ನಲ್ಲಿ ಪ್ರದರ್ಶನ ನೀಡಲಿದೆ. ಮುಂಬಾಯಿ, ಬೆಂಗಳೂರು ಪೂನಾ, ಮೈಸೂರು, ಕೊಪ್ಪ, ಮಡಿಕೇರಿ ಮೊದಲಾದ ಕಡೆಗಳಲ್ಲಿ ಪ್ರದರ್ಶನ ಕಂಡಿದೆ. ಹಲವು ಬಗೆಯ ಹೊಸತನ, ಉತ್ತಮ ಕಥೆ, ಮೌಲ್ಯಯುತ ಹಾಸ್ಯ, ಅತ್ಯುತ್ತಮ ಗುಣಮಟ್ಟಗಳಿಂದ ಕೂಡಿರುವ ಚಂಡಿಕೋರಿಯಲ್ಲಿ ಅಭಿನಯಿಸಿದ ಪ್ರತಿಯೊಬ್ಬ ಕಲಾವಿದನೂ ಉತ್ತಮವಾಗಿ ಅಭಿನಯಿಸಿರುವುದು ಕೂಡ ಚಿತ್ರದ ಯಶಸ್ಸಿನ  ಹಿಂದಿನ ಒಂದು ಕಾರಣ. ಅತ್ಯುತ್ತಮ ಸಿನೆಮಾಗಳನ್ನು ತುಳುವರು ಯಾವತ್ತೂ ಸ್ವೀಕರಿಸುತ್ತಾರೆ ಮತ್ತು ಕೈಹಿಡಿದು ಮುನ್ನಡೆಸುತ್ತಾರೆ ಎಂಬುದಕ್ಕೆ  ಚಂಡಿಕೋರಿ ಸಿನಿಮಾ ಉತ್ತಮ ಉದಾಹರಣೆಯಾಗಿದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಸಂಗೀತ ನಿರ್ದೇಶನದೊಂದಿಗೆ ಪಾತ್ರವನ್ನೂ ನಿರ್ವಹಿಸಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಒಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ಗೋಪಿನಾಥ ಭಟ್, ಚೇತನ್ ರೈ ಮಾಣಿ, ಸರೋಜಿನಿ ಶೆಟ್ಟಿ, ಡಿ.ಎಸ್ ಬೋಳೂರು ತಮ್ಮ ಪಾತ್ರಗಳಿಗೆ ಜೀವ ತುಂಬಿ ಜನರನ್ನು ಮನರಂಜಿಸಿದರೆ, ನಾಯಕ ನಟನಾಗಿ ಅರ್ಜುನ್ ಕಾಪಿಕಾಡ್, ನಾಯಕಿಯಾಗಿ ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ.


Spread the love

Exit mobile version