ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಾಲಕಾರ್ಮಿಕ ದಾಳಿ
ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ಕಲಂ 17ರಡಿ ನೇಮಕಗೊಂಡ ವಿವಿಧ ನಿರೀಕ್ಷರುಗಳು ನಗರದ ಹೊಟೇಲು, ಅಂಗಡಿ ವಾಣಿಜ್ಯ ಸಂಸ್ಥೆಗಳು, ಕಟ್ಟಡಗಳು, ಮನೆಗಳು, ಅಪಾರ್ಟ್‍ಮೆಂಟ್‍ಗಳು, ಗ್ಯಾರೇಜು ಮೊದಲಾದ ಉದ್ಯೋಗದಾತ ಸಂಸ್ಥೆಗಳಿಗೆ ದಾಳಿ ಮಾಡಿ ಬಾಲಕಾರ್ಮಿಕರ ನೇಮಕಾತಿ ಬಗ್ಗೆ ಪರಿಶೀಲಿಸುತ್ತಿರುವರು.
ಬುಧವಾರದಿಂದ ಆರಂಭವಾಗಿರುವ ಈ ದಾಳಿಯ ಸಂದರ್ಭದಲ್ಲಿ ನಗರದ ಕೆ.ಎಸ್.ರಾವ್ ರಸ್ತೆಯ ಶ್ರೀದೇವಿ ಕ್ಯಾಂಟೀನ್ ಎಂಬಲ್ಲಿ ಕ್ಲೀನರ್ ಕೆಲಸ ನಿರ್ವಹಿಸುತ್ತಿದ್ದ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಬಾಲಕನೊಬ್ಬನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಪುನರ್‍ವಸತಿಗಾಗಿ ದಾಖಲಿಸಲಾಗಿದೆ. ಶ್ರೀದೇವಿ ಕ್ಯಾಂಟೀನ್ ಮಾಲೀಕ ಪ್ರಕಾಶ್ ಎ. ಬಿನ್ ಧರಣಪ್ಪಗೌಡ ವಿರುದ್ಧ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)ಕಾಯ್ದೆ 1986ರ ಪ್ರಕರಣ 3ರ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಲಾಗಿದೆ. ಬಾಲಕನ ಹೇಳಿಕೆಯನ್ನು ದಾಳಿಯ ಕಾಲಕ್ಕೆ ದಾಖಲಿಸಿಕೊಳ್ಳಲಾಯಿತು.
ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಕಾರ್ಮಿಕ ಅಧಿಕಾರಿಗಳಾದ ಜಿ.ಬಿ.ಮೈಲಾರಪ್ಪ ಮತ್ತು ಕೆ. ಶ್ರೀಪತಿ ರಾಜು, ಹಿರಿಯ ಕಾರ್ಮಿಕ ನಿರೀಕ್ಷಕರ ಕುಮಾರ್ ಬಿ.ಆರ್, ಶ್ರೀ ಗಣಪತಿ ಹೆಗ್ಡೆ, ಮೇರಿ ಡಯಾಸ್ ಹಾಗೂ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ ಪಾಲ್ಗೊಂಡಿದ್ದರು.
ಬಾಲಕಾರ್ಮಿರನ್ನು ನೇಮಕ ಮಾಡಿಕೊಳ್ಳುವುದು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಅಪರಾಧವಾಗಿದ್ದು, ಉಲ್ಲಂಘನೆಗಾಗಿ 1 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ. 20,000 ವರೆಗೆ ದಂಡ ಅಥವಾ ಎರಡಕ್ಕೂ ಒಳಗಾಗ ಬೇಕಾಗುತ್ತದೆ. ಬಾಲಕಾರ್ಮಿಕರ ನೇಮಕಾತಿ ಕಂಡು ಬಂದಲ್ಲಿ 0824-2433131, 2437479, 2435343 ಹಾಗೂ 2433132ಗಳಗೆ ಅಥವಾ ಚೈಲ್ಡ್ ಲೈನ್- 1098 ಇವರಿಗೆ ಕರೆ ಮಾಡಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸುವಂತೆ ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.