ಉದನೆ ಸಮೀಪ ಕುಮಾರಧಾರ ಹೊಳೆಗೆ ಬಿದ್ದ ಗ್ಯಾಸ್ ಟ್ಯಾಂಕರ್
ನೆಲ್ಯಾಡಿ: ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಗ್ಯಾಸ್ ತುಂಬಿದ ಟ್ಯಾಂಕರೊಂದು ಕುಮಾರಧಾರಾ ಹೊಳೆಯ ಸಂಪರ್ಕ ತೋಡಿಗೆ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಚ್.ಪಿ. ಕಂಪೆನಿಯ ಟ್ಯಾಂಕರ್ ಉದನೆ ಸಮೀಪದ ಪರವರಕೊಟ್ಯ ಸೇತು ವೆಯ ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ. ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಂದರ್ಭ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಟ್ಯಾಂಕರ್‌ನ ಹಿಂಭಾಗವು ತುಂಡಾಗಿ ಗ್ಯಾಸ್ ತುಂಬಿದ ಟ್ಯಾಂಕ್ ತೋಡಿಗೆ ಬಿದ್ದಿತ್ತು. ಈ ಸಂದರ್ಭ ಟ್ಯಾಂಕ್‌ನ ಮುಚ್ಚಳವು ತೆರೆದು ಅನಿಲ ತೋಡಿಗೆ ಹರಿದಿದೆ. ಅಪಘಾತ ನಡೆದ ತಕ್ಷಣ ನೆಲ್ಯಾಡಿ ಹೊರಠಾಣಾ ಪೊಲೀ ಸರು ಹಾಗೂ ಕ್ವಿಕ್ ರೆಸ್ಪಾನ್ಸ್ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಾಹನ ಸಂಚಾರ ನಿಯಂತ್ರಿಸಿದರು.
ಟ್ಯಾಂಕರ್‌ನಲ್ಲಿದ್ದ ಅನಿಲ ಸೋರಿಕೆಯಾಗಿ ಪಕ್ಕದಲ್ಲೇ ಹರಿಯುತ್ತಿದ್ದ ಗುಂಡ್ಯ ಹೊಳೆಗೆ ಸೇರಿರುವುದರಿಂದ ಕುಮಾರಧಾರಾ ಆಸುಪಾಸಿನ ಜನರು ಹೊಳೆಯ ನೀರನ್ನು ಉಪಯೋಗಿಸದಂತೆ ಕ್ರಮಕೈಗೊಳ್ಳಲು ಸ್ಥಳಕ್ಕಾಗಮಿಸಿದ ಪುತ್ತೂರು ಎಎಸ್ಪಿ ರಿಷ್ಯಂತ್ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು. ಟ್ಯಾಂಕರ್ ಚಾಲಕ ಕಣ್ಣನ್ ಹಾಗೂ ಕ್ಲೀನರ್ ಗೌತಮ್ ಅಪಾಯದಿಂದ ಪಾರಾಗಿದ್ದಾರೆ.