25ನೇ ವರ್ಷದ ಆಳ್ವಾಸ್ ವಿರಾಸತ್-2019 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಚಾಲನೆ
ಮೂಡುಬಿದಿರೆ : ಪುತ್ತಿಗೆ ವಿವೇಕಾನಂದನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ 25ನೇ ವರ್ಷದ ಆಳ್ವಾಸ್ ವಿರಾಸತ್-2019 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಳ್ವಾಸ್ ವಿರಾಸತ್-2019 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಆಶೀರ್ವಚನ ನೀಡಿದ ಪೇಜಾವರ ಸ್ವಾಮೀಜಿ ಸಂಗೀತ ಭಾವೈಕ್ಯತೆಯನ್ನು ಬೆಳೆಸುವ ಕಲೆಯಾಗಿದ್ದು, ಭಾರತೀಯ ಸಂಗೀತ ಅಭಿವೃದ್ಧಿಯ ಪ್ರತೀಕವಿದ್ದಂತೆ, ಜೀವನ ಮತ್ತು ಸಂಗೀತದ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ-ಕೋಲಾಹಲ ಉಂಟಾಗುತ್ತದೆ. ಸಾಮರಸ್ಯವಿದ್ದರೆ ಮಾತ್ರ ರಾಷ್ಟ್ರೀಯ ಜೀವನವೂ ಸಂಗೀತವಾಗುತ್ತದೆ, ಹಾಗಾಗಿ ರಾಷ್ಟ್ರೀಯ ಜೀವನದಲ್ಲಿ ಸಾಮರಸ್ಯ ಅತ್ಯಗತ್ಯ.ಯೋಗ ತತ್ವಜ್ಞಾನ, ಆಧ್ಯಾತ್ಮವೆಂಬುದು ಪೂರ್ವದಿಂದ ಪಶ್ಚಿಮಕ್ಕೆ ಹರಿದು ಹೋಗಿದೆ ಆದರೆ ಪಶ್ಚಿಮದಿಂದ ಪೂರ್ವಕ್ಕೆ ವಿಕೃತಿ ಮಾತ್ರ ಹರಿದು ಬಂದಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎನ್. ವಿನಯ ಹೆಗ್ಡೆ ಮಾತನಾಡಿ ಆಳ್ವಾಸ್ ವಿರಾಸತ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ನಾಡಿನೆಲ್ಲೆಡೆ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮನ್ನಣೆಯಿದೆ ಕಲೆ-ಕ್ರೀಡೆ- ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ದೀಪನಗೊಳಿಸುವ ಏಕೈಕ ಆದರ್ಶ ಸಂಸ್ಥೆಯೆಂದರೆ ಅದು ಆಳ್ವಾಸ್ ಎಂದು ಶ್ಲಾಘಿಸಿದರು.
ರಜತ ಸಂಭ್ರಮದ ಆಳ್ವಾಸ್ ವಿರಾಸತ್ 2019ರ ಪ್ರಶಸ್ತಿಯನ್ನು ಸುಪ್ರಸಿದ್ಧ ಗಾಯಕ ಪದ್ಮಶ್ರೀ ಹರಿಹರನ್ಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಸಂಗೀತ ಎನ್ನುವುದು ನೋವು ನಿವಾರಕ ಔಷಧಿಯಿದ್ದಂತೆ. ಮನುಷ್ಯನ ಮಾನಸಿಕ ಸುಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಸಂಗೀತದ ಪಾತ್ರ ಮಹತ್ತರವಾದದ್ದು. ಆಧ್ಯಾತ್ಮದ ಹಾದಿಯೇ ಸಂಗೀತ ಎಂದು ಅವರು ತಿಳಿಸಿದರು.
ಆಳ್ವಾಸ್ ವಿರಾಸತ್ ರೂವಾರಿ ಡಾ. ಎಂ ಮೋಹನ್ ಆಳ್ವ ಸ್ವಾಗತಿಸಿ, ಪ್ರಸಕ್ತ ಕಾಲದಲ್ಲಿ ವಿದ್ಯೆಯನ್ನು ಕಲೆಯ ಜೊತೆಗೆ ಬೆಸೆಯುವ ಅನಿವಾರ್ಯತೆಯಿದೆ. ಸರ್ಕಾರಿ ಮಾತ್ರವಲ್ಲ ಖಾಸಗಿ ಸಂಸ್ಥೆಯವರಿಗೂ ಕಲೆಯನ್ನುಳಿಸಿ ಬೆಳೆಸುವ ಗುಣ ಮೂಡಿ ಬರಬೇಕು. ಕೇವಲ ಸರ್ಕಾರದ ಕಡೆಗೆ ಮುಖ ಮಾಡಿ ಕುಳಿತರೆ ಏನೂ ಪ್ರಯೋಜನವಿರದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿರಾಸತ್ ರಜತಸಂಭ್ರಮದ ಅಂಗವಾಗಿ ಅಂಚೆ ಇಲಾಖೆಯು ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಹರಿಹರನ್ ಅನಾವರಣಗೊಳಿಸಿದರು.
ಉದ್ಘಾಟನಾ ಸಮಾರಂಭದ ಮೊದಲು ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿ ಕಲಾವಿದರು ಹಾಗೂ ವಾದ್ಯ ವೃಂದದ ಕಲಾವಿದರು ಮೆರವಣಿಗೆ ಮೂಲಕ ಗಣ್ಯರನ್ನು ವೇದಿಕೆಗೆ ಬರ ಮಾಡಿಕೊಂಡರು.