26 ಕೋಟಿ ವೆಚ್ಚದಲ್ಲಿ ಸುರತ್ಕಲ್ – ಬಿ.ಸಿ ರೋಡ್ ಮಧ್ಯೆಯ ಹೆದ್ದಾರಿಗೆ ಕಾಯಕಲ್ಪ; ಮುಲ್ಕಿ,ಬೀರಿ ಸೇರಿ 4 ಕಡೆ ಸರ್ವೀಸ್‌ ರಸ್ತೆ ನಿರ್ಮಾಣ

Spread the love

26 ಕೋಟಿ ವೆಚ್ಚದಲ್ಲಿ ಸುರತ್ಕಲ್ – ಬಿ.ಸಿ ರೋಡ್ ಮಧ್ಯೆಯ ಹೆದ್ದಾರಿಗೆ ಕಾಯಕಲ್ಪ; ಮುಲ್ಕಿ,ಬೀರಿ ಸೇರಿ 4 ಕಡೆ ಸರ್ವೀಸ್‌ ರಸ್ತೆ ನಿರ್ಮಾಣ

ಸಂಸದ ಕ್ಯಾ.ಚೌಟ ಅವರ ಸತತ ಪ್ರಯತ್ನದಿಂದ ಶೀಘ್ರ ಬಗೆಹರಿಯಲಿದೆ ದ.ಕ.ದ ಪ್ರಮುಖ ಹೆದ್ದಾರಿಗಳ ಸಮಸ್ಯೆ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪರಿಶ್ರಮದ ಫಲವಾಗಿ ಇದೀಗ ನವ ಮಂಗಳೂರು ಬಂದರು ವ್ಯಾಪ್ತಿ(NMPRCL)ಗೆ ಸೇರಿರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣಾ ಕಾಮಗಾರಿ, ಮರು ಡಾಂಬರೀಕರಣ, ಸುರಕ್ಷತಾ ಕ್ರಮಗಳ ಅಳವಡಿಕೆಗೆ ಟೆಂಡರ್‌ ಆಹ್ವಾನಿಸಲಾಗಿದೆ. ಆ ಮೂಲಕ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಿಸಿದ ಬಹುದಿನಗಳ ಬೇಡಿಕೆಯೊಂದು ಈಡೇರುವ ಹಂತ ತಲುಪಿದೆ.

ನವ ಮಂಗಳೂರು ಬಂದರನ್ನು ಸಂಪರ್ಕಿಸಿರುವ ಎನ್‌ಎಚ್‌-66ರಲ್ಲಿ ಸುರತ್ಕಲ್‌ನಿಂದ ನಂತೂರುವರೆಗಿನ ಹೆದ್ದಾರಿ, ಎನ್‌ಎಚ್‌-73ರಲ್ಲಿ ಬಿಸಿ.ರೋಡ್‌ನಿಂದ ಪಡೀಲ್‌ವರೆಗಿನ ಹೆದ್ದಾರಿ ಹಾಗೂ ನಂತೂರು ಜಂಕ್ಷನ್‌ನಿಂದ ಪಡೀಲ್‌ವರೆಗಿನ ಬೈಪಾಸ್‌ ರಸ್ತೆ ಸೇರಿದಂತೆ ಒಟ್ಟು 37.42 ಕಿಮೀ. ದೂರದ ಹೆದ್ದಾರಿಗಳ ರಿಪೇರಿ, ಮರುಡಾಂಬರೀಕರಣ ಹಾಗೂ ನಿರ್ವಹಣೆಗಾಗಿ ನವ ಮಂಗಳೂರು ಬಂದರು ರಸ್ತೆ ಕಂಪೆನಿ ಲಿಮಿಟೆಡ್‌(ಎನ್‌ಎಂಪಿಆರ್‌ಸಿಎಲ್‌) ಟೆಂಡರ್‌ನ್ನು ಆಹ್ವಾನಿಸಿದೆ. ಒಟ್ಟು 26.05 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್‌ನಿಂದ ಎಪಿಎಂಸಿ, ಕೂಳೂರಿನಿಂದ ಎಜೆ ಆಸ್ಪತ್ರೆ ಹಾಗೂ ನಂತೂರಿನಿಂದ ಪಡೀಲ್‌ವರೆಗಿನ 11.084 ಕಿಮೀ. ಉದ್ದದ ರಸ್ತೆಯ ಡಾಂಬರೀಕರಣ ನಡೆಯಲಿದೆ. ಅಲ್ಲದೆ, ಹೆದ್ದಾರಿ ಬದಿ ಬೆಳೆದಿರುವ ಗಿಡ-ಗಂಟಿ ತೆಗೆಯುವ ಹಾಗೂ ಸ್ವಚ್ಛತಾ ಕಾರ್ಯ ನಡೆಯಲಿದೆ. ಜತೆಗೆ ರಸ್ತೆ ಬದಿ ಜಾಗದ ನಿರ್ವಹಣೆ, ಇತರ ನಿರ್ವಹಣಾ ಕಾಮಗಾರಿ ಹಾಗೂ ಹೆದ್ದಾರಿಯ ಸುರಕ್ಷತಾ ಕ್ರಮಗಳ ಅಳವಡಿಕೆ ಕಾರ್ಯ ಕೂಡ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ, ನವ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಸೂಕ್ತ ನಿರ್ವಹಣೆಯಿಲ್ಲದೆ ಸರಕು ಸಾಗಣೆ ವಾಹನಗಳು ಹಾಗೂ ಇತರೆ ವಾಹನ ಸವಾರರ ಸುಗಮ-ಸುರಕ್ಷಿತ ಸಂಚಾರಕ್ಕೆ ಸಾಕಷ್ಟು ಸವಾಲು ಎದುರಾಗಿದ್ದವು. ಇದೀಗ ಈ ಹೆದ್ದಾರಿಗಳ ಸೂಕ್ತ ನಿರ್ವಹಣೆ ಹಾಗೂ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಿ ಅಗತ್ಯ ಕಾಮಗಾರಿ ಕೈಗೊಳ್ಳುವುದಕ್ಕೆ NMPRCL ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಸಿರುವುದು ನಮ್ಮ ಜಿಲ್ಲೆಯ ಆರ್ಥಿಕ ಬೆಳವಣಿಗೆ ಹೆಚ್ಚಿನ ವರದಾನವಾಗಲಿದೆ. ಇದರಿಂದ ಬಂದರಿನೊಂದಿನ ವ್ಯಾಪಾರ ವಹಿವಾಟು ವೃದ್ಧಿಯಾಗುವ ಜತೆಗೆ ಮೂಲಸೌಕರ್ಯ ಕೂಡ ಅಭಿವೃದ್ಧಿಯಾಗಲಿದೆ. ಜತೆಗೆ ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಜನರಿಗೂ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಹಾಗೂ ಇಲಾಖೆ ಜಂಟಿ ಕಾರ್ಯದರ್ಶಿ ವಿನಯ್‌ ಕುಮಾರ್‌ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಮುಲ್ಕಿ, ಹಳೆಯಂಗಡಿ, ಬೀರಿ ಸೇರಿ ಎನ್‌ಎಚ್‌66ರಲ್ಲಿ 4 ಕಡೆ ಸರ್ವೀಸ್‌ ರಸ್ತೆ ನಿರ್ಮಾಣ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ ಕಡಿಮೆಗೊಳಿಸಲು ಹಾಗೂ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಒಟ್ಟು 4 ಕಡೆ ಸರ್ವೀಸ್‌ ರಸ್ತೆ ಹಾಗೂ ಎರಡು ಕಡೆ ಪಾದಚಾರಿ ಮೇಲು ಸೇತುವೆ ನಿರ್ಮಿಸುವುದಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಹೆದ್ದಾರಿಯಲ್ಲಿ ಮುಲ್ಕಿಯಲ್ಲಿ ಎರಡೂ ಕಡೆ 500 ಮೀಟರ್‌ ದೂರಕ್ಕೆ, ಪಡುಪಣಂಬೂರಿನಲ್ಲಿ ಎರಡೂ ಕಡೆ 310 ಮೀಟರ್‌, ಹಳೆಯಂಗಡಿ ಗ್ರಾಮದಲ್ಲಿ ಎರಡೂ ದಿಕ್ಕಿನಲ್ಲಿ 550 ಮೀಟರ್‌ ಉದ್ದಕ್ಕೆ ಹಾಗೂ ಬೀರಿ ಬಳಿ ಎರಡೂ ಬದಿಯಲ್ಲಿ 700 ಮೀಟರ್‌ ಉದ್ದದ ಸರ್ವೀಸ್‌ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಪಾದಚಾರಿಗಳ ಸುರಕ್ಷಿತ ಸಂಚಾರ ಹಾಗೂ ಸ್ಥಳೀಯ ವಾಹನ ಸವಾರರ ಅನುಕೂಲಕ್ಕಾಗಿ ಈ ಭಾಗದಲ್ಲಿ ಸೂಕ್ತ ಸರ್ವೀಸ್‌ ರಸ್ತೆಗಳನ್ನು ನಿರ್ಮಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಅದು ಈಡೇರಿಕೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಕ್ಯಾ. ಚೌಟ ಹೇಳಿದ್ದಾರೆ.

ಮುಕ್ಕ, ಎಕ್ಕೂರಿನಲ್ಲಿ ಪಾದಾಚಾರಿ ಮೇಲ್ಸೇತುವೆ

ವಾಹನಗಳ ಸುಗಮ ಸಂಚಾರಕ್ಕಾಗಿ ಮುಕ್ಕದಲ್ಲಿ ಶ್ರೀನಿವಾಸ ಕಾಲೇಜು ಬಳಿ ಹೆದ್ದಾರಿ ದಾಟುವುದಕ್ಕೆ ಪಾದಚಾರಿ ಮೇಲುಸೇತುವೆ(FOB) ನಿರ್ಮಿಸಲಾಗುವುದು. ಹಾಗೆಯೇ, ಎಕ್ಕೂರು ಬಳಿ ಮೀನುಗಾರಿಕಾ ಕಾಲೇಜು ಬಳಿಯೂ ಪಾದಾಚಾರಿಗಳಿಗೆ ಹೆದ್ದಾರಿ ದಾಟುವುದಕ್ಕೆ ಪಾದಾಚಾರಿ ಮೇಲುಸೇತುವೆ(FOB) ನಿರ್ಮಿಸಲು ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ. ಈ ಎಲ್ಲ ಕಾಮಗಾರಿಗಳ ಗುತ್ತಿಗೆಯನ್ನು ನ್ಯಾಷನಲ್‌ ಇನ್‌ಫ್ರಾಬಿಲ್ಡ್‌ ಪ್ರೈವೆಟ್‌ ಲಿಮಿಟೆಡ್‌ ತೀರ್ಥಹಳ್ಳಿ ಹಾಗೂ ನ್ಯಾಷನಲ್‌ ಪ್ರಾಜೆಕ್ಟ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆಗೆ ವಹಿಸಲಾಗಿದೆ ಎಂದು ಸಂಸದ ಕ್ಯಾ. ಚೌಟ ಅವರು ವಿವರಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಕ್ಷಿಣ ಕನ್ನಡದ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ನನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆ, ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಇದರಿಂದ ನಮ್ಮ ಜಿಲ್ಲೆಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರ, ಪಾದಾಚಾರಿಗಳಿಗೆ ರಸ್ತೆ ದಾಟುವುದಕ್ಕೆ ಅಗತ್ಯವಿರುವ ಕಡೆ ಸರ್ವೀಸ್‌ ರಸ್ತೆ, ಮೇಲು ರಸ್ತೆಗಳ ನಿರ್ಮಾಣದಂಥಹ ಬಹುವರ್ಷಗಳಿಂದ ಬಾಕಿಯಾಗಿರುವ ಬೇಡಿಕೆಗಳು ಒಂದೊಂದಾಗಿ ಈಡೇರುತ್ತಿರುವುದು ಗಮನಾರ್ಹ. ಆ ಮೂಲಕ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಕೂಡ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಯಡಿ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಕ್ಯಾ. ಚೌಟ ಅವರು ಇದೇವೇಳೆ ಅಭಿಪ್ರಾಯಪಟ್ಟಿದ್ದಾರೆ.

ಹೆದ್ದಾರಿಗಳ ಸುಧಾರಣೆಗೆ ಕ್ಯಾ. ಚೌಟ ನಿರಂತರ ಪ್ರಯತ್ನ

ನವ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಎನ್‌ಎಚ್‌-66 ಹಾಗೂ ಎನ್‌ಎಚ್‌-73ರ ಸುಧಾರಣೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಬ್ರಿಜೇಶ್‌ ಚೌಟ ಅವರು ಸಂಸತ್ತಿನ ಮೊದಲ ಅಧಿವೇಶನದಲ್ಲೇ ವಿಷಯ ಪ್ರಸ್ತಾಪಿಸಿದ್ದರು. ಬಳಿಕ ಅವರು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಕೂಡ ಸಲ್ಲಿಸಿದ್ದರು. ಬಿಸಿ ರೋಡ್‌-ಸುರತ್ಕಲ್‌ ಹೆದ್ದಾರಿ ನಿರ್ವಹಣೆ ಸಮಸ್ಯೆಯಿಂದ ಜನಸಾಮಾನ್ಯರು, ಉದ್ದಿಮೆದಾರರು ಅದರಲ್ಲಿಯೂ ಬಂದರಿಗೆ ಸುಗಮ ಸರಕು ಸಾಗಣೆಗೆ ಏನೆಲ್ಲ ಸವಾಲು-ಸಮಸ್ಯೆ ಎದುರಾಗುತ್ತಿದೆ ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಿದ್ದು, ಆದಷ್ಟು ಬೇಗ ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ವ್ಯವಸ್ಥಿತ ನಿರ್ವಹಣೆ, ಸುರಕ್ಷಿತ ಪ್ರಯಾಣಕ್ಕೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಹೀಗಾಗಿ, ಕ್ಯಾ. ಚೌಟ ಅವರ ನಿರಂತರ ಪ್ರಯತ್ನದಿಂದಾಗಿ ಬಹು ವರ್ಷಗಳಿಂದ ಬಾಕಿಯಾಗಿದ್ದ ಈ ಹೆದ್ದಾರಿಗಳ ವ್ಯವಸ್ಥಿತ ನಿರ್ವಹಣೆಗೆ ಶೀಘ್ರದಲ್ಲೇ ಕಾಯಕಲ್ಪ ದೊರೆಯಲಿದೆ.


Spread the love