Spread the love

ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಬಲೆ ತೆಲಿಪಾಲೆ-ಎಪಿಡಿ ಸಹಯೋಗ

ಮಂಗಳೂರು: ವಿಶ್ವದಾದ್ಯಂತ ತುಳುವರ ಮನಸೂರೆಗೊಂಡಿರುವ ನಮ್ಮಟೀವಿ ಬಲೆ ತೆಲಿಪಾಲೆ ಹಾಸ್ಯ ಕಾರ್ಯಕ್ರಮದ ನಾಲ್ಕನೇ ಆವತರಣಿಕೆ ಸಿದ್ಧವಾಗಿದ್ದು, ಈ ಬಾರಿ ಈ ಹಾಸ್ಯ ಕಾರ್ಯಕ್ರಮವು ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಪೂರಕವಾಗಿ ಸಾಮಾಜಿಕ ಸಂದೇಶ ನೀಡಲಿದೆ.

ನಗರದಲ್ಲಿ ಕಸ ವಿಂಗಡನೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಂಟಿ ಪೆÇಲ್ಯುಷನ್ ಡ್ರೈವ್ (ಎಪಿಡಿ) ಪ್ರತಿಷ್ಠಾನದೊಂದಿಗೆ ಜನಪ್ರಿಯ ಬಲೆ ತೆಲಿಪಾಲೆ ಟಿವಿ ಕಾರ್ಯಕ್ರಮದ ನಿರ್ಮಾಪಕರಾದ ಶಾಸ್ತವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಅವರು ಕೈಜೋಡಿಸಲಿದ್ದಾರೆ.

baletelepale

‘ಸ್ವಚ್ಛ ಮಂಗಳೂರು’ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಹೊಸದಾಗಿ ಆರಂಭಿಸಿರುವ ಅಭಿಯಾನ. ಪರಿಸರದ ಸಂರಕ್ಷಣೆ ಕ್ಷೇತ್ರದಲ್ಲಿ ಜನಜಾಗೃತಿ ಮೂಡಿಸುವ ಪರಿಣತಿ ಹೊಂದಿರುವ ಎಪಿಡಿ ಪ್ರತಿಷ್ಠಾನದ ಸೇವೆಯನ್ನು ಮಂಗಳೂರು ಮಹಾನಗರ ಪಾಲಿಕೆ ಪರವಾಗಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಿಸುವ ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಪ್ರ್ವೈವೆಟ್ ಲಿಮಿಟೆಡ್ ಕಂಪೆನಿ ಪಡೆದುಕೊಂಡಿದೆ.

ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಪ್ರ್ವೈವೆಟ್ ಲಿಮಿಟೆಡ್ ಕಂಪೆನಿ ಅಂಗವಾಗಿ ಘನತ್ಯಾಜ್ಯ ವಿಂಗಡಿಸುವ ಕುರಿತು ಸಾಮೂಹಿಕ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಹೊಣೆಗಾರಿಕೆಯನ್ನು ಎಪಿಡಿ ಪ್ರತಿಷ್ಠಾನಕ್ಕೆ ವಹಿಸಿಕೊಡಲಾಗಿದೆ. ‘ಸ್ವಚ್ಛ ಮಂಗಳೂರು’ ಒಂದು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅರಿವು ಮತ್ತು ಕಸ ನಿರ್ವಹಣಾ ಹೇಗೆ, ಸುಸ್ಥಿರ ನಗರ ನಿರ್ವಹಣೆ ಇತ್ಯಾದಿಗಳನ್ನು ಎಪಿಡಿ ನಿರ್ವಹಿಸುತ್ತಿದೆ. ಜನರಲ್ಲಿ ಅರಿವು ಮೂಡಿಸುವ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಎಪಿಡಿ ನಡೆಸುತ್ತಿದೆ.

ಇತ್ತೀಚೆಗೆ ಬಡಗ ಎಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಬಲೆ ತೆಲಿಪಾಲೆ ಕಾರ್ಯಕ್ರಮದ ಚಿತ್ರೀಕರಣ ಸಂದರ್ಭದಲ್ಲಿ ಎರಡು ಸಂಸ್ಥೆಗಳ ನಡುವಣ ಸಹಯೋಗವನ್ನು ಅಧಿಕೃತವಾಗಿ ಘೋಷಿಸಲಾಯಿತು. ಎಪಿಡಿ ಪ್ರತಿಷ್ಠಾನವು ಕಸ ವಿಂಗಡನೆ ಕುರಿತಾಗಿ ಹೊರತಂದಿರುವ ಪ್ರಚಾರ ಕರಪತ್ರಗಳನ್ನು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮಿ ಬಿಡುಗಡೆ ಮಾಡಿದರು.

ಮಂಗಳೂರು ನಗರದ ಅಭಿವೃದ್ಧಿ ಮತ್ತು ಸ್ವಚ್ಛತೆ ನನ್ನ ಆದ್ಯತೆಗಳಲ್ಲಿ ಒಂದಾಗಿದ್ದು, ಇಂತಹ ಮಹತ್ವದ ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಸಹಯೋಗ ನೀಡಲು ತುಂಬಾ ಸಂತೋಷವಾಗುತ್ತದೆ. ಈ ಜನಪ್ರಿಯ ಕಾರ್ಯಕ್ರಮದ ಮೂಲಕ ಹೆಚ್ಚಿನ ಜನರಿಗೆ ಈ ಸಂದೇಶ ರವಾನೆಯಾಗಲಿ ಎಂದು ಶಾಸ್ತವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿಜಯನಾಥ್ ವಿಠಲ ಶೆಟ್ಟಿ ಹಾರೈಸಿದರು.

ಜನರನ್ನು ವ್ಯಾಪಕವಾಗಿ ತಲುಪುವ ಮಾಧ್ಯಮಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸಾಧ್ಯವಗುತ್ತದೆ. ಪ್ರತಿಷ್ಠಾನವು ಇಂತಹ ಮಹತ್ವದ ವೇದಿಕೆಗಳ ಮೂಲಕ ಸ್ವಚ್ಛ ಮಂಗಳೂರು ಅಭಿಯಾನವನ್ನು ಹೆಚ್ಚು ಜನಪ್ರಿಯಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಎಪಿಡಿ ಸಂಸ್ಥಾಪಕ ಅಬ್ದುಲ್ಲ ಎ ರೆಹೆಮಾನ್ ಹೇಳಿದರು.

ಸುಮಾರು 177 ದೇಶಗಳಲ್ಲಿ ವೀಕ್ಷಕರನ್ನು ಹೊಂದಿರುವ ಬಲೆ ತೆಲಿಪಾಲೆ ಕಾರ್ಯಕ್ರಮದೊಂದಿಗೆ ಕೈಜೋಡಿಸಲು ಸಂತಸವಾಗುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಈ ವರ್ಷ ಶೇಕಡ 30ರಷ್ಟು ಕಸ ವಿಂಗಡನೆ ಗುರಿ ಮುಟ್ಟುವ ಭರವಸೆ ಇದೆ ಎಂದು ರೆಹೆಮಾನ್ ಹೇಳಿದರು.

ಕಾರ್ಯಕ್ರಮದ ಸಂಯೋಜಕರಾದ ವಿಜೆ ನವೀನ್ ಶೆಟ್ಟಿ, ಎಪಿಡಿ ಪ್ರತಿಷ್ಠಾನದ ಅರ್ಜುನ್ ರೈ, ಆಂಟನಿ ವೇಸ್ಟ್ ಕಂಪೆನಿಯ ರಕ್ಷಿತ್ ಶೆಟ್ಟಿ, ನಮ್ಮ ಟೀವಿ ನಿರ್ದೇಶಕ ಡಾ.ಶಿವಶರಣ ಶೆಟ್ಟಿ, ಶಾಸ್ತವು ಶ್ರೀ ಭೂತನಾಥೇಶ್ವರ ಭಜನಾ ಮಂಡಳಿಯ ಮಾನವ್ ಶೆಟ್ಟಿ, ಕಾಂತಪ್ಪ ಶೆಟ್ಟಿ ಮತ್ತತರರು ಉಪಸ್ಥಿತರಿದ್ದರು.


Spread the love