’30 ಗ್ರಾಂ ಗೋಲ್ಡ್’ ಮೂಲಕ ವಂಚನೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

Spread the love

’30 ಗ್ರಾಂ ಗೋಲ್ಡ್’ ಮೂಲಕ ವಂಚನೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ
 

ಪಡುಬಿದ್ರೆ: ಸ್ಥಳೀಯವಾಗಿ ಬ್ಯಾಂಕ್, ಸೊಸೈಟಿಗಳಲ್ಲಿ ’30 ಗ್ರಾಂ ಗೋಲ್ಡ್’ನ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿದೆ.

ಕುಮುಟಾದ ನಿತಿಲ್ ಭಾಸ್ಕರ್ ಶೇಟ್(35), ಸಂಜಯ್ ಶೇಟ್(42), ಸಂತೋಷ್ ಶೇಟ್(39) ಹಾಗೂ ಬೆಳಗಾವಿಯ ಕೈಲಾಸ್ ಗೋರಾಡ(26) ಬಂಧಿತ ಆರೋಪಿಗಳು. ಇವರನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ., ನ್ಯಾಯಾಲಯವು ಬಂಧಿತರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರೆ ಕಂಚಿನಡ್ಕ ನಿವಾಸಿ, ಕೇರಳ ಮೂಲದ ಆರೋಪಿ ರಾಜೀವ್ ಎಂಬಾತನನ್ನು ಕೆಲ ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ನಕಲಿ 916 ಹಾಲ್ ಮಾರ್ಕ್ ಸೀಲ್ ಹಾಕಲು ಬಳಸಲಾಗುತ್ತಿದ್ದ ಸುಮಾರು 3.5 ಲಕ್ಷ ರೂ. ಮೌಲ್ಯದ ಮೆಷಿನ್, ಕಂಪ್ಯೂಟರ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಂಚನೆ ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿ ರಾಜೀವ್ 30 ಗ್ರಾಂ ಗೋಲ್ಡ್ ಬಳಸಿ ಗಲ್ಫ್ ರಾಷ್ಟ್ರಕ್ಕೆ ತೆರಳಿ ಮತ್ತು ಅಲ್ಲಿಂದ ವಾಪಾಸಾಗುವ ವೇಳೆ ಶುದ್ಧ ಚಿನ್ನಾಭರಣ ಧರಿಸಿ ಬರುವ ತನ್ನ ಮೋಸದ ಜಾಲಕ್ಕೆ ಸಹಕರಿಸಲು ತನ್ನ ಗೆಳಯ ಆರೋಪಿ ನಿತಿಲ್ ಭಾಸ್ಕರ್ ಶೇಟ್ ನನ್ನು ಬಳಸಿಕೊಂಡಿದ್ದ. ಕುಮುಟಾದ ಇನ್ನಿಬ್ಬರು ಆರೋಪಿಗಳು ನಕಲಿ ಚಿನ್ನದ 40 ಬಳೆಗಳನ್ನು ತಯಾರಿಸಿಕೊಟ್ಟಿದ್ದರು. ಬೆಳಗಾವಿಯಲ್ಲಿ ನಕಲಿ ಹಾಲ್ ಮಾರ್ಕ್ ಮೊಹರನ್ನು ಹಾಕಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ರಾಜೀವ್ ಸ್ಥಳೀಯವಾಗಿ ವಿತ್ತೀಯ ಸಂಸ್ಥೆಗಳಲ್ಲಿ ಅವುಗಳನ್ನು ಅಡವಿಟ್ಟು ವಂಚಿಸಿದ್ದರಿಂದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು 30 ಗ್ರಾಂ ಗೋಲ್ಡ್ ನ್ನು ಅಸಲಿ ಚಿನ್ನವೆಂದು ನಂಬಿಸಿ ಬ್ಯಾಂಕ್, ಸೊಸೈಟಿಗಳಿಂದ ಚಿನ್ನಾಭರಣ ಈಡಿನ ಸಾಲ ಪಡೆದಿದ್ದ. ಸಾಲದ ಮೊತ್ತ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆ ಚಿನ್ನಾಭರಣವನ್ನು ಏಲಂ ಪ್ರಕ್ರಿಯೆ ನಡೆಸಿದಾಗೂ ಈ ವಂಚನೆ ಬೆಳಕಿಗೆ ಬಂದಿರಲಿಲ್ಲ. ಆದರೆ ಉಡುಪಿಯ ಬಿಡ್ಡುದಾರರೊಬ್ಬರು ಈ ಚಿನ್ನಾಭರಣವನ್ನು ಕತ್ತರಿಸಿ ಪರಿಶೀಲಿಸಿದಾಗ ಆರೋಪಿ ರಾಜೀವ್ ಮತ್ತಾತನ ಪತ್ನಿಯ ಚಿನ್ನಾಭರಣ ಸಾಲದ ಇಡೀ ಪ್ರಕರಣವು ಬೆಳಕಿಗೆ ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪಡುಬಿದ್ರೆಯಲ್ಲಿನ ಇಂಡಸ್ಟ್ರಿಯಲ್ ಬ್ಯಾಂಕಿನ ಪಡುಬಿದ್ರೆ ಶಾಖೆಯಲ್ಲಿ 2022ರ ಸೆ.1ರಿಂದ 2024ರ ಫೆ.26ರವರೆಗೆ ಈ ದಂಪತಿ 180 ಗ್ರಾಂ ನಕಲಿ ಚಿನ್ನವನ್ನಿಟ್ಟು 8.08 ಲಕ್ಷ ಸಾಲ ಪಡೆದಿದ್ದರು. ಸಹಕಾರಿ ಸಂಘವೊಂದರ ಸಿಟಿ ಶಾಖೆಯಿಂದ ಆರೋಪಿಗಳು ಸುಮಾರು 2ವರ್ಷಗಳ ಅವಯಲ್ಲಿ 23 1 ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19 ಲಕ್ಷ ರೂ. ಸಾಲ ಪಡೆದಿದ್ದಾರೆ. ಉಚ್ಚಿಲದ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ಮಾರ್ಚ್ 2023ರಿಂದ ಫೆ. 26, 2024ರ ಅವಧಿಯಲ್ಲಿ 72ಗ್ರಾಂ ಚಿನ್ನ ಅಡವಿಟ್ಟು 2.86 ಲಕ್ಷ ರೂ. ಗಳ ಸಹಿತ ಒಟ್ಟು 29.94 ಲಕ್ಷ ರೂ. ಸಾಲ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love