30 ದಿನಗಳ ಒಳಗೆ ಸಿ.ಆರ್.ಝಡ್ ಮತ್ತು ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ; ಡಿಸಿ ಪ್ರಿಯಾಂಕ ಭರವಸೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೂವತ್ತು ದಿನಗಳ ಒಳಗೆ ಸಿ.ಆರ್.ಝಡ್ ಮತ್ತು ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಹೊಸದಾಗಿ ಮರಳು ದಿಬ್ಬ/ ಬ್ಲಾಕ್ಗಳನ್ನು ಗುರುತಿಸಿ ಅನುಮೋದನೆ ಪಡೆದು ಒಟ್ಟಿಗೆ ಒಂದೇ ಬಾರಿಗೆ ಸಾರ್ವಜನಿಕರಿಗೆ ಮರಳು ದೊರೆಯುವಂತೆ ಅನುಕೂಲ ಮಾಡಿಕೊಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಭರವಸೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಅಕ್ಟೋಬರ್ 22 ರಂದು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘ(ರಿ) ರವರು ಉಡುಪಿ ಜಿಲ್ಲಾಧಿಕಾರಿಯವರ ಕಛೇರಿಯ ಮುಂಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನಾಕಾರರು ಜಿಲ್ಲೆಯಲ್ಲಿ ಉಂಟಾಗಿರುವ ಮರಳು ಸಮಸ್ಯೆ ಪರಿಹಾರವಾಗದೇ ಬಹಳಷ್ಟು ಸಂಕಷ್ಟದಲ್ಲಿದ್ದೇವೆ ಎಂದು ಪ್ರತಿಭಟನೆ ನಡೆಸುತ್ತಿದ್ದಾಗ, ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ ಮತ್ತು ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ರವರು ಪ್ರತಿಭಟನಾಕಾರರರೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿರುತ್ತಾರೆ. ಈಗಾಗಲೇ ಸಿ.ಆರ್.ಝಡ್ ಪ್ರದೇಶದಲ್ಲಿ ಗುರುತಿಸಿರುವ 7 ಮರಳು ದಿಬ್ಬಗಳಿಂದ ಕೇವಲ 17,526 ಮೆ.ಟನ್ನಷ್ಟು ಮರಳು ಲಭ್ಯವಿದ್ದು ಸದರಿ ಮರಳನ್ನು ಸಾಗಾಟ ಮಾಡಿದ್ದಲ್ಲಿ ಸಾರ್ವಜನಿಕರು ದುಬಾರಿ ಬೆಲೆ ಕೊಟ್ಟು ಮರಳು ಖರೀದಿಸಬೇಕಾಗಿರುತ್ತದೆ. ಆದ್ದರಿಂದ ಸಿ.ಆರ್.ಝಡ್ ಮತ್ತು ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಹೊಸದಾಗಿ ಮರಳು ದಿಬ್ಬ/ ಬ್ಲಾಕ್ಗಳನ್ನು ಗುರುತಿಸಿ ಅನುಮೋದನೆ ಪಡೆದು ಒಟ್ಟಿಗೆ ಒಂದೇ ಬಾರಿಗೆ ಸಾರ್ವಜನಿಕರಿಗೆ ಮರಳು ದೊರೆಯುವಂತೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿರುತ್ತಾರೆ ಹಾಗೂ ನಮ್ಮ ಬೇಡಿಕೆಗಳನ್ನು ಪೂರೈಸದಿದ್ದಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಪ್ರತಿಭಟನಾಕಾರರ ಸಮ್ಮುಖದಲ್ಲಿ ಮೇಲಾಧಿಕಾರಿಯವರ ಸೂಚನೆಯಂತೆ ಈ ಕೆಳಗಿನಂತೆ ನಿರ್ಣಯವನ್ನು ಕೈಗೊಳ್ಳಲಾಗಿರುತ್ತದೆ.
- ಉಡುಪಿ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯದಲ್ಲಿ ಈಗಾಗಲೇ ಮರಳು ದಿಬ್ಬಗಳನ್ನು ಗುರುತಿಸಿ KSCZMA, ಬೆಂಗಳೂರು ರವರಿಂದ ಅನುಮೋದನೆ ಪಡೆದಿರುವ ಪ್ರದೇಶಗಳಲ್ಲಿ ಹಾಗೂ ನಾನ್ ಸಿ.ಆರ್.ಝಡ್ ಪ್ರದೇಶಗಳಲ್ಲಿ ಹೊಸದಾಗಿ ಮರಳು ಬ್ಲಾಕ್ಗಳನ್ನು ಗುರುತಿಸಿ ಒಟ್ಟಿಗೆ ಒಂದೇ ಬಾರಿಗೆ ಸಾರ್ವಜನಿಕರಿಗೆ ಮರಳು ದೊರೆಯುವಂತೆ ಅನುಕೂಲ ಮಾಡಿಕೊಡುವಂತೆ ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘರವರು ಸಲ್ಲಿಸಿರುವ ಮನವಿಗೆ ಜಿಲ್ಲೆಯಲ್ಲಿ ನಿಯಮಾವಳಿಯಂತೆ ಮರಳು ಬ್ಲಾಕ್ಗಳನ್ನು ಗುರುತಿಸಿ ಅನುಮೋದನೆ ಪಡೆಯಲು ಕನಿಷ್ಠ 30 ದಿನಗಳ ಕಾಲಾವಕಾಶ ಬೇಕೆಂದು ತಿಳಿಸಲಾಗಿರುತ್ತದೆ.
- ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಮರಳನ್ನು ಪೂರೈಸಲು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಬೇಕೆಂದು ಕೋರಿರುವುದಕ್ಕೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಉಡುಪಿ ಜಿಲ್ಲೆಗೆ ಮರಳನ್ನು ನಿಯಮಾವಳಿಯಂತೆ ಸಾಗಾಟ ಪರವಾನಿಗೆಯೊಂದಿಗೆ ಮರಳನ್ನು ಪೂರ್ಯಸುವ ಬಗ್ಗೆ ಪತ್ರ ಬರೆಯಲಾಗಿದೆ.
- ಉಡುಪಿ ಜಿಲ್ಲೆಯ ನಾನ್ ಸಿ.ಆರ್.ಝಡ್ ನದಿ ಪಾತ್ರಗಳಲ್ಲಿ ಮರಳು ಬ್ಲಾಕ್ಗಳನ್ನು ನಿಯಮಾವಳಿಯಂತೆ ಗುರುತಿಸಲು ಸಾಧ್ಯವಾಗದಿರುವುದರಿಂದ ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಮರಳು ಬ್ಲಾಕ್ಗಳನ್ನು ಗುರುತಿಸಲು ನಿಯಮಾವಳಿಯಲ್ಲಿ ತಿದ್ದುಪಡಿ ತರುವ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿರುತ್ತದೆ.
- ಕುಂದಾಪುರ ಮತ್ತು ಬೈಂದೂರು ತಾಲೂಕಿನ ಕರಾವಳಿ ನಿಯಂತ್ರಣ ವಲಯ ಪ್ರದೇಶದ ನದಿ ಪಾತ್ರಗಳ ಜೈವಿಕ ಸೂಕ್ಷ್ಮ ಪ್ರದೇಶಗಳಲ್ಲಿ ಬರುವುದರಿಂದ ಸದರಿ ಮಿತಿಯನ್ನು ಕಡಿಮೆಗೊಳಿಸಬೇಕೆಂದು ಸಲ್ಲಿಸಿರುವ ಮನವಿಗೆ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಿ.ಆರ್.ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ ಬರುವ ಜೈವಿಕ ಸೂಕ್ಷ್ಮ ಪ್ರದೇಶಗಳ ಮಿತಿಯನ್ನು ಕಡಿಮೆಗೊಳಿಸಿ ತಿದ್ದುಪಡಿ ತರುವ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿದೆ.
- ತಾಲ್ಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಟೆಂಡರ್ ಪ್ರಕ್ರಿಯೆ ಕೈಬಿಟ್ಟು, ಈ ಐದು ವರ್ಷಗಳ ಹಿಂದೆ ನೀಡಲಾಗುತ್ತಿರುವ ಪರವಾನಿಗೆಯಂತೆ ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿಯೇ ಪರವಾನಿಗೆ ನೀಡಿ, ಸ್ಥಳೀಯರಿಗೆ ಹೆಚ್ಚಿನ ಆಧ್ಯತೆ ನೀಡಲು ಹಾಗೂ ಒಂದು ವೇಳೆ ಟೆಂಡರ್ ಮಾಡುವುದಾದರೆ 5 ವರ್ಷಗಳ ಪರವಾನಿಗೆ ಪಡೆದವರು ಒಂದು ಗ್ರಾಮ ಪಂಚಾಯತಿಯಲ್ಲಿ ಇಲ್ಲದಿದ್ದಲ್ಲಿ ಅದೇ ಗ್ರಾಮ ಪಂಚಾಯತ್ನಲ್ಲಿ ವಾಸ ಇರುವ ಹೊಸಬರಿಗೆ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂದು ಕೋರಿರುತ್ತಾರೆ. ಇದಕ್ಕೆ ಕೆ.ಎಂ.ಎಂ.ಸಿ.ಆರ್ 1994 ರ ತಿದ್ದುಪಡಿ ಅಧಿನಿಯಮ 2017 ರ 31ZB-A ರಲ್ಲಿ ತಿದ್ದುಪಡಿ ತರುವ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.