ಶೋಷಿತರ ಮತ್ತು ದುರ್ಬಲರ ಏಳಿಗೆ ಅಂಬೇಡ್ಕರ್ ಗುರಿ- ಪ್ರಮೋದ್ ಮಧ್ವರಾಜ್
ಉಡುಪಿ: ದೇಶದಲ್ಲಿ ಎಲ್ಲಾ ವರ್ಗದಲ್ಲಿನ ದುರ್ಬಲರ ಮತ್ತು ಶೋಷಿತರ ಏಳಿಗೆಗಾಗಿ ಅಂಬೇಡ್ಕರ್ ಶ್ರಮಿಸಿದ್ದರು ಎಂದು ಮೀನುಗಾರಿಕಾ , ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಶುಕ್ರವಾರ ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 126 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ದಲಿತ ವರ್ಗದ ಏಳಿಗೆಗೆ ಮಾತ್ರ ಶ್ರಮಿಸಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ, ಆದರೆ ಅವರು ದಲಿತರು ಸೇರಿದಂತೆ, ಶೋಷಿತರು, ದುರ್ಬಲ ವರ್ಗದವರು, ಮಹಿಳಎಯರು, ಕಾಮಿಕರು ಎಲ್ಲರ ಏಳಿಗೆಗಾಗಿ ಶ್ರಮಿಸಿದ್ದರು, ಮೀಸಲಾತಿಯ ಮೂಲಕ ಸಮಾಜದಲ್ಲಿನ ಬಡ ಮತ್ತು ದುರ್ಬಲರ ಅಭಿವೃದಿಗಾಗಿ ಸಂವಿಧಾನ ರಚೆನೆಯಲ್ಲಿ ಅವಕಾಶ ನೀಡಿದ್ದರು, ಆದರೆ ಅಂಬೇಡ್ಕರ್ ಅವರು ರೂಪಿಸಿದ ಕಾರ್ಯಕ್ರಮಗಳ ಯೋಜನೆಗಳು ಕೆಲವೇ ಕುಟುಂಬಗಳಿಗೆ ಮಾತ್ರ ತಲುಪುತ್ತಿದ್ದು, ಅದನ್ನು ಅರ್ಹರಿಗೆ ತಲುಪಿಸುವಲ್ಲಿ ಸರಕಾರ ಮತ್ತು ಸಂಘಟನೆಗಳು , ಜನಪ್ರತಿನಿಧಿಗಳು ಪ್ರಯತ್ನಿಸಬೇಕಿದೆ ಎಂದು ಪ್ರಮೋದ್ ತಿಳಿಸಿದರು.
ರಾಜ್ಯದ ಜನಸಂಖ್ಯೆಯ ಶೇ.24 ರಷ್ಟು ಎಸ್.ಸಿ ಮತ್ತು ಎಸ್ಟಿ ಸಮುದಾಯದ ಅಬಿವೃದ್ದಿಗಾಗಿ ರಾಜ್ಯ ಸರ್ಕಾರ ಕಳೆಸ ಸಾಲಿನಲ್ಲಿ 18000 ಕೋಟಿ ರೂ ಗಳನ್ನು ಮೀಸಲಿಟ್ಟಿದ್ದು, ಈ ವರ್ಷ 27000 ಕೋಟಿ ಗಳನ್ನು ಮೀಸಲಿಟ್ಟಿದೆ , ಎಲ್ಲಾ ಇಲಾಖೆಗಳಲ್ಲಿ ಈ ಸಮುದಾಯದ ಅಭಿವೃದ್ದಿಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಅಂಬೇಡ್ಕರ್ ಅವರು ದುರ್ಬಲ ಮತ್ತು ಶೋಷಿತ ಜನಾಂಗದ ನಾಯಕ ಮಾತ್ರವಲ್ಲದೇ ಶಿಕ್ಷಣ ತಜ್ಞನಾಗಿದ್ದು ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು, ಅವರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಜೀವನದ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಡಾ. ವಾಸುದೇವ ಬೆಳ್ಳೆ ಮಾತನಾಡಿ, ಅಂಬೇಡ್ಕರ್ ಅವರನ್ನು ಗಲಿತ ವರ್ಗದ ನಾಯಕ ಎಂಬ ಸೀಮಿತ ನೆಲೆಯಲ್ಲಿ ಬಿಂಬಿಸಲಾಗುತ್ತಿದೆ ಆದರೆ ಎಲ್ಲ ಸಮುದಾಯಗಳ ಬಗ್ಗೆ ಚಿಂತನೆ ನಡೆಸಿದ್ದ ಅವರು ಆರ್ಥಿಕ ತಜ್ಞ, ಬ್ಯಾಂಕಿಂಗ್ ಬಗ್ಗೆ ಹೊಂದಿದ್ದ ಕಲ್ಪನೆ, ಕಾನೂನು ವಿಚಾರದಲ್ಲಿ ಆಳವಾದ ಜ್ಞಾನ, ಕಾರ್ಮಿಕರ ಪರವಾಗಿ ರೂಪಿಸಿದ ಕಾನೂನು ಇವುಗಳ ಬಗ್ಗೆ ಚಿಂತನೆ ನಡೆಸಬೇಕಿದೆ, ಜಾತೀಯತೆಯ ಮನೋಬಾವದಿಂದ ಹೊರಬಂದ ಅವರನ್ನು ಅಭ್ಯಸಿಸಬೇಕಿದೆ, ಯಾವುದೇ ವ್ಯಕ್ತಿ ತನ್ನ ದೇಹದ ಕಾರಣದಿಂದ ವಿಧಿಸಲಾಗಿರುವ ನಿರ್ಭಂದದಿಂದ ಹೊರ ಬಂದು ಜೀವಿಸುವ ಸ್ವಾತಂತ್ರ್ಯವೇ ನಿಜವಾದ ಸ್ವಾತ್ರಂತ್ರ್ಯ ಎಂದು ನಂಬಿದ್ದರು, ವ್ಯಕ್ತಿಗೆ ಸ್ವಾಭಿಮಾನ ಮುಖ್ಯ, ಸ್ವಾಬಿಮಾನ ಶಿಕ್ಷಣದಿಂದ ಮಾತ್ರ ಮೂಡಲು ಸಾಧ್ಯ ಎಂದು ನಂಬಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳನ್ನು ಸಾಧನೆ ಮಾಡಿದವರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಹಾಗೂ ಇತರೆ ಸವಲತ್ತು ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿ.ಪಂ. ಸಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ನಗರಸಭೆಯ ಉಪಾಧ್ಯಕ್ಷೆ ಸಂಧ್ಯಾ , ತಾ.ಪಂ.ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್,ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಡು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಅಪರ ಜಿಲ್ಲಾದಿಕಾರಿ ಜಿ.ಅನುರಾಧ, ತಹಸೀಲ್ದಾರ್ ಮಹೇಶ್ಚಂದ್ರ ಉಪಸ್ಥಿತರಿದ್ದರು.
ಶಂಕರ್ ದಾಸ್ ಚಂಡ್ಕಳ ಮತ್ತು ಬಳಗ ಇವರಿಂದ ಅಂಬೇಡ್ಕರ್ ಕುರಿತ ಗೀತಗೋಷ್ಠಿ ಕಾರ್ಯಕ್ರಮ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಎನ್. ರಮೇಶ್ ಸ್ವಾಗತಿಸಿದರು.