ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು 30ನೇ ವಾರದ ಅಭಿಯಾನ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 30 ನೇ ವಾರದಲ್ಲಿ ಜರುಗಿದ 11 ಸ್ವಚ್ಛತಾ ಕಾರ್ಯಕ್ರಮಗಳ ವರದಿ
351) ರಾವ್ ಅಂಡ್ ರಾವ್ ವೃತ್ತ: ಕ್ಯಾಂಪ್ಕೋ ಲಿಮಿಟೆಡ್ ಸಹಯೋಗದಲ್ಲಿ ರಾವ್ ಆಂಡ್ ರಾವ್ ಸರ್ಕಲ್ ನಿಂದ ಬಂದರ್ ಮುಖ್ಯರಸ್ತೆಯ ವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಬೆಳಿಗ್ಗೆ ಏಳು ಗಂಟೆಗೆ ಅಭಿಯಾನಕ್ಕೆ ಕ್ಯಾಂಪ್ಕೋ ಅಧ್ಯಕ್ಷ ಶ್ರೀ ಸತೀಶ್ ಚಂದ್ರ ಹಾಗೂ ಶ್ರೀ ಸುರೇಶ್ ಭಂಡಾರಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರಾವ್ ಅಂಡ್ ರಾವ್ ವೃತ್ತದಿಂದ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಲಾಯಿತು. ಸುಮಾರು ನೂರು ಜನ ಕ್ಯಾಂಪ್ಕೋ ಸಿಬ್ಬಂದಿ ಹಾಗೂ ಸ್ವಚ್ಛ ಮಂಗಳೂರು ಅಭಿಯಾನದ ಹಿರಿಯ ಕಾರ್ಯಕರ್ತರು ಸುಮಾರು ಎರಡೂವರೆ ಗಂಟೆಗಳ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಅಭಿಯಾನದ ಮುಖ್ಯ ಸಂಯೋಜಕ ಶ್ರೀ ಉಮಾನಾಥ್ ಕೋಟೆಕಾರ್ ಅಭಿಯಾನವನ್ನು ಮಾರ್ಗದರ್ಶಿಸಿದರು ಹಾಗೂ ಶ್ರೀ ಟಿ ಎಸ್ ಭಟ್ ಅಭಿಯಾನವನ್ನು ಸಂಯೋಜಿಸಿದರು.
352) ಕರಂಗಲಪಾಡಿ: ಶ್ರೀ ಸುಬ್ರಮಣ್ಯ ಸಭಾದ ಕಾರ್ಯಕರ್ತರು ಹಾಗೂ ಸ್ಥಳಿಯರ ಸಹಕಾರದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಧರ ಶಾಸ್ತ್ರಿ ಹಾಗೂ ಪ್ರಭಾಕರ್ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಕಾಂತ ರಾವ್ ನೇತೃತ್ವದಲ್ಲಿ ಕಾರ್ಯಕರ್ತರು ಕರಂಗಲಪಾಡಿ ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆಯನ್ನು ಹಸನುಗೊಳಿಸಿದರು. ಅಲ್ಲಲ್ಲಿ ಬೆಳೆದಿದ್ದ ಹುಲ್ಲನ್ನು ಕತ್ತರಿಸಿ ತೆಗೆಯಲಾಯಿತು. ಶ್ರೀ ಮನೀಶ್ ರಾವ್, ಕರುಣ ಬೆಳ್ಳೆ ಹಾಗೂ ಪ್ರದೀಪ ರಾವ್ ಸೇರಿದಂತೆ ಸುಮಾರು ಐವತ್ತು ಜನರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
353) ಭವಂತಿ ರಸ್ತೆ: ಟೀಂ ಇನ್ಸಪಿರೇಶನ್ ಯುವಕರು ಪೋಲಿಸ್ ಅಧಿಕಾರಿ ಶ್ರೀ ಮದನ್ ನೇತೃತ್ವದಲ್ಲಿ ಭವಂತಿ ಸ್ಟ್ರೀಟ್‍ನಿಂದ ಕಾರ್‍ಸ್ಟ್ರೀಟ್ ವರೆಗೂ ಸ್ವಚ್ಛತೆಯನ್ನು ಕೈಗೊಂಡರು. ಶ್ರೀ ಪ್ರಸನ್ನಕುಮಾರ ಹಾಗೂ ಶ್ರೀ ನವೀನ್ ಕುಡುಪು ಅಭಿಯಾನಕ್ಕೆ ಚಾಲನೆ ನೀಡಿದರು. ಮೊದಲಿಗೆ ರಸ್ತೆಯನ್ನು ಸ್ವಚ್ಛಗೊಳಿಸಿ ತದನಂತರ ತೆರೆದ ತೋಡುಗಳಲ್ಲಿ ಸಂಗ್ರಹವಾಗಿದ್ದ ಹಳೆಯ ಸಾಮಾನು ಸಹಿತವಾದ ತ್ಯಾಜ್ಯವನ್ನು ಹೊರತೆಗೆಯಲಾಯಿತು. ಜೊತೆಗೆ ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ತೆಗೆಯಲಾಯಿತು.
354) ಬೋಳಾರ: ನಿವೇದಿತಾ ಬಳಗದ ಸದಸ್ಯರಿಂದ ಬೋಳಾರ ಮುಖ್ಯ ಬೀದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಶ್ರೀ ರಘುರಾಮ್ ಉಪಾಧ್ಯಾಯ ಹಾಗೂ ಶ್ರೀಮತಿ ಲಲಿತಾ ಉಪಾಧ್ಯಾಯ ಸ್ವಚ್ಛತಾ ಅಭಿಯಾನವನ್ನು ಚಾಲನೆಗೊಳಿಸಿದರು. ಮುಖ್ಯರಸ್ತೆ ಹಾಗೂ ಬದಿಯ ತೋಡುಗಳಲ್ಲಿದ್ದ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ಅಲ್ಲದೇ ಬ್ಯಾನರ್ ಪೋಸ್ಟರ್ ಗಳನ್ನು ಕಿತ್ತು ಶುಚಿಗೊಳಿಸಲಾಯಿತು.
355) ಎ.ಬಿ. ಶೆಟ್ಟಿ ವೃತ್ತ: ಹಿಂದೂ ವಾರಿಯರ್ಸ್ ತಂಡದ ಸದಸ್ಯರಿಂದ ಎಬಿ ಶೆಟ್ಟಿ ವೃತ್ತದಿಂದ ಪಾಂಡೇಶ್ವರಕ್ಕೆ ಸಾಗುವ ಮಾರ್ಗಗಳನ್ನು ಸ್ವಚ್ಛಗೊಳಿಸಲಾಯಿತು. ಸಿಂಡಿಕೇಟ್ ಸದಸ್ಯ ಶ್ರೀ ಹರೀಶ್ ಆಚಾರ್ ಹಾಗೂ ಶ್ರೀ ದಿಲ್‍ರಾಜ್ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತೀಯ ವಿದ್ಯಾಭವನದೆದುರಿನ ರಸ್ತೆ ಹಾಗೂ ಮಾರ್ಗವಿಭಾಜಕಗಳನ್ನು ಸ್ವಚ್ಛಗೊಳಿಸಲಾಯಿತು. ಅಲ್ಲದೇ ಅಲ್ಲಿರಾಶಿಯಾಗಿ ಬಿದ್ದಿದ್ದ ಕಟ್ಟಡ ತ್ಯಾಜ್ಯವನ್ನು ತೆರೆವುಗೊಳಿಸಲಾಯಿತು. ಶ್ರೀ ಶಿವು ಪುತ್ತೂರು ಹಾಗೂ ಶ್ರೀ ಯೋಗಿಶ್ ಕಾಯರ್ತಡ್ಕ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
356) ವಿ ಟಿ ರಸ್ತೆ: ಶ್ರೀಗೋಕರ್ಣ ಮಠದ ಭಕ್ತರು ಹಾಗೂ ಸ್ಥಳೀಯ ನಾಗರಿಕರು ವಿಠೋಭಾ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಶ್ರೀ ದಾಮೋದರ ಭಟ್ ಹಾಗೂ ಶ್ರೀ ಜಗದೀಶ್ ಶೆಣೈ ಅಭಿಯಾನಕ್ಕೆ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ಕಮಲಾಕ್ಷ ಪೈ ಅಭಿಯಾನದ ಉಸ್ತುವಾರಿ ವಹಿಸಿದ್ದರು.
357) ಜೆಪ್ಪು: ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಜೆಪ್ಪು ಮಾರ್ಕೆಟ್ ಬಳಿ ಸ್ವಚ್ಛತಾ ಕಾರ್ಯ ನೆರವೇರಿತು. ಕಳೆದ ವಾರ ಪೋಸ್ಟರ್ ತೆಗೆದು ಸ್ವಚ್ಛಗೊಳಿಸಿದ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಅಂದಗೊಳಿಸಲಾಯಿತು. ತದನಂತರ ಕಸ ಬಿಳುವ ಸ್ಥಳಗಳನ್ನು ಪುಟ್ಟ ಗಾರ್ಡನ್ ನ್ನಾಗಿ ಪರಿವರ್ತಿಸಲಾದ ಸ್ಥಳಗಳನ್ನು ನಿರ್ವಹಣೆ ಮಾಡಲಾಯಿತು. ಶ್ರೀ ಪುನೀತ್ ಹಾಗೂ ರೂಪೇಶ್ ಅಭಿಯಾನವನ್ನು ಸಂಯೋಜಿಸಿ, ಯಶಸ್ವಿಗೊಳಿಸಿದರು.
358) ಪಡೀಲ್: ಯೂಥ ಸೆಂಟರ್ ಸದಸ್ಯರಿಂದ ಪಡೀಲ್ ಜಂಕ್ಷನ್ ನಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀ ರಘುವೀರ್ ಗಟ್ಟಿ ಹಾಗೂ ಶ್ರೀ ಮೋಹನ್ ಪಡೀಲ್ ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಶ್ರೀ ಉದಯ ಕೆ ಪಿ ನೇತೃತ್ವದಲ್ಲಿ ಪಡೀಲ್ ಜಂಕ್ಷನನಿಂದ ಬಟ್ಲಗುಡ್ಡೆ ಶಾಂತಿನಗರದವರೆಗಿನ ಪ್ರದೇಶವನ್ನು ಸ್ವಚ್ಛ ಮಾಡಲಾಯಿತು. ಸ್ಥಳೀಯ ನಿವಾಸಿಗಳು ಅಭಿಯಾನಕ್ಕೆ ಸಹಕಾರ ನೀಡಿದರು.
359) ಶಿವಭಾಗ: ಸ್ವಚ್ಛ ಶಿವಭಾಗ ಟೀಂ ಸದಸ್ಯರಿಂದ ಶಿವಭಾಗ 3ನೇ ಅಡ್ದರಸ್ತೆಯಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಮೋಹನ್ ಮೆಂಡನ್ ಹಾಗೂ ಶ್ರೀ ರವಿಂದ್ರ ಶೆಟ್ಟಿ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಶ್ರೀಮತಿ ಶೀಲಾ ಜಯಪ್ರಕಾಶ ಹಾಗೂ ಶ್ರೀಮತಿ ಚಂದ್ರಕಲಾ ದೀಪಕ ನೇತೃತ್ವದಲ್ಲಿ 3 ಮತ್ತು 4 ನೇ ಕ್ರಾಸ್ ರಸ್ತೆಗಳನ್ನು ಸ್ವಚ್ಛ ಮಾಡಲಾಯಿತು. ಅನೇಕ ಅಂಗಡಿ ವ್ಯಾಪಾರಿಗಳು ಅಭಿಯಾನದಲ್ಲಿ ಶ್ರಮದಾನ ಮಾಡಿದರು.
360) ಅತ್ತಾವರ: ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಅತ್ತಾವರ ರೋಟರಿ ಕ್ಲಬ್‍ನಿಂದ ಉಮಾಮಹೇಶ್ವರಿ ದೇವಸ್ಥಾನದ ವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಶ್ರೀ ಬಾಲಕೃಷ್ಣ ಶೆಟ್ಟಿ ಹಾಗೂ ಶ್ರೀ ರಾಜೇಶ್ ಅತ್ತಾವರ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಸುಮಾರು ಎರಡು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ಜರುಗಿತು. ಶ್ರೀ ಅಕ್ಷಿತ್ ಅತ್ತಾವರ ಕಾರ್ಯಕ್ರಮ ಸಂಯೋಜನೆ ಮಾಡಿದರು.
361) ಎಮ್ಮೆಕೆರೆ: ಶ್ರೀಶಾರದಾ ಮಹಿಳಾ ವೃಂದದ ಸದಸ್ಯರಿಂದ ಎಮ್ಮೆಕೆರೆ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಚಾರ್ಯರಾದ ಶ್ರೀ ಸತೀಶ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಮ್ಮೆಕೆರೆ ಮುಖ್ಯರಸ್ತೆಯಲ್ಲಿ ಸ್ವಚ್ಛತೆ ಪ್ರಾರಂಭಿಸಿ ಶ್ರೀನಿವಾಸ್ ಕಾಲೇಜಿನ ಮುಂಭಾಗದ ವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್ ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಅನೇಕ ಜನ ಹಿರಿಯ ಮಹಿಳೆಯರು ಸ್ವಚ್ಛತೆಯಲ್ಲಿ ಕೈಜೋಡಿಸಿದ್ದು ವಿಶೇಷವಾಗಿತ್ತು. ಶ್ರೀಮತಿ ಚಿತ್ರಾ ಪ್ರಭು ಅಭಿಯಾನವನ್ನು ಸಂಯೊಜಿಸಿದರು.
ಅರ್ಥ್ ಟು ಅರ್ಥ್ : ವಿಶೇಷ ಜಾಗೃತಿ ಕಾರ್ಯಕ್ರಮ: ಶ್ರೀಅಂಬಾಮಹೇಶ್ವರಿ ಭಜನಾ ಮಂದಿರದಲ್ಲಿ ಮಣ್ಣಿಂದ ಮಣ್ಣಿಗೆ ಎಂಬ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಶ್ರೀಮತಿ ನಂದಿನಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಮನೆಯಲ್ಲಿಯೇ ಕಸದ ನಿರ್ವಹಣೆ, ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದು ಹೇಗೆ? ಹಾಗೂ ಕಸದ ವಿಂಗಡಣೆಯ ಪ್ರಾಮುಖ್ಯತೆ ಮತ್ತಿತರ ವಿಷಯಗಳ ಕುರಿತು ತಿಳಿಸಿಕೊಟ್ಟರು. ಸಂಯೋಜಕ ಶ್ರೀ ಉಮಾನಾಥ್ ಕೋಟೆಕಾರ್ ಸ್ವಾಗತಿಸಿ, ಪ್ರಸ್ತಾಪಿಸಿದರು.
I hope that the amazing work done by these volunteers don’t go waste. These guys are real heroes in a city where things are divided on religious and political lines. A quick look at the report and participants prove my point. I truly hope that a good sense prevails among other organizations and communities and they step forward to do their bit to make our city cleaner and greener. Thanks again for this portal for proving the overage these volunteers deserve.