40 ರು. ಶುಲ್ಕ ಬದಲಿಗೆ 4 ಲಕ್ಷ ರು. ಮೊತ್ತಕ್ಕೆ ಸ್ವೈಪ್ ಮಾಡಿದ ಟೋಲ್ ಸಿಬ್ಬಂದಿ!
ಉಡುಪಿ: ಇಲ್ಲಿನ ಹೈವೇ ಟೋಲ್ ನಲ್ಲಿ ಶುಲ್ಕ ತುಂಬಲು ವೈದ್ಯರೊಬ್ಬರ ಡೆಬಿಟ್ ಕಾರ್ಡನ್ನು ಸ್ವೈಪ್ ಮಾಡಿದ ಟೋಲ್ ಸಿಬ್ಬಂದಿಯೊಬ್ಬ 40 ರು. ಬದಲಿಗೆ 4 ಲಕ್ಷ ರು. ಮೊತ್ತಕ್ಕೆ ಶುಲ್ಕ ತುಂಬಿಸಿಕೊಂಡಿರುವ ಕುತೂಹಲಕಾರಿ ಘಟನೆ ಮಂಗಳೂರಿನ ವ್ಯಾಪ್ತಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ ಮೈಸೂರಿನಿಂದ ಮುಂಬೈಗೆ ತಮ್ಮ ಕಾರಿನಲ್ಲಿ ಹೊರಟಿದ್ದ ವೈದ್ಯರೊಬ್ಬರು ಗುಂಡ್ಮಿ ಟೋಲ್ ಗೇಟಿನ ಬಳಿ ಬಂದಾಗ ಶುಲ್ಕ ಕಟ್ಟಲು ಸರಿಯಾದ ಚಿಲ್ಲರೆ ಇಲ್ಲದೆ ತಮ್ಮಲ್ಲಿದ್ದ ಡೆಬಿಟ್ ಕಾರ್ಡನ್ನು ನೀಡಿದ್ದಾರೆ.
ಟೋಲ್ ಕಟ್ಟಿದ ನಂತರ ರಿಸೀದಿಯೊಂದಿಗೆ ತಮ್ಮ ಕಾರ್ಡನ್ನೂ ಹಿಂಪಡೆದ ವೈದ್ಯರು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಕೆಲ ನಿಮಿಷಗಳ ನಂತರ, ಟೋಲ್ ನಲ್ಲಿ ಶುಲ್ಕ ಕಟ್ಟಿದ್ದ ಬಗ್ಗೆ ಬ್ಯಾಂಕ್ ನಿಂದ ಅವರ ಮೊಬೈಲ್ ಗೆ ಎಸ್ ಎಂಎಸ್ ಬಂದಿದೆ.
ಅವರ ಬ್ಯಾಂಕ್ ಖಾತೆಯಿಂದ 4 ಲಕ್ಷ ರು. ಮೊತ್ತವನ್ನು ಟೋಲ್ ನಲ್ಲಿ ಕಟ್ಟಿರುವುದಾಗಿ ಸಂದೇಶದಲ್ಲಿ ಹೇಳಲಾಗಿದೆ. ಆ ಎಸ್ ಎಂಎಸ್ ನೋಡಿದ ಕೂಡಲೇ ವೈದ್ಯರು ಅವಾಕ್ಕಾಗಿದ್ದಾರೆ.
ತಕ್ಷಣವೇ ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಟೋಲ್ ನತ್ತ ಆಗಮಿಸಿದ ಅವರು, ಟೋಲ್ ಸಿಬ್ಬಂದಿಯನ್ನು ಭೇಟಿ ಮಾಡಿ ಅವರಿಂದಾಗಿರುವ ಅಚಾತುರ್ಯವನ್ನು ಗಮನಕ್ಕೆ ತಂದಾಗ, ಟೋಲ್ ಸಿಬ್ಬಂದಿ ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ವೈದ್ಯರಿಗೆ ಉತ್ತರಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ಸಿಬ್ಬಂದಿಯೊಡನೆ ನಡೆಸಿದ ಚರ್ಚೆಯು ವ್ಯರ್ಥವಾದ ಹಿನ್ನೆಲೆಯಲ್ಲಿ ವೈದ್ಯರು, ಅಲ್ಲಿಂದ ಐದು ಕಿ.ಮೀ. ದೂರದಲ್ಲಿರುವ ಕೋಟಾ ಪೋಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.
ಆನಂತರ, ಪೊಲೀಸರು ಟೋಲ್ ಸಿಬ್ಬಂದಿಯನ್ನು ಕರೆದು ವಿಚಾರಿಸಿದಾಗಿ ಟೋಲ್ ಸಿಬ್ಬಂದಿ ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಆನಂತರ ಮರುದಿನ, 3,99,960 ರು. ಹಣವನ್ನು ವೈದ್ಯರ ಖಾತೆಗೆ ಜಮೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಕೃಪೆ: ಒನ್ ಇಂಡಿಯಾ