400 ಮಂದಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದ ಕುಂದಾಪುರ ಉಪವಿಭಾಗ ಪೊಲೀಸರು
ಕುಂದಾಪುರ: ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ. ಆದರೆ ಕೋವಿಡ್ 19 ತಡೆಗಟ್ಟುವ ಕಾರ್ಯದಲ್ಲಿಆಶಾಕಾರ್ಯಕರ್ತೆಯರು ಹಗಲಿರುಳು ದುಡಿಯುತ್ತಿದ್ದು, ಅಂತಹ ಸುಮಾರು 400 ಕಾರ್ಯಕರ್ತೆಯರಿಗೆ ದಿನಸಿ ವಸ್ತುಗಳನ್ನು ನೀಡುವುದರ ಮೂಲಕ ಮಾನವೀಯತೆ ತೋರಿದ್ದಾರೆ.
ಕೊರೊನಾ ತಡೆಗಾಗಿ ಆಶಾಕಾರ್ಯಕರ್ತೆಯರು ಸೂಕ್ತ ವಾಹನ ಸೌಕರ್ಯ ಇಲ್ಲದಿದ್ದರೂ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಅವರ ಸೇವಾ ಮನೋಭಾವಕ್ಕೆ ಗೌರವ ನೀಡುವ ಸಲುವಾಗಿ ಕುಂದಾಪುರ ಉಪವಿಭಾಗ ವತಿಯಿಂದ ಸುಮಾರು 400 ಕಿಟ್ಗಳನ್ನು ಆಶಾ ಕಾರ್ಯಕರ್ತೆಯರಿಗೆ ಹಂಚುವ ಸಿದ್ಧತೆ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಸಾಮಾಗ್ರಿಗಳನ್ನು ಸಾಂಕೇತಿಕವಾಗಿ ಕುಂದಾಪುರದ ರಕ್ತೇಶ್ವರಿ ದೇವಾಲಯದ ಆವರಣದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್, ಡಾ ಪೂರ್ಣಿಮಾ ಡಾ ಉಮೇಶ್ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್, ಪೊಲೀಸ್ ಸಿಬಂದಿಗಳು ಉಪಸ್ಥಿತರಿದ್ದರು.
ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಕಿಟ್ ಹಸ್ತಾಂತರ ನಡೆದಿದ್ದು, ಬುಧವಾರದಿಂದ ಎಲ್ಲಾ ಕಿಟ್ ಗಳನ್ನು ಪೊಲೀಸರೇ ಸ್ವತಃ ವಾಹನಗಳಲ್ಲಿ ಹೋಗಿ ಆಶಾ ಕಾರ್ಯಕರ್ತೆಯರ ಮನೆಗೆ ತಲುಪಿಸಲಿದ್ದಾರೆ.
ಯಾವುದೇ ಮೇಲಧಿಕಾರಿ ಅಥವಾ ಸರ್ಕಾರದ ಸೂಚನೆ ಇಲ್ಲದಿದ್ದರೂ ಕುಂದಾಪುರ ಪೊಲೀಸ್ ಉಪ ವಿಭಾಗದ ಪೊಲೀಸರು ಸ್ವಯಂ ಪ್ರೇರಿತರಾಗಿ ಇಂತಹ ಮಾನವೀಯ ಸೇವೆಗೆ ಮುಂದಾಗಿದ್ದಾರೆ. ದಾನಿಗಳ ಹಾಗೂ ತಮ್ಮ ಸಿಬಂದಿಗಳ ಸ್ವಂತ ಖರ್ಚಿನಲ್ಲಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ಕಿಟ್ ಗಳನ್ನು ತಾವೇ ತಯಾರಿಸಿದ್ದು, ಈ ಮಾನವೀಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.