ಧರ್ಮಸ್ಥಳದಲ್ಲಿ ನಾಲ್ಕನೇ ವಿಶ್ವಯೋಗ ದಿನಾಚರಣೆ; ಯೋಗಕ್ಕೆ ವಿಶ್ವ ಮಾನ್ಯತೆ – ಸಿ. ಎಸ್. ಪುಟ್ಟರಾಜು
ಉಜಿರೆ: ಯೋಗವು ಚಿಕಿತ್ಸಾತ್ಮಕ ವಿದ್ಯೆಯಾಗಿದ್ದು ಯಾವುದೇ ಜಾತಿ, ಮತ, ಧರ್ಮ ಹಾಗೂ ಭಾಷೆಗೆ ಸೀಮಿತವಾಗಿರದೆ ವಿಶ್ವಮಾನ್ಯವಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ನಿತ್ಯವೂ ಯೋಗಾಭ್ಯಾಸ ಅಗತ್ಯ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ನಾಲ್ಕನೇ ವಿಶ್ವಯೋಗ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು, ವರನಟ ಡಾ.ರಾಜ್‍ಕುಮಾರ್, ಪಿ.ಕೆ.ಯಸ್. ಅಯ್ಯಂಗಾರ್, ಪ್ರಧಾನಿ ನರೇಂದ್ರ ಮೋದಿ ಮೊದಲಾದವರು ಯೋಗಾಭ್ಯಾಸಕ್ಕೆ ನೀಡುವ ಮಹತ್ವವನ್ನು ಶ್ಲಾಘಿಸಿದ ಅವರು 1893ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಯೋಗದ ಮಹತ್ವವನ್ನು ಪರಿಚಯಿಸಿದರು ಎಂದು ಹೇಳಿದರು.
ಧರ್ಮಸ್ಥಳದ ಸಮಾಜಮುಖಿಯಾದ ಸೇವಾಕಾರ್ಯಗಳನ್ನು ಶ್ಲಾಘಿಸಿದ ಅವರು ವಿಶೇಷವಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಎಲ್ಲೆಡೆ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯ ಮೌನ ಕ್ರಾಂತಿಯಾಗಿದೆ. ವಿಶೇಷವಾಗಿ ಮಹಿಳಾ ಸಬಲೀಕರಣದೊಂದಿಗೆ ಅವರು ಆರ್ಥಿಕವಾಗಿಯೂ ಸ್ವಾವಲಂಬಿಗಳಾಗಿದ್ದಾರೆ.
ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ತಾನು ಹಲವು ಬಾರಿ “ಸಾಧಕ”ನಾಗಿ ನವ ಚೈತನ್ಯ ಪಡೆದಿರುವುದನ್ನು ಧನ್ಯತೆಯಿಂದ ಸ್ಮರಿಸಿದ ಸಚಿವರು ಧರ್ಮಸ್ಥಳದ ಎಲ್ಲಾ ಸೇವಾ ಕಾರ್ಯಗಳಿಗೆ ಸರ್ಕಾರದ ಪೂರ್ಣ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿಯವರ ಪರವಾಗಿ ಭರವಸೆ ನೀಡಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಯೋಗದಿಂದಾಗಿ ಭಾರತಕ್ಕೆ ಜಾಗತಿಕ ಮನ್ನಣೆ ದೊರಕಿದ್ದು ಆಧ್ಯಾತ್ಮಿಕ ಸಾಧನೆಗೂ ಯೋಗ ಅಗತ್ಯವಾಗಿದೆ ಎಂದರು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಕೆ. ರಮೇಶ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶಕ ಕಾರ್ತಿಗೇಯನ್ ಶುಭಾಶಂಸನೆ ಮಾಡಿದರು.
ವಿಶ್ವ ಮಾನವರಾಗಿದ್ದೇವೆ:
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಪ್ರತಿ ವರ್ಷ ವಿಶ್ವಯೋಗ ದಿನಾಚರಣೆ ನಡೆಸುವ ಮೂಲಕ ನಾವೆಲ್ಲ ವಿಶ್ವ ಮಾನವರಾಗಿದ್ದೇವೆ ಎಂದರು.
ಯೋಗವು ದೇಹ ಮತ್ತು ಮನಸ್ಸನ್ನು ಕೂಡಿಸುವ ಕೆಲಸ ಮಾಡುತ್ತದೆ. ಯೋಗಾಭ್ಯಾಸ ಅಂದರೆ ಬರೆ ವ್ಯಾಯಾಮ ಅಲ್ಲ. ದೇಹ, ಮನಸ್ಸು ಮತ್ತು ಇಂದ್ರಿಯಗಳ ಹತೋಟಿಯೊಂದಿಗೆ ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ನಡೆಸುವುದೇ ಯೋಗ ಎಂದು ಅವರು ಅಭಿಪ್ರಾಯ ಪಟ್ಟರು.
ಪ್ರತಿ ದಿನ ಯೋಗಾಭ್ಯಾಸ ಮಾಡಿ, ವೈದ್ಯರನ್ನು ದೂರ ಇಡಿ ಎಂದು ಅವರು ಕಿವಿಮಾತು ಹೇಳಿದರು.
ತಾನು ಪ್ರತಿ ದಿನ ಬೆಳಿಗ್ಗೆ ಅರ್ಧ ಗಂಟೆ ಯೋಗಾಭ್ಯಾಸ ಹಾಗೂ ಸಂಜೆ ಅರ್ಧ ಗಂಟೆ ಮೂರು ಕಿ.ಮೀ. ವಾಕಿಂಗ್ ಮಾಡುವುದಾಗಿ ಹೆಗ್ಗಡೆಯವರು ತಿಳಿಸಿದರು.
ಯೋಗ ರತ್ನ ಪ್ರಶಸ್ತಿ: ರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆ ಮಾಡುವ ಯೋಗಪಟುಗಳಿಗೆ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ವತಿಯಿಂದ “ಯೋಗ ರತ್ನ” ಪ್ರಶಸ್ತಿ ನೀಡಿ ಗೌರವಿಸುವುದಾಗಿ ಹೆಗ್ಗಡೆಯವರು ಪ್ರಕಟಿಸಿದರು.
2019ರ ಜೂನ್ 21 ರಂದು ಧರ್ಮಸ್ಥಳದಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆ ಸಂದರ್ಭ ಪ್ರಥಮ ಯೋಗ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.
ಹೇಮಾವತಿ ವಿ. ಹೆಗ್ಗಡೆ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮತ್ತು ಸಿಂಡಿಕೇಟ್ ಬ್ಯಾಂಕಿನ ಡಿ.ಜಿ.ಎಂ. ತಿಮ್ಮಯ್ಯ ಸಿ.ಎಂ. ಉಪಸ್ಥಿತರಿದ್ದರು.
ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಧನ್ಯವಾದವಿತ್ತರು. ಡಾ. ಜಸ್ಮಿನ್ ಕಾರ್ಯಕ್ರಮ ನಿರ್ವಹಿಸಿದರು.
ಸೂತ್ರ ನೇತಿ: ಗೋಲ್ಡನ್ ಬುಕ್ ಆಫ್ ರೆಕಾರ್ಡಿಂಗ್ ದಾಖಲು:
ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಧಮಸ್ಥಳದಲ್ಲಿ ವಿಶ್ವಯೋಗ ದಿನಾಚರಣೆ ಸಂದರ್ಭ ಪ್ರದರ್ಶಿಸಿದ ಸೂತ್ರ ನೇತಿ ಕ್ರಿಯೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲಾಗಲಿದೆ.
ವಿಧಾನ: ಸೂತ್ರ ನೇತಿ ಒಟ್ಟು 5 ನಿಮಿಷದ ಪ್ರಕ್ರಿಯೆಯಾಗಿದ್ದು ಒಂದು ನಿಮಿಷದಲ್ಲಿ ಏಕ ಕಾಲದಲ್ಲಿ 368 ವಿದ್ಯಾರ್ಥಿಗಳು ಮೂಗಿನ ದ್ವಾರದ ಮೂಲಕ ರಬ್ಬರ್ ನಳಿಕೆಯನ್ನು ಹಾಕಿ ಬಾಯಿ ಮೂಲಕ ಹೊರ ತೆಗೆದಿದ್ದಾರೆ. ಇದನ್ನು ನಾಲ್ಕು ಕೋನಗಳಲ್ಲಿ ವೀಡಿಯೊ ಚಿತ್ರೀಕರಣ ಮಾಡಲಾಗಿದೆ. ಚಿತ್ರೀಕರಿಸಿದ ವೀಡಿಯೊವನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿ ಕೊಡಲಾಗುವುದು. ಪ್ರತಿ ವಿದ್ಯಾರ್ಥಿಯ ವಿಳಾಸ, ಭಾವಚಿತ್ರ ಹಾಗೂ ಮನೆ ವಿಳಾಸವನ್ನು ಕಳುಹಿಸಿಕೊಡಲಾಗುವುದು.
ಏಕಕಾಲದಲ್ಲಿ 368 ವಿದ್ಯಾರ್ಥಿಗಳು ಸೂತ್ರ ನೇತಿ ಪ್ರದರ್ಶನ ನೀಡಿರುವುದು ಇದೇ ಪ್ರಥಮ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ.