5 ವರ್ಷ ಕ್ಷೇತ್ರ ಕಡೆಗಣಿಸಿ, ಮೋದಿ ಹೆಸರಿನಲ್ಲಿ ಗೆಲ್ಲುವುದು ಶೋಭಾ ತಂತ್ರ – ಪ್ರಮೋದ್ ಮಧ್ವರಾಜ್
ಚಿಕ್ಕಮಗಳೂರು: ‘ಅಭಿವೃದ್ಧಿ ಕೆಲಸ ಮಾಡದಿದ್ದರೂ ನಡೆಯುತ್ತದೆ, ಮೋದಿ ಹೆಸರಿನಲ್ಲಿ ಗೆದ್ದು ಬಿಡುತ್ತೇನೆ ಎಂದು ಶೋಭಾ ಕರಂದ್ಲಾಜೆ ಭಾವಿಸಿದ್ದಾರೆ. ಈ ಕ್ಷೇತ್ರ ಶೋಭಾ ಮುಕ್ತವಾಗುವ ವಿಶ್ವಾಸ ಇದೆ’ ಎಂದು ಕಾಂಗ್ರೆಸ್–ಜೆಡಿಎಸ್ ಮೈತ್ರಿಯಡಿ ಸ್ಪರ್ಧಿಸುವ ಪ್ರಮೋದ್ ಮಧ್ವರಾಜ್ ಇಲ್ಲಿ ಶನಿವಾರ ಕುಟುಕಿದರು.
‘ರಾಮ ನಾಮದ ಬಲ ಇದ್ದರೆ ಸಾಕು’ ಎನ್ನುವ ಮಾತು ಇದೆ. ಹಾಗೆಯೇ ಮೋದಿ ನಾಮಬಲ ಸಾಕು ಎಂದು ಶೋಭಾ ತಿಳಿದುಕೊಂಡಿದ್ದಾರೆ. ಈ ಕ್ಷೇತ್ರದ ಚುನಾವಣೆ ಪ್ರಮೋದ್ ಮತ್ತು ಶೋಭಾ ನಡುವೆ ಹಣಾಹಣಿಯೇ ಹೊರತು ಮೋದಿ ನಡುವಿನ ಹಣಾಯಣಿಯಲ್ಲ’ ಎಂದು ಪ್ರತಿಕಾಗೋಷ್ಠಿಯಲ್ಲಿ ಹೇಳಿದರು.
‘ಶೋಭಾ ಅವರು ಜನರು, ಬಿಜೆಪಿ ಕಾರ್ಯಕರ್ತರೊಂದಿಗೂ ಬೆರೆಯದೆ, ಅಭಿವೃದ್ಧಿ ಕಡೆಗೂ ಗಮನಹರಿಸದೆ, ರಾಜಕಾರಣದಲ್ಲಿ ಮಾತ್ರ ತೊಡಗಿದ್ದರು ಎಂಬ ಅಭಿಪ್ರಾಯ ಇದೆ. ಬಿಜೆಪಿಯಲ್ಲಿ ‘ಗೋ ಬ್ಯಾಕ್ ಶೋಭಾ’ ಅಭಿಯಾನ ಆಗಿದೆ. ಮತದಾರರಲ್ಲಿಯೂ ಈ ಅಭಿಪ್ರಾಯ ಮೂಡಲಿದೆ’ ಎಂದು ಛೇಡಿಸಿದರು.
‘ಇಂದಿರಾಗಾಂಧಿ ಪ್ರತಿನಿಧಿಸಿದ್ದ ಈ ಕ್ಷೇತ್ರ ಕಾಂಗ್ರೆಸ್ ಮುಕ್ತವಾಗಿದೆ ಎಂದು ಶೋಭಾ ಕರಂದ್ಲಾಜೆ ಕಟಕಿಯಾಡಿದ್ದಾರೆ. ಹಾಗಾದರೆ, ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು 28 ಸ್ಥಾನ ಶಿವಸೇನೆಗೆ ಬಿಟ್ಟುಕೊಟ್ಟಿರುವ ಕಡೆಗಳಲ್ಲಿ ಬಿಜೆಪಿ ಮುಕ್ತವಾಗಿದೆಯೇ’ ಎಂದು ಪ್ರಮೋದ್ ಪ್ರಶ್ನಿಸಿದರು.
‘ಬಿಜೆಪಿ ಹೊಂದಾಣಿಕೆ ಮಾಡಿಕೊಂಡರೇ ಅದು ಸರಿ. ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡರೆ ಅದು ತಪ್ಪು ಎಂಬ ದ್ವಿಮುಖ ನೀತಿ ಖಂಡನೀಯ. ಈ ಕ್ಷೇತ್ರವು ಕಾಂಗ್ರೆಸ್ ಮುಕ್ತ ಆಗುವುದಿಲ್ಲ, ಬದಲಿಗೆ ಶೋಭಾ ಮುಕ್ತವಾಗಲಿದೆ’ ಎಂದರು.
‘ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ನಡೆದಿದೆ. ಕಣಕ್ಕಿಳಿಯುವಂತೆ ಮೈತ್ರಿಯ ಎರಡೂ ಪಕ್ಷಗಳ ನಾಯಕರ ಸಮ್ಮತಿ ನೀಡಿದ್ದಾರೆ. ಇದೇ 25ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ. ಎರಡೂ ಪಕ್ಷದವರು ಜಂಟಿಯಾಗಿ ಪ್ರಚಾರ ಮಾಡುತ್ತೇವೆ’ ಎಂದರು.
‘ಉಡುಪಿಯಲ್ಲಿ ನನಗೆ ಮನೆ ಇದೆ. ಕ್ಷೇತ್ರದ ಹೊರಗಿನವನೇನಲ್ಲ. ಚಿಕ್ಕಮಗಳೂರು ಜಿಲ್ಲೆಯ ನಿಸರ್ಗ ಚೆನ್ನಾಗಿದೆ. ಇಲ್ಲಿಯೂ ಒಂದು ಮನೆ ಮಾಡಲು ಮುಂದೆ ಮನಸ್ಸು ಮಾಡಬಹುದು’ ಎಂದು ಪ್ರತಿಕ್ರಿಯಿಸಿದರು.
2013ರಲ್ಲಿ ಶಾಸಕನಾಗಿ ಆಯ್ಕೆಯಾದಾಗ ಎಲ್ಲ ಶಾಸಕರಿಗೂ ಒಂದೊಂದು ಬ್ಯಾಗು ಕೊಟ್ಟಿದ್ದರು. ಕ್ಷೇತ್ರದ ಜನರ ಅರ್ಜಿಗಳನ್ನು ತುಂಬಿಕೊಂಡು ಕಚೇರಿಗಳಿಗೆ ಹೋಗಿ ಪರಿಹರಿಸುವ ಕೆಲಸ ಮಾಡಲು ಈ ಬ್ಯಾಗು ಬಳಸಿಕೊಂಡಿದ್ದೇನೆ. ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದ್ದೇನೆ’ ಎಂದು ಪ್ರಮೋದ್ ಹೇಳಿದರು.
‘ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾದರೆ ಜನರ ಬೇಡಿಕೆಗಳ ಅರ್ಜಿಗಳನ್ನು ಒಯ್ಯಲು, ಸಂಬಂಧಪಟ್ಟವರಿಗೆ ತಲುಪಿಸಿ ಪರಿಹರಿಸಲು ಇದೇ ಬ್ಯಾಗನ್ನು ಬಳಸುತ್ತೇನೆ’ ಎಂದರು.
ಮುಖಂಡರಾದ ಡಾ.ಡಿ.ಎಲ್.ವಿಜಯಕುಮಾರ್, ಎಂ.ಎಲ್.ಮೂರ್ತಿ, ರಂಜನ್ಅಜಿತ್ಕುಮಾರ್, ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ, ಶಾಂತೇಗೌಡ, ಎಚ್.ಎಚ್.ದೇವರಾಜ್, ಶಿವಾನಂದಸ್ವಾಮಿ, ಎ.ಎನ್.ಮಹೇಶ್, ಸತೀಶ್, ರಮೇಶ್ ಇದ್ದರು.
ಸಿಂಗಾಪುರದಂತೆ ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿ
ಇದಕ್ಕೂ ಮೊದಲು ಪ್ರಮೋದ್ ಮಧ್ವರಾಜ್ ಅವರು, ಶೃಂಗೇರಿ ಶಾರದಾ ಮಠಕ್ಕೆ ಶನಿವಾರ ಭೇಟಿ ನೀಡಿ ಶಾರದಾಂಬೆಗೆ ವಿಶೇಷಪೂಜೆ ಸಲ್ಲಿಸಿದರು. ಬಳಿಕ ನರಸಿಂಹವನದ ಗುರು ನಿವಾಸದಲ್ಲಿ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಶಕ್ತಿಗಣಪತಿ, ತೋರಣ ಗಣಪತಿ, ಶಂಕರಚಾರ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಯುಪಿಎ ಸರ್ಕಾರವಿದ್ದಾಗ ಜನರು ಸುಖಜೀವನ ನಡೆಸುತ್ತಿದ್ದರು. ಮೋದಿ ಸರ್ಕಾರದಲ್ಲಿ ಸಾಮಾನ್ಯರು ಕಷ್ಟದ ಮೇಲೆ ಕಷ್ಟ ಅನುಭವಿಸುತ್ತಿದ್ದಾರೆ. ಶ್ರೀಮಂತರು ಮಾತ್ರ ಇನ್ನೂ ಶ್ರೀಮಂತರಾಗುತ್ತಾ ಹೋಗಿದ್ದಾರೆ. ಜನರ ಹಣವನ್ನು ಜಿಎಸ್ಟಿ ತೆರಿಗೆ ರೂಪದಲ್ಲಿ ಸಂಗ್ರಹ ಮಾಡಿ, ಕೇಂದ್ರ ಸರ್ಕಾರವು ಅಂಬಾನಿ ಖಾತೆಗೆ ವರ್ಗಾಯಿಸುತ್ತಿದೆ’ ಎಂದು ಆರೋಪಿಸಿದರು.
‘ಶೃಂಗೇರಿಯ ಶಾರದೆ ಹಾಗೂ ಉಭಯ ಗುರುಗಳ ಆಶೀರ್ವಾದ ಪಡೆದು ಮೊದಲ ಪ್ರಚಾರ ಸಭೆಯನ್ನು ಶೃಂಗೇರಿಯಲ್ಲಿ ಮಾಡುತ್ತಿದ್ದೇನೆ. ಶಾಸಕನಾಗಿದ್ದಾಗ ಉಡುಪಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈಗ ಎಂಟು ವಿಧಾನಸಭಾ ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ದೊರಕಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದಿಂದ ಮುಕ್ತವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಮುಂದೆ ಮೈತ್ರಿ ಪಕ್ಷವು ಬಿಜೆಪಿಗೆ ಪೈಪೋಟಿ ನೀಡುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಹೇಗೆ ಗೆಲ್ಲಬೇಕು, ಹೇಗೆ ಸೋಲಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ.
ಬಿಜೆಪಿ ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಾ’ ಎಂದು ಚಳವಳಿ ಮಾಡಿದ್ದಾರೆ. ಕಾರಣ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ’ ಎಂದರು.
‘ನಾನು ಚುನಾವಣೆಯಲ್ಲಿ ಗೆದ್ದ ನಂತರ ರಾಜ್ಯ ಹಾಗೂ ಕೇಂದ್ರದಿಂದ ಸಾಕಷ್ಟು ಅನುದಾನಗಳನ್ನು ತರಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಈ ಮಲೆನಾಡನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಯುವಕರಿಗೆ ಉದ್ಯೋಗ ನೀಡುತ್ತೇನೆ ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ಅಕ್ರಮ- ಸಕ್ರಮ, ಕಸ್ತೂರಿರಂಗನ್ ವರದಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಇದೇ 25ರಂದು ಮಧ್ಯಾಹ್ನ 1 ಗಂಟೆಗೆ ಉಡುಪಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ’ ಎಂದು ಹೇಳಿದರು.
ವಿಧಾನ ಪರಿಷತ್ತು ಸದಸ್ಯ ಎಸ್.ಎಲ್ ಭೋಜೇಗೌಡ, ಶಾಸಕ ಮತ್ತು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಡಿ.ರಾಜೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್, ಕಾಂಗ್ರೆಸ್ ಮುಖಂಡರಾದ ಸಚಿನ್ ಮೀಗಾ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್, ಎಚ್.ಜಿ.ವೆಂಕಟೇಶ್, ಮಾರನಕೂಡಿಗೆ ನಟರಾಜ್, ಡಾ.ಅಂಶುಮಂತ್, ಸುಧೀರ್ ಕುಮಾರ್ ಮುರೊಳ್ಳಿ, ಭಂಡಿಗಡಿ ದಿವಾಕರ್ ಭಟ್, ರಮೇಶ್ ಭಟ್, ದಿನೇಶ್ ಹೆಗ್ಡೆ, ಕುರದಮನೆ ವೆಂಕಟೇಶ್, ಅಶೋಕ್ ಹೆಗ್ಡೆ, ರಮೇಶ್ ಕಚ್ಚೋಡಿ, ಭರತ್ ಗಿಣಿಕಲ್ ಹಾಜರಿದ್ದರು.
‘