50 ಬಡ ಕುಟುಂಬಗಳಿಗೆ ಒಂದೇ ವೇದಿಕೆಯಲ್ಲಿ ಸಹಾಯ ಹಸ್ತ
ಮಂಗಳೂರು: ಅಮೃತಸಂಜೀವಿ(ರಿ.) ಮಂಗಳೂರು ಇದರ ಆಶ್ರಯದಲ್ಲಿ ಸಂಸ್ತೆಯ 50 ನೇ ಮಾಸಿಕ ಯೋಜನೆಯ ಅಂಗವಾಗಿ ರಾಜಕೇಸರಿ ಯೂತ್ ಕ್ಲಬ್ ಗಂಜಿಮಠ ರಿ. ಗಂಜಿಮಠ ಇದರ ಸಹಯೋಗದಲ್ಲಿ 50 ಬಡ ಕುಟುಂಬಗಳಿಗೆ ಒಂದೇ ವೇದಿಕೆಯಲ್ಲಿ ಸಹಾಯ ಹಸ್ತ ನೀಡುವ ಕಾರ್ಯಕ್ರಮ ಶ್ರೀ ರಾಮ ಮಂದಿರ ಎಡಪದವಿನಲ್ಲಿ ನಡೆಯಿತು.
ಶ್ರೀ ರಾಮ ಮಂದಿರ ಎಡಪದವಿನ ಅಧ್ಯಕ್ಷರಾದ ಮುರಲೀಧರ ಶೆಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಸಂಸ್ಥೆಯ ಯುವಕರ ಈ ಸಮಾಜಸೇವೆಯು ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿ ಆಶೀರ್ವದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಕೇಶವ ಬಂಗೇರರವರು ಮಾತಾನಾಡುತ್ತ ಇದೊಂದು ಬಹಳ ಒಳ್ಳೆಯ ಕಾರ್ಯಕ್ರಮ ಮತ್ತು 50 ಫಲಾನುಭವಿಗಳನ್ನು ಅವರ ಮನೆಯ ಸ್ಥಿತಿಯನ್ನು ಪರಿಶೀಲಿಸಿ ಆರಿಸಿದ ರೀತಿಯನ್ನು ಶ್ಲಾಘಿಸಿದರು. ಉಪನ್ಯಾಸ ನೀಡಿದ ಶ್ರೀಕಾಂತ್ ಶೆಟ್ಟಿ ಇದು ಕೇವಲ ಸುವರ್ಣ ಸಂಗಮ ಮಾತ್ರವಲ್ಲ,ಮಾನವೀಯತೆಯ ಸಂಗಮವೆಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆ.ಆರ್.ಶೆಟ್ಟಿ ಅಡ್ಯಾರ್ ಪದವು ಅವರು ಅಮೃತಸಂಜೀವಿನಿ(ರಿ.) ಮಂಗಳೂರು ಸಂಸ್ಥೆ ನಡೆದು ಬಂದ ದಾರಿ ಮತ್ತು ಕಾರ್ಯಕರ್ತರ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಂಜಣ್ಣ ಸೇವಾ ಬ್ರಿಗೇಡ್ ನ ಮನೋಜ್ ಕೋಡಿಕೆರೆ ,ಶ್ರೀ ಮಂದಿರದ ಮುರಳೀದರ್ ಶೆಟ್ಟಿ,ಸಾಮಾಜಿಕ ಮುಂದಾಳು ಆನಂದ ಶೆಟ್ಟಿ ಕಾಜಿಲ ಬಿರಾವು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಒಂದೇ ವೇದಿಕೆಯಲ್ಲಿ 50 ಬಡ ಕುಟುಂಬಗಳಿಗೆ 6 ಲಕ್ಷ ರೂಪಾಯಿ ಧನಸಹಾಯ ಮಾಡಲಾಯಿತು ಮತ್ತು ಸಮಾಜಸೇವೆ ಮಾಡುತ್ತಿರುವ 32 ಸ್ಥಳೀಯ ಸೇವಾ ಸಂಸ್ಥೆ ಗಳಿಗೆ ಮತ್ತು ಸಂಜೀವಿನಿ 25 ಪರಿವಾರ ಸಂಸ್ಥೆಗಳಿಗೆ ಗೌರವಾರ್ಪಣೆ ಮಾಡಲಾಯಿತು.
ರಾಜಕೇಸರಿಯವಿಜೇತ್ ರೈ ಪುತ್ತೂರು ಸ್ವಾಗತ ಭಾಷಣ ಮತ್ತು ಅಮೃತ ಸಂಜೀವಿನಿಯ ಪ್ರಮುಖರಾದ ಕಾರ್ತಿಕ್ ಶೆಟ್ಟಿ ಬರ್ಕೆ ಧನ್ಯವಾದ ಸಮರ್ಪಿಸಿದರು.ತಕಧಿಮಿ ತಂಡ ಗುರುಪುರ (ರಿ.) ಗುರುಪುರ ಕೈಕಂಬ ಹಾಗೂ ಡ್ಯಾನ್ಸಿಂಗ್ ಸ್ಟಾರ್ ಡ್ಯಾನ್ಸಿಂಗ್ ಅಕಾಡೆಮಿ ಎಡಪದವು ಸಿದ್ದಕಟ್ಟೆ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಮೃತಸಂಜೀವಿನಿ ಮತ್ತು ರಾಜಕೇಸರಿ ಯೂತ್ ಕ್ಲಬ್ ನ ಕಾರ್ಯಕರ್ತರು ಹಾಗು ಕಾರ್ಯಕ್ರಮಕ್ಕೆ ಆಗಮಿಸಿದ ಹಿತೈಶಿಗಳು ಉಪಸ್ಥಿತರಿದ್ದರು