ಸಾಲದ ಹಣವನ್ನು ಸದ್ಬಳಕೆ ಮಾಡುವುದು, ಮರು ಪಾವತಿ ಮಾಡುವುದು ಅಷ್ಟೇ ಮುಖ್ಯ -ನಿರ್ಮಲಾ ಸೀತಾರಾಮನ್
ಧರ್ಮಸ್ಥಳ: ಸಾಲ ನೀಡುವುದು ಮುಖ್ಯವಲ್ಲ, ಆ ಹಣವನ್ನು ಸದ್ಬಳಕೆ ಮಾಡುವುದು ಮತ್ತು ಪೂಜ್ಯ ಭಾವನೆಯಿಂದ ಮರು ಪಾವತಿ ಮಾಡುವುದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಕಿಕೊಟ್ಟ ಮಾದರಿಯಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 40 ಲಕ್ಷ ಪ್ರಗತಿ ಬಂಧು, ಸ್ವಸಹಾಯ ಸಂಘಗಳಿಗೆ ಜಾರಿಗೊಳಿಸಲಾದ ಪ್ರಗತಿರಕ್ಷಾ ಕವಚ ಎಂಬ ಹೆಸರಿನ ಗುಂಪು ವಿಮಾ ಯೋಜನೆಗೆ ಸೋಮವಾರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳದಲ್ಲಿ ಸಾಲದ ಬಳಕೆ ಮತ್ತು ಮರು ಪಾವತಿ ಬಗ್ಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದರ ಪರಿಣಾಮದಿಂದಲೇ ಇಂದು ಧರ್ಮಸ್ಥಳ ಯೋಜನೆಯ ಮೂಲಕ ನಿಜವಾದ ಧರ್ಮ, ಅರ್ಥ, ಕಾಮ, ಮೋಕ್ಷಗಳ ಪುರುಷಾರ್ಥ ಈಡೇರುತ್ತಿದೆ. ಇದು ಸರಕಾರಕ್ಕೂ ಮಾದರಿಯಾದ ಯೋಜನೆ. ಸರಕಾರಗಳು ಜನ ಸಾಮಾನ್ಯರಿಗಾಗಿ ನಾನಾ ಸೌಲಭ್ಯ ಯೋಜನೆ ಜಾರಿಗೊಳಿಸುತ್ತಿದ್ದರೆ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಐವತ್ತು ವರ್ಷಗಳಿಂದ ನಿರಂತರವಾಗಿ ಕೃಷಿ, ಸ್ವಉದ್ಯೋಗ, ಗ್ರಾಮಾಭಿವೃದ್ಧಿ, ಸ್ವಾವಲಂಬನೆ ಮುಂತಾದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದ ಅವರು, ನ್ಯಾಯವೆಂಬುದು ಧರ್ಮದ ಮತ್ತೊಂದು ಮುಖ. ನ್ಯಾಯ ಇದ್ದಲ್ಲಿ ಮಾತ್ರ ಧರ್ಮಕ್ಕೆ ಅರ್ಥ ಬರುತ್ತದೆ. ಧರ್ಮದ ಒಂದು ಜಗತ್ತೇ ಧರ್ಮಸ್ಥಳದಲ್ಲಿದೆ. ನ್ಯಾಯಾಧಿಕಾರಿಯಾಗಿ, ಧರ್ಮಾಧಿಕಾರಿಯಾಗಿ ಡಾ.ಹೆಗ್ಗಡೆ ಕೆಲಸ ಮಾಡುತ್ತಿದ್ದಾರೆ. ಹೆಗ್ಗಡೆಯವರು ಸ್ಪರ್ಷಿಸದ ಕ್ಷೇತ್ರವೇ ಇಲ್ಲ ಎಂದು ಶ್ಲಾಘಿಸಿದರು.
ಭಾರತೀಯ ಜೀವ ವಿಮಾ ನಿಗಮ (ಎಲ್‍ಐಸಿ)ದ ಚೇರ್ಮನ್ ವಿ.ಕೆ. ಶರ್ಮಾ ಮಾತನಾಡಿ, ದೇಶದಲ್ಲಿ 24 ಕೋಟಿ ಜನರನ್ನು ಎಲ್‍ಐಸಿ ತಲುಪುತ್ತಿದೆ. ಅಷ್ಟು ಕುಟುಂಬಗಳ ಕಣ್ಣೀರೊರೆಸುವ ಕೆಲಸ ನಮ್ಮ ಸಂಸ್ಥೆಯಿಂದ ನಡೆಯುತ್ತಿದೆ. ಜೀವನದ ಜತೆಗೆ ಮತ್ತುಜೀವನದ ನಂತರವೂ ಎಂಬ ಧ್ಯೇಯ ವಾಕ್ಯ ನಮ್ಮದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 40 ಲಕ್ಷ ಕುಟುಂಬಗಳನ್ನು ಗುಂಪು ವಿಮೆಯ ವ್ಯಾಪ್ತಿಗೆ ತಂದು ಅದರಲ್ಲಿ ಎಲ್‍ಐಸಿ ಭಾಗೀದಾರಿಕೆ ಹೊಂದುವ ಅವಕಾಶವನ್ನು ಡಾ. ಹೆಗ್ಗಡೆ ನೀಡಿರುವುದು ಖುಷಿ ತಂದಿದೆ. ಒಂದು ಕುಟುಂಬದ ಇಬ್ಬರಿಗೆ ಈ ಗುಂಪು ವಿಮೆ ಅನ್ವಯವಾಗುತ್ತದೆ. ಗರಿಷ್ಠ 5 ಲಕ್ಷದವರೆಗೆ ಈ ವಿಮೆ ಸಿಗಲಿದೆ ಎಂದವರು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ನಡೆವವರನ್ನು ಎಡವದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದೆ. ಧರ್ಮಸ್ಥಳದಲ್ಲಿ ದೇವರ ಮೇಲಿನ ನಂಬಿಕೆ, ಶ್ರದ್ಧೆ, ಅನುಗ್ರಹ ಎಲ್ಲವೂ ಇದೆ. ಅದರ ಜತೆಯಲ್ಲಿ ಲೌಕಿಕ ಬದುಕಿಗೆ ಬೇಕಾದ ಸಹಕಾರವನ್ನೂ ಕಲ್ಪಿಸಿ ಕೊಡುವ ಯೋಜನೆಗಳೂ ಇವೆ. ರೈತರ ಆತ್ಮಹತ್ಯೆಗೆ ಕಾರಣ ಸಾಲದ ಬಳಕೆ. ಸಾಲದ ಸದ್ಬಳಕೆ ಮಾಡಿದರೆ ಅಪಾಯವಿಲ್ಲ. ಸಾಲ ಶೂಲವಾಗಬಾರದು. ಅದು ಬಂಡವಾಳವಾಗಬೇಕು ಎಂಬುದು ನಮ್ಮ ಆಶಯ. ದೇಶಕ್ಕೆ ಅನ್ನ ನೀಡುವ ರೈತರು ಎಷ್ಟು ಮುಖ್ಯವೋ ಗಡಿಕಾಯುವ ಯೋಧ ಕೂಡ ಅಷ್ಟೇ ಮುಖ್ಯ. ರೈತನ ಮಕ್ಕಳೇ ಯೋಧರಾಗಿ ದೇಶ ರಕ್ಷಣೆ ಮಾಡುತ್ತಾರೆ. ಹಳ್ಳಿಯ ಮಣ್ಣಿನ ಮಕ್ಕಳೇ ಸೈನಿಕರಾಗುತ್ತಾರೆ. ಇದನ್ನು ಮನಗಂಡೇ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜೈಜವಾನ್, ಜೈಕಿಸಾನ್ ಘೋಷಣೆ ಕೂಗಿದ್ದರು ಎಂದ ಅವರು, ರಕ್ಷಣಾ ಸಚಿವ ಸ್ಥಾನ ಮಹಿಳೆಯ ಕೈಗೆ ಬಂದಾಗ ಕೆಲವರಿಗಾದರೂ ಅಚ್ಚರಿಯಾಗಿರಬಹುದು. ನಮ್ಮ ಸಾಂಸ್ಕøತಿಕ ಹಿನ್ನೆಲೆ ನೋಡಿದಾಗಲೂ ನಮ್ಮ ರಕ್ಷಣಾ ಕಾರ್ಯ ಮಾಡುತ್ತಾ ಬಂದಿರುವುದು ಮಹಿಳೆಯಾದ ದುರ್ಗೆ ಎಂಬುದನ್ನು ಮರೆಯುವಂತಿಲ್ಲ ಎಂದು ಡಾ. ಹೆಗ್ಗಡೆ ನುಡಿದರು.