ಶಾಸಕ ಕಾಮತ್ ಅವರಿಂದ ಜೈಹಿಂದ್ ಕಾಂಕ್ರೀಟಿಕರಣಗೊಂಡ ರಸ್ತೆ ಉದ್ಘಾಟನೆ
ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾದೇವಿ ವಾರ್ಡಿನ ಕಾಂಕ್ರೀಟಿಕರಣಗೊಂಡ ಜೈಹಿಂದ್ ರಸ್ತೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಪಾಲಿಕೆ ವಿಪಕ್ಷ ಮುಖಂಡ ಪ್ರೇಮಾನಂದ ಶೆಟ್ಟಿಯವರ ಪಾಲಿಕೆ ಸಾಮಾನ್ಯ ನಿಧಿಯ ಮೂಲಕ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಜೈಹಿಂದ್ ರಸ್ತೆ ಕಾಂಕ್ರೀಟಿಕರಣಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರ್, ಹರೀಶ್, ಪ್ರಕಾಶ್ ಶೆಟ್ಟಿ, ರವೀಂದ್ರ ಕುಮಾರ್, ದೀಪಕ್ ಪೈ, ಯಶವಂತ್, ಉಮಾವತಿ ಸುವರ್ಣ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.
ಮಂಗಳೂರಿನ ರಸ್ತೆಗೆ ಮಧುಕರ್ ಶೆಟ್ಟಿ ಹೆಸರು – ಶಾಸಕ ಕಾಮತ್
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮುಂದಿನ ಬಾರಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದ ಕೂಡಲೇ ದಕ್ಷ, ಪ್ರಾಮಾಣಿಕ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಹೆಸರನ್ನು ಯಾವುದಾದರೂ ಪ್ರಮುಖ ರಸ್ತೆಗೆ ಇಡಲಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಧುಕರ್ ಶೆಟ್ಟಿಯವರು ತಮ್ಮ ಸೇವಾವಧಿಯಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಅನೇಕ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆ ತಂದಿದ್ದರು. ಅವರು ನಮ್ಮ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ನಮ್ಮ ಭಾಗ್ಯ. ಅವರದ್ದು ಸಾಯುವ ವಯಸ್ಸಲ್ಲ. ಅವರ ಸೇವೆ ನಮ್ಮ ರಾಜ್ಯಕ್ಕೆ ಇನ್ನು ಅನೇಕ ವರ್ಷಗಳ ತನಕ ಬೇಕಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರಾದ ಮಧುಕರ್ ಶೆಟ್ಟಿಯವರ ಹೆಸರನ್ನು ನಾವು ಯಾವತ್ತೂ ಜ್ಞಾಪಕದಲ್ಲಿ ಇಡಬೇಕು. ಆ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಬರುವ ಮನಪಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಂಗಳೂರಿನ ಯಾವುದಾದರೂ ರಸ್ತೆಗೆ ಮಧುಕರ ಶೆಟ್ಟಿಯವರ ಹೆಸರನ್ನು ಇಡಲಾಗುವುದು ಎಂದು ಶಾಸಕ ಕಾಮತ್ ಹೇಳಿದ್ದಾರೆ.