65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಹರೀಶ್ ಶೇರಿಗಾರ್ ನಿರ್ಮಾಣದ “ಮಾರ್ಚ್ 22” ಕನ್ನಡ ಚಿತ್ರದ ಹಾಡಿನ ರಚನೆಗೆ ಅತ್ಯುತ್ತಮ ಪ್ರಶಸ್ತಿ
ನವದೆಹಲಿ: ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಹಿನ್ನೆಲೆ ಗಾಯಕ ಶ್ರೀ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್ 22’ ಕನ್ನಡ ಚಿತ್ರದ ಹಾಡಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಲಭಿಸಿದೆ.
65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಶುಕ್ರವಾರ (ಏಪ್ರಿಲ್ 13) ಹೊಸದಿಲ್ಲಿಯ ಶಾಸ್ತ್ರಿ ಭವನದ ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಕಾನ್ಫರೆನ್ಸ್ ಕೊಠಡಿಯಲ್ಲಿ ಪ್ರಕಟಿಸಲಾಯಿತು.
ಮಂಗಳೂರು ಮೂಲದ ಶ್ರೀ ಹರೀಶ್ ಶೇರಿಗಾರ್ ಅವರ ‘ಮಾರ್ಚ್ 22’ ಕನ್ನಡ ಚಿತ್ರದ “ಮುತ್ತು ರತ್ನದ ಪೇಟೆ, ಚಿಧ್ರವಾಯಿತೇ ಕೋಟೆ” ಸುಮಧುರ ಹಾಡಿನ ರಚನೆಗೆ ಗೀತಾ ರಚನೆಕಾರ ಪ್ರಹಲ್ಲಾದ್ ಅವರಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಲಭಿಸಿದೆ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಅವರು ಈ ಹಾಡಿನಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನ ಕೌಶಲ್ಯವನ್ನು ಮೆರೆದಿದ್ದಾರೆ.
ಕನ್ನಡದ ಅತ್ಯುತ್ತಮ ಚಿತ್ರವಾಗಿ ‘ಹೆಬ್ಬೆಟ್ಟು ರಾಮಕ್ಕ’ ಆಯ್ಕೆಯಾಗಿದೆ. ಈ ಸಲದ 2017ರ ಅತ್ಯುತ್ತಮ ನಟ ಪ್ರಶಸ್ತಿಗೆ ‘ರುಸ್ತುಂ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷಯ್ ಕುಮಾರ್ ಭಾಜನರಾಗಿದ್ದಾರೆ. ದಿವಂಗತ ನಟಿ ಶ್ರೀದೇವಿಗೆ, ಮಾಮ್ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಮಲಯಾಳಂ ಚಿತ್ರ ಮಿನ್ನಮಿನುಂಗು ಚಿತ್ರದ ನಟನೆಗಾಗಿ ಸುರಭಿ ಲಕ್ಷ್ಮೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಇದಲ್ಲದೇ ಅಬ್ಬಾಸ್ ಆಲಿ ಮೊಘಲ್ ಗೆ ಬೆಸ್ಟ್ ಆಕ್ಷನ್ ಡೈರೆಕ್ಷನ್ ಅವಾರ್ಡ್,. ಬಾಹುಬಲಿ ದ ಕನ್ ಕ್ಲೂಷನ್ ಚಿತ್ರದ ಸಾಹಸ ನಿರ್ದೇಶನಕ್ಕೆ ಪ್ರಶಸ್ತಿ. ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಯೇಸುದಾಸ್ ಹಾಗೂ ಅತ್ಯುತ್ತಮ ನಟ – ರಿದ್ದಿ ಸೇನ್ (ಚಿತ್ರ ಬೆಂಗಾಳಿಯ ನಗರ್ ಕೀರ್ತನ್), ಬೆಸ್ಟ್ ಹಿಂದಿ ಫಿಲ್ಮ್ – ನ್ಯೂಟನ್ ಗೆ ನೀಡಲಾಗಿದೆ.
ಮೇ. ೦3ರಂದು ಪ್ರಶಸ್ತಿ ಪ್ರದಾನ ಸಮಾರಂಭ ನವದೆಹಲಿಯಲ್ಲಿ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಸಲದ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಕಾರ್ಯನಿರ್ವಹಿಸಿದ್ದಾರೆ. ಹತ್ತು ಸದಸ್ಯರನ್ನು ಒಳಗೊಂಡಿರುವ ಆಯ್ಕೆ ಸಮಿತಿಯಲ್ಲಿ ಚಿತ್ರಕಥೆಗಾರರಾದ ಇಮ್ತಿಯಾಜ್ ಹುಸ್ಸೇನ್, ಗೀತಸಾಹಿತಿ ಮೆಹಬೂಬ್, ನಟಿ ಗೌತಮಿ ತಡಿಮಲ್ಲ, ಕನ್ನಡದ ನಿರ್ದೇಶಕ ಪಿ ಶೇಷಾದ್ರಿ, ಅನಿರುದ್ಧ್ ರಾಯ್ ಚೌದರಿ, ರಂಜಿತ್ ದಾಸ್, ರಾಜೇಶ್ ಮಪುಸ್ಕರ್, ತ್ರಿಪುರಾರಿ ಶರ್ಮಾ ಮತ್ತು ರುಮಿ ಜಾಫ್ರಿ ಇದ್ದರು.
ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡಿದ ಚಿತ್ರ ‘ಮಾರ್ಚ್ 22’ :
‘ಮಾರ್ಚ್ 22’ ಸಿನೆಮಾ ಮೂಲಕ ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡುವ ಪ್ರಯತ್ನವನ್ನು ನಿರ್ಮಾಪರು ಮತ್ತು ನಿರ್ದೇಶಕರು ಯಶಸ್ವಿಯಾಗಿ ಮಾಡಿದ್ದಾರೆ. ಇಂಥ ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಸಿನೆಮಾವನ್ನು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. ಹರೀಶ್ ಶೇರಿಗಾರ್ ಅವರ ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ನಿರ್ಮಿಸಲಾಗಿರುವ ‘ಮಾರ್ಚ್ 22’ ಸಿನೆಮಾ ಬಗ್ಗೆ ಕನ್ನಡ ಸಿನೆಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂದಿದೆ. . ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ.
ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇರದಷ್ಟು ಧರ್ಮಗಳು, ಜಾತಿಗಳು ಭಾರತದಲ್ಲಿವೆ. ವೈವಿಧ್ಯಮಯ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ, ಇಲ್ಲಿ ಜನರು ಬಹಳ ಅನ್ಯೋನ್ಯತೆಯಿಂದ ಮತ್ತು ಸ್ನೇಹದಿಂದ ಬದುಕುತ್ತಿದ್ದಾರೆ. ಭಾರತೀಯೇತರ ಪ್ರಜೆ ಊಹಿಸಲು ಆಗದ ರೀತಿಯ ಸೌಹಾರ್ದತೆಯ ಬದುಕು ಇಲ್ಲಿ ಕಾಣಬಹುದು. ಆದಾಗ್ಯೂ ಹಿಂದೂಗಳು ಮತ್ತು ಮುಸ್ಲೀಮರ ನಡುವಿನ ಸಂಬಂಧಕ್ಕೆ ಕೆಲವೊಮ್ಮೆ ಕೆಲವು ಪ್ರಚೋದನೆಗಳಿಂದಾಗಿ ಧಕ್ಕೆ ಬಂದಿರುವುದು ಕೂಡ ಸತ್ಯ. ದೇಶದ ಇತಿಹಾಸದಲ್ಲಿ ಇದು ದೊಡ್ಡ ಗಾಯದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರು ಈ ಕಹಿ ನೆನಪು ಹಾಗೆಯೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ‘ಮಾರ್ಚ್ 22’ ಸಿನೆಮಾ ತಂಡ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ವಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನ ಎಂದೆಂದಿಗೂ ನೆನಪಿಡುವಂತೆ ಮಾಡುವ ಪ್ರಯತ್ನವನ್ನು ಮಾಡಿದೆ.
ತಾರಾಗಣದಲ್ಲಿ …..
ಹಿರಿಯ ನಟ ಅನಂತ್ ನಾಗ್ ಹಾಗೂ ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್ ಸೇರಿದಂತೆ ಹಲವು ಹಿರಿಯ ನಟ-ನಟಿಯರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.
ಪ್ರಶಸ್ತಿ ವಿಜೇತರ ಪಟ್ಟಿ :
ಅತ್ಯುತ್ತಮ ನಟಿ: ಶ್ರೀದೇವಿ (ಮಾಮ್) / ಅತ್ಯುತ್ತಮ ನಟ: ರಿದ್ಧಿ ಸೇನ್ (ನಗರ್ ಕೀರ್ತನ್) / ಅತ್ಯುತ್ತಮ ನಿರ್ದೇಶಕ: ಜಯರಾಜ್ (ಭಯಾನಕಂ) / ಅತ್ಯುತ್ತಮ ಸಾಹಸ ನಿರ್ದೇಶನ: ಬಾಹುಬಲಿ 2 / ‘ಮಾರ್ಚ್ 22’ ಕನ್ನಡ ಚಿತ್ರದ ಹಾಡಿಗೆ ರಚನೆಕಾರ ಪ್ರಹಲ್ಲಾದ್ಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ / ಅತ್ಯುತ್ತಮ ನೃತ್ಯ ಸಂಯೋಜನೆ: ಗಣೇಶ್ ಆಚಾರ್ಯ (ಗೋರಿ ತು ಲತ್ತ್ ಮಾರ್-ಟಾಯ್ಲೆಟ್ ಏಕ್ ಪ್ರೇಮ್ ಕಥಾ) / ಸ್ಪೆಷಲ್ ಜ್ಯೂರಿ ಅವಾರ್ಡ್: ನಗರ್ ಕೀರ್ತನ್ (ಬೆಂಗಾಲಿ) / ಉತ್ತಮ ಸಂಗೀತ ನಿರ್ದೇಶನ: ಎ.ಆರ್. ರಹ್ಮಾನ್ (ಕಾಟ್ರು ವೆಳಿಯಿಡೈ) / ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸಂತೋಷ್ ರಾಜನ್ (ಟೇಕ್ ಆಫ್) / ಅತ್ಯುತ್ತಮ ಸಂಕಲನ: ರೀಮಾ ದಾಸ್ (ವಿಲೇಜ್ ರಾಕ್ ಸ್ಟಾರ್) / ಅತ್ಯುತ್ತಮ ಚಿತ್ರಕಥೆ: ತೊಂಡಿಮುದಲುಂ ದ್ರಿಕ್ಸಾಕ್ಷಿಯುಂ / ಅತ್ಯುತ್ತಮ ಛಾಯಾಗ್ರಹಣ: ಭಯಾನಕಂ / ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಾಶಾ ತ್ರಿಪಾಠಿ (ಕಾಟ್ರು ವೆಳಿಯಿಡೈ) / ಅತ್ಯುತ್ತಮ ಹಿನ್ನೆಲೆ ಗಾಯಕ: ಯೇಸುದಾಸ್ (ಪೋಯ್ ಮರಞ್ಞ ಕಾಲಂ) / ಅತ್ಯುತ್ತಮ ಬಾಲನಟಿ: ಅನಿತಾ ದಾಸ್ (ವಿಲೇಜ್ ರಾಕ್ ಸ್ಟಾರ್) / ಅತ್ಯುತ್ತಮ ಮಕ್ಕಳ ಚಿತ್ರ: ಮೋರ್ಕ್ಯಾ / ಅತ್ಯುತ್ತಮ ನಿರ್ದೇಶನ: ಜಯರಾಜ್ (ಭಯಾನಕಂ) / ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು (ವಿಶೇಷ) / ಮರಾಠಿ-ಮೋರ್ಕ್ಯಾ / ಮಲಯಾಳಂ: ಟೇಕ್ ಆಫ್ / ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು / ಲಡಾಖ್-ವಾಕಿಂಗ್ ವಿತ್ ದ ವೈಂಡ್ / ಲಕ್ಷದ್ವೀಪ್-ಸಿಂಜಾರ್ / ತುಳು-ಪಡ್ಡಾಯಿ / ಮರಾಠಿ-ಕಚ್ಚಾ ಲಿಂಬೂ / ಮಲಯಾಳಂ- ತೊಂಡಿಮುದಲುಂ ದ್ರಿಕ್ಸಾಕ್ಷಿಯುಂ / ಕನ್ನಡ-ಹೆಬ್ಬೆಟ್ಟು ರಾಮಕ್ಕ / ಬೆಂಗಾಲಿ-ಮಯೂರಾಕ್ಷಿ / ಅಸ್ಸಾಮೀ-ಇಶು / ತೆಲುಗು-ಗಾಝಿ / ಒಡಿಯಾ-ಹೆಲೋ ಅರ್ಸಿ