70 ವರ್ಷದಲ್ಲಿ ಕಾಂಗ್ರೆಸ್ ಸಾಧನೆ ಕೇಳುವ ಬಿಜೆಪಿ ಸಂಸದರ 30 ವರ್ಷ ದಕ ಜಿಲ್ಲೆಗೆ ಕೊಡುಗೆ ಏನು – ಶಕುಂತಳಾ ಶೆಟ್ಟಿ
ಪುತ್ತೂರು: 70 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಆರೋಪಿಸುವ ಬಿಜೆಪಿಯವರು ದೇಶದ ಉದ್ಧಾರ, ದೇಶದ ರಕ್ಷಣೆ ಮಾಡಿದ್ದೇ ಮೋದಿ ಎಂಬರ್ಥದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸತತ ಪಾಕಿಸ್ತಾನದ ಸೊಕ್ಕು ಮುರಿದಿದ್ದು ಇದೇ ಎಪ್ಪತ್ತು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಎಂಬುದು ಬಿಜೆಪಿಗರಿಗೆ ಮರೆತು ಹೋಗಿದೆಯೇ? ಈ ಅವಧಿಯಲ್ಲಿ ದೇಶವನ್ನು ಯಾರಾದರೂ ಮಾರಿದ್ದಾರಾ? ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಉಪಟಳ ಜಾಸ್ತಿಯಾದಾಗ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಭಾರತ ದಿಟ್ಟ ನಿರ್ಧಾರ ಕೈಗೊಂಡು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾ ವಿಮೋಚನೆ ಮಾಡಿತು. ಪಾಕಿಸ್ತಾನ ಎರಡು ತುಂಡಾಯಿತು. ಇದಕ್ಕೆ ಮೊದಲು ನಡೆದ ಎರಡು ಯುದ್ಧದಲ್ಲೂ ಪಾಕಿಸ್ತಾನವನ್ನು ಭಾರತ ಸೋಲಿಸಿದೆ. ಇದೆಲ್ಲ ಆಗಿದ್ದು ಕಾಂಗ್ರೆಸ್ ಆಳ್ವಿಕೆಯಲ್ಲಿ. ಬಿಜೆಪಿ ಬೊಬ್ಬೆ ಹೊಡೆಯುವುದನ್ನು ಮೊದಲು ನಿಲ್ಲಿಸಬೇಕು. ದೇಶ ರಕ್ಷಣೆ ಕಾರ್ಯ ಕೇವಲ ಮೋದಿ ಅವರಿಂದ ಮಾತ್ರ ನಡೆದಿದ್ದಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ 70 ವರ್ಷ ಮಾಡಿದ್ದೇನು ಎಂದು ಕೇಳುವ ಬಿಜೆಪಿಗರು, 30 ವರ್ಷದಲ್ಲಿ ಬಿಜೆಪಿ ಸಂಸದರು ದಕ್ಷಿಣ ಕನ್ನಡದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಉತ್ತರ ನೀಡಲಿ. ಅದಕ್ಕಿಂತ ಹಿಂದೆ ಕಾಂಗ್ರೆಸ್ ಸಂಸದರು ಇಲ್ಲಿ ಮಾಡಿದ ಸಾಧನೆಗಳ ಪಟ್ಟಿಯೇ ನಮ್ಮಲ್ಲಿದೆ. ಇದನ್ನು ಜನರು ತುಲನೆ ಮಾಡಿ ಈ ಬಾರಿ ಕಾಂಗ್ರೆಸ್ಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಪರ ಮತ ಕೇಳುವ ಅರ್ಹತೆ ಇಲ್ಲದ ಬಿಜೆಪಿಗರು ಮೋದಿ ಹೆಸರಲ್ಲಿ ಮತ ಕೇಳುತ್ತಾರೆ. ಬಿಜೆಪಿಗರಿಗೆ ಮತ ಕೇಳಲು ಬೇರೆ ಯಾವುದೇ ವಿಚಾರಗಳು ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಮತ್ತು ಪಕ್ಷ ಎರಡರ ಹೆಸರಲ್ಲೂ ಮತ ಕೇಳುವ ಅರ್ಹತೆ ಹೊಂದಿದೆ. ನಾವು ಉತ್ತಮ ಆಡಳಿತ ನೀಡಿದ ಆಧಾರದಲ್ಲಿ ಮತಯಾಚಿಸುತ್ತಿದ್ದೇವೆ. ಈ ಬಾರಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದು, ಮಿಥುನ್ ರೈ ಜತೆ ಯುವಕರ ಪಡೆಯೇ ಸೇರಿದೆ. ಹಾಗಾಗಿ ಈ ಬಾರಿ ನಮ್ಮ ಪಕ್ಷದ ಗೆಲುವು ಖಚಿತ ಎಂದರು.
ದೇಶದಲ್ಲಿ ಮೋದಿ ಸರ್ಕಾರ ಬರಲಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರ ಅರ್ಥವೇನು, ಪಾಕಿಸ್ತಾನದ ಜತೆ ಮೋದಿ ಸಂಬಂಧವೇನು? ಒಂದು ವೇಳೆ ಕಾಂಗ್ರೆಸ್ ಗೆಲ್ಲಲಿ ಎಂದು ಇಮ್ರಾನ್ ಖಾನ್ ಏನಾದರೂ ಹೇಳಿದ್ದರೆ ಕಾಂಗ್ರೆಸಿಗರು ದೇಶವನ್ನು ಪಾಕಿಸ್ತಾನಕ್ಕೆ ಮಾರಿದ್ದಾರೆ ಎಂದು ಬಿಜೆಪಿಗರು ಹೇಳುತ್ತಿದ್ದರು ಎಂದು ಹೇಳಿದರು.
ಏ. 14 ರಂದು ಪುತ್ತೂರು ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷದಿಂದ `ನಮ್ಮ ಬೂತ್ ನಮ್ಮ ಹೊಣೆ’ ಎಂಬ ಹೆಸರಿನಲ್ಲಿ ಪ್ರಚಾರ ಅಭಿಯಾನ ನಡೆಸಲಿದೆ. ಎಲ್ಲ ನಾಯಕರು, ಕಾರ್ಯಕರ್ತರು ತಮ್ಮ ತಮ್ಮ ಬೂತ್ನಲ್ಲಿ ಪ್ರಚಾರ, ಮನೆ ಮನೆ ಭೇಟಿ ನಡೆಸಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮನೆ ಭೇಟಿ ಮುಗಿದಿದೆ. 2 ನೇ ಸುತ್ತು ನಡೆಯುತ್ತಿದೆ ಎಂದು ಶಕುಂತಳಾ ಶೆಟ್ಟಿ ಅವರು ಹೇಳಿದರು.