79ನೇ ರಾಷ್ಟ್ರೀಯ ಅಂತರ್- ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ
ಮೂಡಬಿದಿರೆ: “ಇಂಥಹ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಷ್ಟೇ ಅಲ್ಲ. ಬದಲಿಗೆ ಒಬ್ಬ ಕ್ರೀಡಾಪಟುವಿಗೆ ಆತನ ಕ್ರೀಡಾ ಪಯಣಕ್ಕೆ ಮೊದಲ ಮೆಟ್ಟಿಲಾಗಿರಯತ್ತದೆ” ಎಂದು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಮಂಗಳೂರು ವಿಶವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 79ನೇ ರಾಷ್ಟ್ರೀಯ ಅಂತರ್- ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
“ನಾನೊಬ್ಬ ಕ್ರಿಡಾಪಟುವಾಗಿದ್ದ ಕಾಲದಲ್ಲಿ ಸರ್ಕಾರದಿಂದಾಗಲಿ, ಯಾವುದೇ ಖಾಸಗಿ ಸಂಸ್ಥೆಯಾಗಲಿ ಕ್ರೀಡೆ ಹೆಚ್ಚಾಗಿ ಮಹತ್ವ ನೀಡುತ್ತಿರಲಿಲ್ಲ. ಆಗೆಲ್ಲಾ ನಾವು ಇಂಥಹ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದರೆ ಸಾಕಷ್ಟು ಕಷ್ಟಪಡಬೇಕಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕ್ರೀಡೆಯ ಮಹತ್ವ ಅರಿತ ಪರಿಣಾಮ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಕೂಡ ಹೆಚ್ಚಿದೆ” ಎಂದು ಹೇಳಿದರು.
ನಮ್ಮ ಮತ ಕ್ರೀಡೆಗೆ..
“ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ 13 ಮೈದಾನಗಳಲ್ಲಿ ಸಿಂಥೆಟಿಕ್ ಟ್ರಾಕ್‍ಗಳನ್ನು ನಿರ್ಮಿಸಲಾಗಿತ್ತು. ಜತೆಗೆ ಕ್ರೀಡಾ ವಿಜೇತರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿತ್ತು. ಅಂತೆಯೇ ಈ ಬಾರಿಯೂ ಸಹ ರಾಜ್ಯದ 30 ಜಿಲ್ಲೆಗಳಲ್ಲೂ ಸಿಂಥೆಟಿಕ್ ಟ್ರಾಕ್‍ಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅಲ್ಲದೇ ಕರ್ನಾಟಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು, ಬೆಂಗಳೂರಿನಲ್ಲಿ ಕ್ರೀಡಾ ಹಬ್ ಅನ್ನು ತೆರೆಯುವುದು ನಮ್ಮ ಗುರಿಯಾಗಿದೆ. ಕ್ರೀಡಾಪಟುಗಳಿಗೆ ಖಾಲಿ ಜಾಗ ನೀಡಿ ಅಲ್ಲಿ ಮನೆ ಕಟ್ಟಿಕೊಳ್ಳಲು ಸಹ ನಾವು ಸಹಕರಿಸುತ್ತೇವೆ” ಎಂದು ತಮ್ಮ ಯೋಜನೆ ತಿಳಿಸಿದರು.
“ಕ್ರೀಡೆಯಲ್ಲಿ ಗೆಲುವಿಗಿಂಥ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಈ ರೀತಿಯ ಮನೋಬಲ ಹೊಂದಿ ಹೆಚ್ಚೆಚ್ಚು ಮಂದಿ ಕ್ರೀಡೆಯಲ್ಲಿ ಸ್ಪರ್ಧಿಸಬೇಕು. ಇದು ಕ್ರೀಡೆಯ ಬಗೆಗೆ ಜನರ ಮನಸ್ಥಿತಿಯನ್ನು ಬದಲಿಸುತ್ತದೆ” ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ. ಈಶ್ವರ್ ಹಾಗೂ ಎಸ್. ಆರ್. ಎಮ್ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಪ್ರೊ. ವೈದ್ಯನಾಥ್ ಆಳ್ವಾಸ್ ಶಿಕ್ಷಣ ಸಂಸ್ಥೆ, ಮಂಗಳೂರು ವಿವಿ ಹಾಗೂ ಆಲ್ ಇಂಡಿಯಾ ಅಥ್ಲೆಟಿಕ್ ವಿವಿಯ ಧ್ವಜವನ್ನು ಹಾರಿಸಿದರು. ಮಂಗಳೂರು ಕ್ಷೇತ್ರದ ಸಂಸದ ನವಿನ್ ಕುಮಾರ್ ಕಟೀಲ್ ಕ್ರೀಡಾಜ್ಯೋತಿ ಸ್ವೀಕರಿಸಿದರೆ, ಮಂಗಳೂರು ವಿವಿಯ ಹೆಮ್ಮೆಯ ಐವರು ಕ್ರೀಡಾಪಟುಗಳು ಇದನ್ನು ಹೊತ್ತು ಸಾಗಿದರು. ಆಳ್ವಾಸ್ ಸಂಸ್ಥೆಯ ಎತ್ತರ ಜಿಗಿತ ಪಟು ಅಭಿನಯ ಶೆಟ್ಟಿ ಕ್ರೀಡಾಕೂಟದ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ಅಥ್ಲೆಟಿಕ್ ಟ್ರಾಕ್‍ನ ರಾಣಿ, ಹಿರಿಯ ಕ್ರೀಡಾಪಟು ಪಿ.ಟಿ. ಉಷಾರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ. ಈಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಶಾಸಕ ಅಭಯಚಂದ್ರ ಜೈನ್, ಮಂಗಳೂರು ಪೊಲೀಸ್ ಕಮೀಷನರ್ ಟಿ. ಆರ್. ಸುರೇಶ್ ಮತ್ತಿತ್ತರರು ಉಪಸ್ಥಿತರಿದ್ದರು.
5ನೇ ಬಾರಿ ಕರ್ನಾಟಕದ ಸಾರಥ್ಯ
79ನೇ ಕೀಡಾಕೂಟದಲ್ಲಿ ಕರ್ನಾಟಕ ಈಗಾಗಲೇ 4 ಬಾರಿ ಸಾರಥ್ಯ ವಹಿಸಿದ್ದು, ಇದು 5ನೇ ಬಾರಿ ಮುನ್ನಡೆಸುತ್ತಿದೆ. ಅದರಲ್ಲೂ ಮೂರು ಬಾರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕ್ರೀಡಾಕೂಟದ ಆಯೋಜನೆಗೆ ಕೈಜೋಡಿಸಿದೆ.
ಹ್ಯಾಟ್ರಿಕ್ ಕನಸು
ಈಗಾಗಲೇ 777 ಮತ್ತು 78ನೇ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಮಂಗಳೂರು ವಿವಿ ತನ್ನದಾಗಿಸಿಕೊಂಡಿತ್ತು. ಈ ಬಾರಿ ಹಾಟ್ರಿಕ್ ಸಾಧನೆಯ ಕನಸಲ್ಲಿ ಮುನ್ನಡೆದಿದೆ.
ಭವ್ಯ ಮೆರವಣಿಗೆ
79ನೇ ರಾಷ್ಟ್ರೀಯ ಅಂತರ್- ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕರ್ನಾಟಕದ ಕಲೆ ಮತ್ತು ವೈಭವವನ್ನು ಸಾರುವ ಅಭೂತಪೂರ್ವ ಮೆರವಣಿಗೆಯ ಮೂಲಕ ಅದರ ರಂಗನ್ನು ಹೆಚ್ಚಿಸಲಾಯಿತು. ಮೂಲ್ಕಿ- ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮೆರವಣಿಗೆಗೆ ಚಾಲನೆ ನೀಡಿದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಹಾಗೂ ಆಳ್ವಾಸ್ ಸಂಸ್ಥೆಯ ಸುಮಾರು 92 ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಭಾರತದ ಎತ್ತರ ಮನುಷ್ಯ ಮಾರುತಿ ಬೀದರ್, ಸುಲ್ತಾನ್ ಎಂಬ ಬಸವ ಹೋರಿ, ಕೋಣದ ಮಾದರಿ, ಆಳ್ವಾಸ್ ಚಿಣ್ಣರು ಮತ್ತು ಕರ್ನಾಟಕದ ಸಂಪ್ರದಾಯ ಸೂಚಿಸುವ ಕಲೆಗಳು ಈ ಬಾರಿಯ ವಿಶೇಷವಾಗಿದ್ದವು.
ದೇಶವೇ ಇಂದು ಮೂಡಬಿದಿರೆಯಲ್ಲಿ..
ಈ ಬಾರಿಯ ಕ್ರೀಡಾಕೂಟದಲ್ಲಿ ದೇಶದ 265 ವಿವಿಯ 4200 ಕ್ರಿಡಾಪಟುಗಳು ಭಾಗವಹಿದ್ದು, ಹಿರಿಯ ಕೋಚ್‍ಗಳು ಕೂಡ ಇಲ್ಲಿ ಉಪಸ್ಥಿತಿರಿರಲಿದ್ದಾರೆ. ಅವರೆಲ್ಲರ ಪಥಸಂಚನಕ್ಕೆ ಉದ್ಘಾಟನಾ ಸಮಾರಂಭ ಸಾಕ್ಷಿಯಾಯಿತು.
ಕ್ರೀಡಾಕೂಟಕ್ಕೆ ವರುಣನ ವರ
ಕ್ರೀಡಾಕೂಟದ ಮೆರವಣಿಗೆಯ ಸಂದರ್ಭದಲ್ಲಿ ವರುಣನ ಸಿಂಚನವಾಗಿ, ಆತನಿಂತ ಅನಧಿಕೃತ ಚಾಲನೆ ದೊರಕಿತು.