ಕುಂದಾಪುರ ಮತ್ತು ಕಾರ್ಕಳದಲ್ಲಿ ಸಚಿವೆ ಜಯಮಾಲರಿಂದ ಇಂದಿರಾ ಕ್ಯಾಂಟಿನಿಗೆ ಚಾಲನೆ
ಕುಂದಾಪುರ/ಕಾರ್ಕಳ: ಹಿಂದಿನ ಕಾಂಗ್ರೆಸ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ನನ್ನು ಕುಂದಾಪುರ ಮತ್ತು ಕಾರ್ಕಳದಲ್ಲಿ ಬುಧವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಉದ್ಘಾಟಿಸಿದರು.
ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಮತ್ತು ಕಾರ್ಕಳ ಬಂಡೀಮಠದ ಬಳಿ ಇಂದಿರಾ ಕ್ಯಾಂಟಿನನ್ನು ಉದ್ಘಾಟಿಸಿ ಸಚಿವರು ಇಂದಿರಾ ಕ್ಯಾಂಟಿನ್ ನಲ್ಲಿ ಉಪಹಾರವನ್ನು ಸೇವಿಸಿದರು.
ಕುಂದಾಪುರದಲ್ಲಿ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಸಚಿವರು ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ನಿಟ್ಟಿನಲ್ಲಿ ಹಿಂದಿನ ಸಿದ್ದರಾಮಯಯ್ಯ ನೇತೃತ್ವದ ರಾಜ್ಯ ಸರ್ಕಾರದ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ರಾಜ್ಯದಲ್ಲಿ ಅತ್ಯಂತ ಯಶಸ್ವಿ ಯೋಜನೆಯಾಗಿದ್ದು, ಸಿದ್ದರಾಮಯ್ಯನವರ ಕನಸು ಸಾಕಾರಗೊಳ್ಳುತ್ತಿದೆ. ಯಾರೊಬ್ಬರೂ ಹಸಿವಿಂದ ಬಳಲಬಾರದು ಎನ್ನೋದೇ ಇಂದಿರಾ ಕ್ಯಾಂಟೀನ್ ಉದ್ದೇಶ. ಬೇರೆ ಬೇರೆ ಕಡೆಯಿಂದ ಬರುವವರಿಗೆ ಕೈಗೆಟಕುವ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್ಗೆ ಚಾಲನೆ ನೀಡುತ್ತಿರುವುದು ಅತ್ಯಂತ ಹೆಮ್ಮೆ ಹಾಗೂ ಖುಷಿಯ ಸಂಗತಿ ಎಂದು ಜಯಮಾಲಾ ಹೇಳಿದರು.
ಕೇವಲ ಐದು ರೂ.ಗೆ ತಿಂಡಿ, ಹತ್ತು ರೂ.ಗೆ ಊಟ ನೀಡುವುದಷ್ಟೇ ಅಲ್ಲಾ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೂ ಇಂದಿರಾ ಕ್ಯಾಂಟೀನ್ ತನ್ನದೇ ಕೊಡುಗೆ ನೀಡುತ್ತಿದೆ. ಶುಚಿ ಹಾಗೂ ರುಚಿಗೆ, ತಾಜಾ ಬಿಸಿ ಬಿಸಿ ಆಹಾರಕ್ಕೆ ಆದ್ಯತೆ ನೀಡಲಾಗುತ್ತದೆ. ಆಯಾ ಭಾಗಕ್ಕೆ ಪೂರಕವಾದ ಆಹಾರ ತಯಾರಿಕೆಗೆ ಪ್ರಾಧನ್ಯತೆ ಕೊಡಲಾಗುತ್ತದೆ ಎಂದರು.
ಈಗಾಗಲೇ ಉಡುಪಿಯಲ್ಲಿ ಎರಡು ಇಂದಿರಾ ಕ್ಯಾಂಟೀನ್ ಕಾರ್ಯಾರಂಭಿಸುತ್ತಿದೆ. ಕುಂದಾಪುರ, ಕಾರ್ಕಳದಲ್ಲಿ ಉದ್ಘಾಟನೆಗೊಂಡಿದ್ದು, ಒಟ್ಟು ಜಿಲ್ಲೆಯಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್ ಆರಂಭಿಸಲಾಗುತ್ತಿದ್ದು, ಅಗತ್ಯತೆ ಬಿದ್ದರೆ ಮತ್ತಷ್ಟು ಕ್ಯಾಂಟೀನ್ ಆರಂಭಿಸಲು ಹಿಂಜರಿಯುವುದಿಲ್ಲ. ಆಸ್ಪತ್ರೆ ಪ್ರದೇಶದಲ್ಲಿ ಬಡವರಿಗೆ ಸಹಾಯವವಾಗುವ ನಿಟ್ಟಿನಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್ ಕೂಡಾ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಟಿ.ಭೂಬಾಲನ್, ತಾಪಂ ಇಒ ಕಿರಣ್ ಫೆಡ್ನೇಕರ್, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಎಚ್.ಎಸ್.ಅರುಣಪ್ರಭ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ದೇವಕಿ ಸಣ್ಣಯ್ಯ, ಅಬು ಮೊಹಮ್ಮದ್, ತಾಪಂ ಸದಸ್ಯ ಜ್ಯೋತಿ ಪುತ್ರನ್, ಮಾಜಿ ಪುರಸಭೆ ಅಧ್ಯಕ್ಷ ವಸಂತಿ ಮೋಹನ ಸಾರಂಗ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ಸದಸ್ಯರಾದ ಪುಷ್ಪಾ ಶೇಟ್, ಶಕುಂತಲಾ ಗುಲ್ವಾಡಿ, ಮಾಣಿಗೋಪಾಲ ಮುಂತಾದವರು ಇದ್ದರು.
super madam. good for everyone, keep it.