ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ವಂಚಿಸುತ್ತಿದ್ದ ಜಾಲ ಪತ್ತೆ
ಮಂಗಳೂರು: ವಾಹನಗಳ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳ ಮತ್ತು ಇ ಆಯಂಡ್ ಎನ್‌ಸಿಪಿಎಸ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪಾಂಡೇಶ್ವರ ಮಂಗಳಾದೇವಿ ದೇವಸ್ಥಾನ ಬಳಿ ನಿವಾಸಿ ಗೋವರ್ಧನ್ (34), ಬಜ್ಪೆ ಭಟ್ರಕೆರೆ ನಿವಾಸಿ ಮುಹಮ್ಮದ್ ಅನ್ವರ್ ಯಾನೆ ಭಸ್ಮ ಅನ್ವರ್ (44), ಬಂಟ್ವಾಳ ತಾಲೂಕಿನ ತುಂಬೆ ನಿವಾಸಿ ನೌಷಾದ್ ಯಾನೆ ನೌಷಾದ್ ಹುಸೈನ್ (36), ಮಂಗಳೂರಿನ ಕದ್ರಿ ಶಿವಭಾಗ್ ನಿವಾಸಿ ಉಮರ್ ಫಾರೂಕ್ ಯಾನೆ ಆರ್‌ಟಿಒ ಉಮರ್ (51) ಬಂಧಿತ ಆರೋಪಿಗಳು.
ಆ.21ರಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಆರ್. ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಲಾಯಿತು.
ವಂಚನಾ ಜಾಲವು ವಾಹನ ಮಾಲಕರ ಗಮನಕ್ಕೆ ಬಾರದ ರೀತಿಯಲ್ಲಿ ವಂಚನೆ ನಡೆಸುತ್ತಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಮಾಲಕರ ಹೆಸರಿನಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಖಾತೆಗಳಿಗೆ ಸಾಲದ ಮೊತ್ತ ವರ್ಗಾವಣೆ ಮಾಡಿಸಿಕೊಂಡು ಹಂಚಿಕೊಳ್ಳುತ್ತಿದ್ದರು. ಆರೋಪಿಗಳು ಬ್ಯಾಂಕ್ ಮತ್ತು ವಾಹನ ಮಾಲಕರಿಗೆ ಸುಮಾರು 45 ಲಕ್ಷ ರೂ. ವಂಚಿಸಿದ್ದರು. ಜಂಟಿ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಮುಂದಿನ ತನಿಖೆಯ ಬಗ್ಗೆ ಮಂಗಳೂರಿನ ‘ಇ ಆಯಂಡ್ ಎನ್‌ಸಿಪಿಎಸ್’ ಠಾಣೆಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶು ಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀನಿವಾಸ ಗೌಡ ಆರ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇ ಆಯಂಡ್ ಎನ್‌ಸಿಪಿಎಸ್ ಠಾಣೆ ಮಂಗಳೂರು ಪೊಲೀಸ್ ನಿರೀಕ್ಷಕ ರಾಮಕೃಷ್ಣ, ಉತ್ತರ ಉಪವಿಭಾಗದ ವಿಶೇಷ ಅಪರಾದ ಪತ್ತೆ ದಳದ ಅಧಿಕಾರಿ ಸಿಬ್ಬಂದಿ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಮತ್ತು ಇ ಆಯಂಡ್ ಎನ್‌ಸಿಪಿಎಸ್ ಠಾಣೆ ಸಿಬ್ಬಂದಿ ಪಾಲ್ಗೊಂಡಿದ್ದರು.
Good riddance. Make them pay back everything and throw them behind bars for good.