COVID-19 ಕ್ಕೆ ಸಂಬಂಧಿಸಿದಂತೆ ಅಂಚೆ ಇಲಾಖೆಯ ಗ್ರಾಹಕರಿಗೆ ಸೂಚನೆ
ಮಂಗಳೂರು : ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಅಂಚೆ ಇಲಾಖೆಯ ಗ್ರಾಹಕರಿಗೆ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಸೂಚನೆ ನೀಡಿದ್ದಾರೆ.
1. ರೈಲು, ವಿಮಾನ, ಬಸ್ಸುಗಳ ಸೇವೆ ಸ್ಥಗಿತಗೊಂಡಿರುವುದರಿಂದ ಗ್ರಾಹಕರು ರಿಜಿಸ್ಟರ್ಡ್ ಪತ್ರ, ಪಾರ್ಸೆಲ್, ಸ್ಪೀಡ್ ಪೋಸ್ಟ್ ಗಳನ್ನು ಅಂಚೆ ಇಲಾಖೆಯಿಂದ ರವಾನಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪತ್ರಗಳು ಹಾಗೂ ಪಾರ್ಸೆಲ್ ಗಳನ್ನು ರವಾನಿಸುವುದನ್ನು ಗ್ರಾಹಕರು ಸದ್ಯಕ್ಕೆ ಮುಂದೂಡಬೇಕಾಗಿ ವಿನಂತಿ.
2. ಅಂಚೆ ಡಬ್ಬಿಗಳಲ್ಲಿ ಪತ್ರಗಳನ್ನು ಹಾಕಿದರೂ ಕೂಡ ವಿಳಾಸದಾರರಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ಪತ್ರಗಳನ್ನು ಅಂಚೆಡಬ್ಬಿಗೆ ಹಾಕುವುದನ್ನೂ ಮುಂದೂಡಬೇಕಾಗಿ ವಿನಂತಿ.
3. ವಿದೇಶಗಳಿಗೆ ಸದ್ಯಕ್ಕೆ ಯಾವುದೇ ಪತ್ರ ಹಾಗೂ ಪಾರ್ಸೆಲ್ ಗಳನ್ನು ಕಳುಹಿಸಲು ಅವಕಾಶವಿಲ್ಲ.
4. ಅಂಚೆ ಇಲಾಖೆಯ ಉಳಿತಾಯ ಖಾತೆದಾರರು ಎ. ಟಿ. ಎಂ ಕಾರ್ಡ್ ಗಳ ಮೂಲಕ ಹಣವನ್ನು ಪಡೆಯಬಹುದಾಗಿದೆ.. ಈ ಎ. ಟಿ. ಎಂ ಕಾರ್ಡ್ ಗಳನ್ನು ಅಂಚೆ ಎ.ಟಿ. ಎಂ ಮಾತ್ರವಲ್ಲದೆ ಬ್ಯಾಂಕ್ ಎ. ಟಿ. ಎಂ ನಲ್ಲಿಯೂ ಕೂಡ ಬಳಸಬಹುದಾಗಿದೆ.
5. ಅಂಚೆ ಇಲಾಖೆಯಲ್ಲಿ ಕೋರ್ ಬ್ಯಾಕಿಂಗ್ ಸೌಲಭ್ಯ ಇರುವುದರಿಂದ ತಮ್ಮ ಖಾತೆ ಯಾವುದೇ ಅಂಚೆ ಕಛೇರಿಯಲ್ಲಿದ್ದರೂ ಗ್ರಾಹಕರು ಸಮೀಪದ ಅಂಚೆ ಕಛೇರಿಯಲ್ಲಿ ವ್ಯವಹಾರವನ್ನು ಮಾಡಬಹುದಾಗಿದೆ.
6. ವೃದ್ಧಾಪ್ಯ ವೇತನ, ವಿಧವಾವೇತನ, ವಿಕಲಚೇತನ ವೇತನ ಮೊದಲಾದ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಜನವರಿ ತಿಂಗಳವರೆಗೆ ಮಾತ್ರ ರಾಜ್ಯ ಸರಕಾರ ಅಂಚೆ ಕಛೇರಿಗಳಿಗೆ ಕಳುಹಿಸಿದೆ. ಫೆಬ್ರವರಿ ತಿಂಗಳ ಪಿಂಚಣಿಯು ರಾಜ್ಯ ಸರಕಾರದಿಂದ ಕಳುಹಿಸಲ್ಪಟ್ಟ ತಕ್ಷಣ ಮಾಧ್ಯಮದ ಮೂಲಕ ತಿಳಿಸಲಾಗುವುದು. ಅಲ್ಲಿಯವರೆಗೆ ಫಲಾನುಭವಿಗಳು ಅಂಚೆ ಕಛೇರಿಗೆ ಬಂದು ವಿಚಾರಣೆ ಮಾಡುವುದು ಬೇಡ.
7. ಯಾವುದೇ ರೀತಿಯ ವಿಚಾರಣೆಗಳನ್ನು ದೂರವಾಣಿ ಮೂಲಕ ಸಮೀಪದ ಅಂಚೆ ಕಛೇರಿಗೆ ಕರೆ ಮಾಡುವ ಮೂಲಕ ಪಡೆದುಕೊಳ್ಳಬೇಕಾಗಿ ಕೋರಿಕೆ. ಎಲ್ಲಾ ಇಲಾಖಾ ಅಂಚೆ ಕಛೇರಿಗಳ ಅಧಿಕೃತ ದೂರವಾಣಿ ಸಂಖ್ಯೆ ಗೂಗಲ್ ನಲ್ಲಿ ಲಭ್ಯವಿದೆ.
8. ಅಂಚೆ ಇಲಾಖೆಯಲ್ಲಿ ಅನೇಕ ಆನ್ ಲೈನ್ ಸೇವೆಗಳಿದ್ದು ಆನ್ ಲೈನ್ ಮೂಲಕ ಅಂಚೆ ಜೀವವಿಮೆ, ಗ್ರಾಮೀಣ ಅಂಚೆ ಜೀವವಿಮೆ ಪ್ರೀಮಿಯಂಗಳನ್ನು ಪಾವತಿಸಬಹುದು. ಪೋಸ್ಟ್-ಇನ್ಪೋ ಮೊಬೈಲ್ ಆಪ್ ಮೂಲಕ ಅಂಚೆ ಇಲಾಖೆಯ ಸಮಗ್ರ ಸೇವಾ ವಿವರ ತಿಳಿಯಬಹುದು.ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್, ಮನಿಯಾರ್ಡ್ರ್ ಗಳು ಪಾವತಿ/ಬಟವಾಡೆಯ ಯಾವ ಹಂತದಲ್ಲಿದೆ ಎಂದು ತಿಳಿಯಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಆಪ್ ಮೂಲಕ ಗ್ರಾಹಕರು ತಮ್ಮ ಮನೆಯಿಂದಲೇ ಆರ್. ಡಿ, ಸುಕನ್ಯಾ ಸಮೃದ್ಧಿ, ಪಿ.ಪಿ.ಎಫ್ ಖಾತೆಗಳಿಗೆ ಹಣ ಜಮಾ ಮಾಡಬಹುದು. ಅಂಚೆ ಉಳಿತಾಯ ಖಾತೆಯಿಂದ ಹಣವನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಅಂಚೆ ಉಳಿತಾಯ ಖಾತೆಯಲ್ಲಿಯೂ ಮೊಬೈಲ್ ಬ್ಯಾಕಿಂಗ್ ಹಾಗೂ ಇಂಟರ್ ನೆಟ್ ಸೌಲಭ್ಯಗಳಿದ್ದು ಬಹುತೇಕ ವ್ಯವಹಾರಗಳನ್ನು ಆನ್ ಲೈನ್ ನಲ್ಲಿಯೇ ಮಾಡಬಹುದಾಗಿದೆ. ಗ್ರಾಹಕರು ಈ ಆನ್ ಲೈನ್ ಸೌಲಭ್ಯಗಳನ್ನು ಹೆಚ್ಚಾಗಿ ಬಳಸುವುದರ ಮೂಲಕ ಈ ಸೂಕ್ಷ್ಮ ಪರಿಸ್ಥಿತಿಯಲ್ಲಿಅಂಚೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ವಿನಂತಿ.