Home Mangalorean News Kannada News ಉಡುಪಿ: ಮರಳು ಗಣಿಗಾರಿಕೆ- ಜಿಲ್ಲಾ ಮಟ್ಟದ ಸಮಿತಿ ರಚನೆ

ಉಡುಪಿ: ಮರಳು ಗಣಿಗಾರಿಕೆ- ಜಿಲ್ಲಾ ಮಟ್ಟದ ಸಮಿತಿ ರಚನೆ

Spread the love

ಉಡುಪಿ: ಜಿಲ್ಲೆಯಲ್ಲಿ ಮರಳು ಕಲ್ಲು ಗಣಿಗಾರಿಕೆ ಸಂಬಂಧಿಸಿದ ಪರಿಸರ ವಿಮೋಚನ ಅನುಮತಿ ಪತ್ರ ಪಡೆಯಲು ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಜಿಲ್ಲಾ ಮಟ್ಟದ ಎರಡು ಸಮಿತಿಯನ್ನು ರಚಿಸಲಾಯಿತು.
ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣವಲ್ಲದ (ನಾನ್ ಸಿ ಆರ್ ಝಡ್), ಕರಾವಳಿ ನಿಯಂತ್ರಣ ವಲಯ (ಸಿ ಆರ್ ಝಡ್), ಪ್ರದೇಶದ ನದಿ ಪಾತ್ರಗಳಲ್ಲಿ ಗುರುತಿಸಿರುವ ಸ್ಯಾಂಡ್ ಬ್ಲಾಕ್‍ಗಳು ಮತ್ತು ಸ್ಯಾಂಡ್ ಬಾರ್‍ಗಳಲ್ಲಿ ಮರಳು ತೆಗೆಯುವ ಬಗ್ಗೆ ಇಂದು ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಹಾಗೂ ಸಮಿತಿಯನ್ನು ರಚಿಸಲಾಯಿತು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಸರ ಅಘಾತ ಅಂದಾಜೀಕರಣ ಪ್ರಾಧಿಕಾರ (District Level Environment Impact Assessment Authority) ಹಾಗೂ ಮುಖ್ಯ ಕಾರ್ಯಪಾಲಕ ಅಭಿಯಂತರರು ಸಣ್ಣ ನೀರಾವರಿ ಇಲಾಖೆಯವರ ಅಧ್ಯಕ್ಷತೆಯಲ್ಲಿನ ಜಿಲ್ಲಾ ಮಟ್ಟದ ಪರಿಣಿತ ಗುಣಮಟ್ಟದ ಸಮಿತಿ (District Level Expert Appraisal Committee) ರಚಿಸಲಾಯಿತು.
ಕರಾವಳಿ ನಿಯಂತ್ರಣ ವಲಯವಲ್ಲದ ಮರಳು ಟೆಂಡರ್ ಪ್ರಕ್ರಿಯೆ ಮುಗಿದಿರುವ 4 ಬ್ಲಾಕ್‍ಗಳಲ್ಲಿ ಮರಳುಗಾರಿಕೆ ಆರಂಭಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮಾರ್ಚ್ 31ರೊಳಗೆ 4 ಬ್ಲಾಕ್ ಗಳಲ್ಲಿ ಮರಳುಗಾರಿಕೆ ಆರಂಭಿಸಲು ಸೂಚಿಸಿದರು.
ಏಪ್ರಿಲ್ ಅಂತ್ಯದೊಳಗೆ ಮತ್ತೆ 5 ಬ್ಲಾಕ್‍ಗಳಲ್ಲಿ ಮರಳುಗಾರಿಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಸಿ ಆರ್ ಝಡ್ ವಲಯದಲ್ಲಿ 556214.562 ಲಕ್ಷ ಮೆಟ್ರಿಕ್ ಟನ್ ಮರಳುಗಾರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗ ಮತ್ತೆ ಹೆಚ್ಚುವರಿಯಾಗಿ 1.72682 ಲಕ್ಷ ಮೆಟ್ರಿಕ್ ಟನ್ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ಕೋದಂಡರಾಮಯ್ಯ ಸಭೆಗೆ ಮಾಹಿತಿ ನೀಡಿದರು.
ಮರಳು ಗಣಿಗಾರಿಕೆ ಸಂಬಂಧಿಸಿದ ಕರಾವಳಿ ನಿಯಂತ್ರಣ ವಲಯ ನದಿ ಪಾತ್ರಗಳಲ್ಲಿ ಈಗಾಗಲೇ ಗುರುತಿಸಿರುವ 30 ಸ್ಯಾಂಡ್ ಬಾರ್ ಗಳಲ್ಲಿ ಒಟ್ಟು ಮರಳಿನ ಪ್ರಮಾಣ ಕಡಿಮೆ ಇರುವುದರಿಂದ ಸದರಿ ಬಾರ್‍ಗಳಲ್ಲಿ ಹೆಚ್ಚುವರಿ ಮರಳಿನ ಪ್ರಮಾಣದ ತಾಂತ್ರಿಕ ವರದಿಯನ್ನು ಜಿಲ್ಲಾ ಮಟ್ಟದ ಪರಿಣತ ಗುಣಮಟ್ಟದ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಡಿವೈಎಸ್‍ಪಿ ಕುಮಾರಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಎಂ.ಎಲ್, ಪಿಡಬ್ಲ್ಯೂಡಿ ಎಕ್ಸಿಕ್ಯುಟಿವ್ ಇಂಜಿನಿಯರ್ ಚಂದ್ರಶೇಖರ್, ಮಾಲಿನ್ಯ ನಿಯಂತ್ರಣ ಅಧಿಕಾರಿ ವಿವೇಕ್, ಮೀನುಗಾರಿಕಾ ಇಲಾಖೆ ಅಧಿಕಾರಿಗಳು, ಮರಳು ಕಾರ್ಮಿಕ ಸಂಘದ ಪ್ರತಿನಿಧಿಗಳು, ತಹಸೀಲ್ದಾರ್ ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version