10 ನೇ ತಂಡದ ಬುನಾದಿ ಪೋಲಿಸ್ ತರಬೇತಿ ಉದ್ಘಾಟನೆ

Spread the love

ಉಡುಪಿ: ಉಡುಪಿ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 10ನೇ ತಂಡದ ಬುನಾದಿ ಪೊಲೀಸ್ ತರಬೇತಿಯ ಉದ್ಘಾಟನಾ ಸಮಾರಂಭವು ಬುಧವಾರ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರೂ ಆದಂತಹ ಕೆ. ಅಣ್ಣಾಮಲೈರವರು ಪ್ರಶಿಕ್ಷಣಾರ್ಥಿಯ ಮೂಲಕವೇ ಮೊದಲು ದೀಪ ಬೆಳಗುವುದಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಪೊಲೀಸ್ ತರಬೇತಿ ಶಾಲೆಯಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿಯವರಿಗೇ ಮೊದಲ ಪ್ರಾಶಸ್ತ್ಯವೆಂಬುದನ್ನು ಸಾರಿದರು.

police-traing-school-udupi

ತರಬೇತಿ ಶಾಲೆಯ ಉಪ-ಪ್ರಾಂಶುಪಾಲರಾದ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.ಜೆ. ಕುಮಾರಸ್ವಾಮಿಯವರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣಗೈದರು. ಮುಖ್ಯ ಅತಿಥಿಯಾಗಿ ಎ.ಡಿ.ಪಿ. ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್‌ರವರು ಉಪಸ್ಥಿತರಿದ್ದರು.

ಕೆ.ಅಣ್ಣಾಮಲೈರವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ತರಬೇತಿಯ ಮಹತ್ವದ ಕುರಿತು ಸವಿಸ್ತಾರವಾಗಿ ತಿಳಿಸಿದರು. ತರಬೇತಿಗಾಗಿ ಆಗಮಿಸಿದ್ದ ಎಲ್ಲಾ ನೂರು ಜನ ಪ್ರಶಿಕ್ಷಣಾರ್ಥಿಯವರ ಪರಿಚಯವನ್ನು ಮಾಡಿಸಿಕೊಂಡು, ತರಬೇತಿ ಅವಧಿಯಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮಲ್ಲಿರುವ ಭಯವನ್ನು ಹೋಗಲಾಡಿಸಿ, ಧೈರ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ತಿಳಿಸಿದರು. ಅನಿವಾರ್ಯವೋ, ಆಕಸ್ಮಿಕವೋ ಪೊಲೀಸ್ ಇಲಾಖೆಗೆ ಸೇರಿದ ಪ್ರಶಿಕ್ಷಣಾರ್ಥಿಯವರು ತಮ್ಮನ್ನು ಇಲಾಖೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು, ವ್ಯಾಯಾಮದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ ತರಬೇತಿ ಮುಗಿಯುವ ವೇಳೆಗೆ ಅವರು ನಿಜವಾದ ಪೊಲೀಸ್ ಆಗುವುದೇ ನನ್ನ ಆಸೆ ಎಂಬುದಾಗಿ ತಿಳಿಸಿದರು. “POLICE” ಎಂದರೆ “Protection Of Life In Civil Establishment” ಎಂಬುದಾಗಿ ತಿಳಿಹೇಳಿದ ಅವರು ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆಯೇ ಪೊಲೀಸ್ ವ್ಯವಸ್ಥೆಯಲ್ಲಿ ಪ್ರಧಾನ ಅಂಗ ಎಂಬುದಾಗಿ ಒತ್ತಿಹೇಳಿದರು.

ಬುನಾದಿ ತರಬೇತಿಗಾಗಿ ರಾಜ್ಯದ ವಿವಿಧೆಡೆಯಿಂದ ಒಟ್ಟು ನೂರು ಜನ ರೇಲ್ವೇ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಆಗಮಿಸಿರುತ್ತಾರೆ. ಇವರಿಗೆ 9 ತಿಂಗಳ ತರಬೇತಿ ಅವಧಿಯಲ್ಲಿ ನುರಿತ ಉಪನ್ಯಾಸಕರಿಂದ ಒಳಾಂಗಣ ಹಾಗೂ ಹೊರಾಂಗಣ ತರಬೇತಿಯನ್ನು ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್‌ಪಿರವರಾದ ಡಾ. ಪ್ರಭುದೇವ ಮಾನೆ, ಶ್ರೀ ಹರೀಶ್ಚಂದ್ರ ಹೆಜಮಾಡಿ, ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಕೃಷ್ಣ, ಶ್ರೀ ಎಸ್.ಎಸ್.ನಾಯಕ್, ಎಎಒ ಶ್ರೀ ಶಿವಪ್ಪ, ಡಾ. ನಾಗರಾಜಮೂರ್ತಿ ಹಾಗೂ ಇತರ ಅಧಿಕಾರಿಯವರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಶ್ರೀ ಹರೀಶ್ ವಂದನಾರ್ಪಣೆಗೈದರು. ಶ್ರೀ ಮನಮೋಹನ್, ಪ್ರಭಾರ ಪೊಲೀಸ್ ಉಪನಿರೀಕ್ಷಕರು, ಜಿಲ್ಲಾ ನಿಯಂತ್ರಣ ಕೊಠಡಿ, ಉಡುಪಿರವರು ಕಾರ್ಯಕ್ರಮ ನಿರ್ವಹಿಸಿದರು.


Spread the love