SFI ನಾಯಕರ ಮೇಲೆ ಸುಳ್ಳು ಕೇಸು ದಾಖಲಿಸುವುದರ ವಿರುದ್ಧ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
ಮಂಗಳೂರು: 2016 ಸೆಪ್ಟೆಂಬರ್ 2ರಂದು ಕಾರ್ಮಿಕ ವರ್ಗದ 17 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಅಖಿಲಭಾರತ ಮಹಾಮುಷ್ಕರವು ಭಾರತ್ ಬಂದ್ ಆಗಿ ಪರಿವರ್ತನೆಗೊಂಡು ದ.ಕ ಜಿಲ್ಲೆಯಲ್ಲೂ ಅತ್ಯಂತ ಯಶಸ್ವಿಯಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಅಲ್ಲಲ್ಲಿ ನಡೆದ ಕಲ್ಲು ತೂರಾಟ ಪ್ರಕರಣವನ್ನು ಕೇಂದ್ರೀಕರಿಸಿ ಬಂದರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು. ಆದರೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ.
ಈ ಬಗ್ಗೆ ಬಂದ್ಗೆ ಕರೆ ನೀಡಿದ್ದ ಸಿಐಟಿಯುನ ಮುಖಂಡತ್ವಕ್ಕೆ ಯಾವುದೇ ಕನಿಷ್ಠ ಮಾಹಿತಿಯನ್ನು ಒದಗಿಸದೆ ಭೀಕರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ರೀತಿಯಲ್ಲಿ ಸೆಪ್ಟೆಂಬರ್ 13ರಂದು ಸಂಜೆ 6:30ಕ್ಕೆ ಬಂದರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಶಾಂತಾರಾಮ್ ಕುಂದರ್, ಸುಜನ್ ಶೆಟ್ಟಿ ಸೇರಿದಂತೆ ಹಲವು ಪೊಲೀಸರು ಬಜಾಲ್ ಪಕ್ಕಲಡ್ಕದ ಎಸ್ಎಫ್ಐ ನಾಯಕರಾದ ಹಾಗೂ ಸ್ವತಃ ವಿದ್ಯಾರ್ಥಿಗಳಾದ ಧೀರಾಜ್ (21) ಹಾಗೂ ರಾಜೇಶ್ (20) ಎಂಬವರ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಎದುರಲ್ಲೇ ಹಲ್ಲೆ ನಡೆಸಿ ಅನತಿ ದೂರದವರೆಗೆ ಮೆರವಣಿಗೆಯಲ್ಲಿ ಕರೆದು ಕೊಂಡುಹೋಗಿ, ಪ್ರದೇಶದಲ್ಲಿ ಭಾರಿ ಅಪರಾಧ ಕೃತ್ಯವೆಸಗಿದವರಂತೆ ಇಬ್ಬರ ಮೇಲೂ ಅಶ್ಲೀಲ ಭಾಷೆಗಳನ್ನು ಪ್ರಯೋಗಿಸಿರುವುದಲ್ಲದೆ, ಬಜಾಲ್ನಿಂದ ಬಂದರು ಪೊಲೀಸ್ ಠಾಣೆಗೆ ಬರುವವರೆಗೆ ಗಾಡಿಯ ಒಳಗೆ ಹಲ್ಲೆ ನಡೆಸಿದ್ದಾರೆ. ರಾತ್ರಿ ಹೊತ್ತು ಠಾಣೆಯಲ್ಲೇ ಕಳೆದು ಮರುದಿನ ಬೆಳಿಗ್ಗೆ ಇಬ್ಬರ ಕೈಗೂ ಕೋಳ ತೊಡಿಸಿ ವೆನ್ಲಾಕ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕೊಂಡೊಯ್ದಿದ್ದು, ಈ ಬಗ್ಗೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದರೂ ಪೊಲೀಸರು ಕ್ಯಾರೇ ಅನ್ನಲಿಲ್ಲ.
ಇದೇ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಬಂದ್ಗೆ ಸಂಬಂಧಿಸಿ ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂದು ವಿಚಾರಿಸಿದಾಗ ಸೆಪ್ಟೆಂಬರ್ 26ರವರೆಗೆ ಯಾವುದೇ ಎಫ್ಐಆರ್ ದಾಖಲಾಗಿರುವುದಿಲ್ಲ ಎಂಬ ವಿಚಾರವನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳೇ ಸ್ವತಃ ತಿಳಿಸಿರುತ್ತಾರೆ. ಇಷ್ಟರ ನಂತರವೂ ಯಾವ ಕಾರಣಕ್ಕಾಗಿ ರಾತ್ರೋರಾತ್ರಿ ಎಫ್ಐಆರ್ ದಾಖಲಿಸಲಾಗಿದೆ.
ಕಣ್ಣೂರಿನ ಮರಳು ಮಾಫಿಯಾದ ಕಿಂಗ್ಪಿನ್ಗಳ ಒತ್ತಾಯದ ಮೇರೆಗೆ ಸೆಪ್ಟೆಂಬರ್ 27ರಂದು ಮತ್ತೆ 1 ಪ್ರಕರಣವನ್ನು ದಾಖಲಿಸಿ ಮರುದಿನ ರಾತ್ರಿ 8.00 ಗಂಟೆಗೆ ಪ್ರಕರಣಕ್ಕೆ ಸಂಬಂಧಪಡದ ಕಣ್ಣೂರಿನ ಡಿವೈಎಫ್ಐ ನಾಯಕರುಗಳಾದ ಉಸ್ಮಾನ್ ಹಾಗೂ ಇಸಾಕ್ ಇವರನ್ನು ಬಂಧಿಸಲಾಗಿದೆ. ಮಾತ್ರವಲ್ಲ ಇದೇ ಪ್ರಕರಣದಲ್ಲಿ ಮತ್ತಷ್ಟು ಡಿವೈಎಫ್ಐ ನಾಯಕರನ್ನು ಸೇರಿಸಿ ಜೈಲಿಗಟ್ಟುವ ಕುತಂತ್ರವನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶರೀಫ್ ಹಾಗೂ ಸುಧಾಕರ್ರವರು ನಡೆಸುತ್ತಿದ್ದಾರೆ.
ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಹಾಗೂ ಅನ್ಯಾಯ, ದಬ್ಬಾಳಿಕೆಗಳ ವಿರುದ್ಧ ನಿರಂತರ ಧ್ವನಿ ಎತ್ತುವ ಎಸ್ಎಫ್ಐ-ಡಿವೈಎಫ್ಐ ಸಂಘಟನೆಯ ನಾಯಕರ ವಿರುದ್ಧ ಸುಳ್ಳು ಕೇಸು ದಾಖಲಿಸುವ ಮೂಲಕ ಜನಚಳುವಳಿಗಳನ್ನು ಕತ್ತು ಹಿಸುಕಲು ಹೊರಟಿರುವ ಬಂದರು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈಗಾಗಲೇ ದಾಖಲಿಸಿರುವ ಸುಳ್ಳು ಕೇಸುಗಳನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿ DYFI, SFI, CITU ಸಂಘಟನೆಗಳ ಜಂಟಿ ಆಶ್ರಯದಲ್ಲಿ ತಾ. 17-10-2016 ಬೆಳಿಗ್ಗೆ 10.30ಕ್ಕೆ ಮಿನಿವಿಧಾನ ಸೌಧದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಪದ್ರರ್ಶನವನ್ನು ಹಮ್ಮಿಕೊಂಡಿದೆ ಎಂದು DYFI ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, CITUನ ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, SFIನ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.