SSLC ಫಲಿತಾಂಶ ಪ್ರಕಟ: ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ; ಯಾದಗಿರಿ ಕೊನೆಯ ಸ್ಥಾನ
ಬೆಂಗಳೂರು: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಹತ್ತನೇ ತರಗತಿ ಫಲಿತಾಂಶ ಸೋಮವಾರ ಮಧ್ಯಾಹ್ನ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪ್ರಕಟಿಸಿದರು.
ಈ ಬಾರಿ ಒಟ್ಟು 582316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಟ್ಟು 71.80% ಫಲಿತಾಂಶ ದಾಖಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನಿಯಾಗಿದ್ದು, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರ ಎರಡನೇ, ಮಧುಗಿರಿ ಮೂರನೇ, ಮಂಡ್ಯ ನಾಲ್ಕು ಮತ್ತು ಚಿತ್ರದುರ್ಗ ಜಿಲ್ಲೆ ಐದನೇ ಸ್ಥಾನ ಪಡೆದುಕೊಂಡಿವೆ. ಉಡುಪಿ ಜಿಲ್ಲೆ ಈ ಬಾರಿ 7 ನೇ ಸ್ಥಾನ ಪಡೆದರೆ ದಕ್ಷಿಣಕನ್ನಡ ಜಿಲ್ಲೆ 12 ನೇ ಸ್ಥಾನ ಪಡೆದಿದೆ.
ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ 5,82,316 ಮಂದಿ ಉತ್ತೀರ್ಣರಾಗಿದ್ದು, 2,28,734 ಅನುತ್ತೀರ್ಣರಾಗಿದ್ದಾರೆ. ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಕಳೆದ ಸಾಲಿನಲ್ಲಿ ಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 66.41 ಬಾಲಕರು ಮತ್ತು ಶೇ.77.74 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಒಟ್ಟು 227 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿತ್ತು. 52,219 ಮೌಲ್ಯಮಾಪಕರು 8 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು,
ಜುಲೈ 13ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿತ್ತು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಇದ್ದ ಕಾರಣ ಎರಡು ದಿನ ತಡವಾಗಿ ಮೌಲ್ಯಮಾಪನ ಆರಂಭವಾಗಿತ್ತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ತಿಳಿಸಿದ್ದಾರೆ.