ಅ.12ರಂದು ದೆಹಲಿಯಲ್ಲಿ ಯಕ್ಷಗಾನ ಸಾಹಿತ್ಯ ವಿಚಾರ ಸಂಕಿರಣ ಮತ್ತು ಪ್ರದರ್ಶನ

Spread the love

ಅ.12ರಂದು ದೆಹಲಿಯಲ್ಲಿ ಯಕ್ಷಗಾನ ಸಾಹಿತ್ಯ ವಿಚಾರ ಸಂಕಿರಣ ಮತ್ತು ಪ್ರದರ್ಶನ

ದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಷನ್ ದೆಹಲಿ ಘಟಕ ಜಂಟಿಯಾಗಿ ಅ.12ರಂದು ದೆಹಲಿಯಲ್ಲಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೊದಲ ಬಾರಿಗೆ ದೇಶದ ರಾಜಧಾನಿಯಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯದ ವಿಚಾರ ಸಂಕಿರಣವನ್ನೂ ಏರ್ಪಡಿಸಿದೆ.

ರಾಮಾಯಣ ಪ್ರಸಂಗಗಳ ಸಾಹಿತ್ಯಿಕ ಮೌಲ್ಯಗಳ ಬಗ್ಗೆ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ, ಮಹಾಭಾರತ ಪ್ರಸಂಗ ಸಾಹಿತ್ಯದ ಬಗ್ಗೆ ಯಕ್ಷಗಾನ ವಿಮರ್ಶಕರಾದ ಪೃಥ್ವಿರಾಜ್ ಕವತ್ತಾರು, ಯಕ್ಷಗಾನದ ಸಾಹಿತ್ಯಿಕ ಮೌಲ್ಯಗಳು ಮತ್ತು ಸಂಗೀತ ಕುರಿತು ಖ್ಯಾತ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರವರು ಪ್ರಬಂಧ ಮಂಡಿಸಲಿದ್ದಾರೆ. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ ಉದ್ಘಾಟಿಸಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಶ್ರೀ ಕೆ. ಶ್ರೀನಿವಾಸ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಡಾ. ಅವನೀಂದ್ರನಾಥ್ ರಾವ್ ಸಂಯೋಜಿಸಲಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ದೆಹಲಿ ಘಟಕದ ಸಂಚಾಲಕ ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಎಂ.ಎಲ್.ಸಾಮಗ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗುರುತಿಸಿ ಘಟಕದ ವತಿಯಿಂದ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಇದಾದ ಬಳಿಕ ಹನುಮಗಿರಿ ಮೇಳದ ಆಯ್ದ ಕಲಾವಿದರಿಂದ ಕಂಸ ವಿವಾಹ – ಕಂಸ ವಧೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ.


Spread the love