ಅ 30: ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ 25ನೇ ವರ್ಷದ ನಮ್ಮಕುಡ್ಲ ಗೂಡುದೀಪ ಸ್ಪರ್ಧೆ
ಆಧುನಿಕತೆಯೊಂದಿಗೆ ಬದಲಾಗುತ್ತಿರುವ ಸಮಾಜದಲ್ಲಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದ ಹಲವು ಹಳೆಯ ಸಂಪ್ರದಾಯ ಮರೆಯಾಗುತ್ತಿದ್ದು, ಅದರಲ್ಲಿ ದೀಪಾವಳಿಯ ಹಬ್ಬದ ಆಚರಣೆಯೂ ಒಂದಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಮನೆಯವರೆಲ್ಲರೂ ಸೇರಿ ತಯಾರಿಸುತ್ತಿದ್ದ ಗೂಡುದೀಪದ ಜಾಗವನ್ನು ಅಂಗಡಿಯಲ್ಲಿ ಸಿಗುವ ಗೂಡು ದೀಪಗಳು ಆವರಿಸಿಕೊಂಡಿವೆ. ಹೀಗಾಗಿ ಗೂಡುದೀಪ ರಚಿಸುವ ಕಲೆಯನ್ನು ಉಳಿಸುವ ಜೊತೆ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 25 ವರ್ಷಗಳ ಹಿಂದೆ ‘ನಮ್ಮ ಕುಡ್ಲ’ ವಾಹಿನಿ ಗೂಡುದೀಪ ಸ್ಪರ್ಧೆಯನ್ನು ಆಯೋಜನೆ ಮಾಡಲು ಆರಂಭಿಸಿತ್ತು. ಇದೀಗ 25ನೇ ವರ್ಷದ ಗೂಡುದೀಪದ ಸ್ಪರ್ಧೆಯು ದಿನಾಂಕ 30-10-2024,ಬುಧವಾರ ರಂದು ಕುದ್ರೋಳಿ ಶ್ರೀಕ್ಷೇತ್ರ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಎಂಬ ಮೂರು ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಸಲಾಗುತ್ತಿದೆ. ಈ ಮೂರು ವಿಭಾಗದಲ್ಲಿ ನಡೆಯುವ ಗೂಡುದೀಪ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಾರೆ. ಈ ಬಾರಿಯೂ ಈ ಮೂರೂ ವಿಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕೆಲವೊಂದು ನಿಯಮಗಳಿದ್ದು, ಅವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ.
‘ನಮ್ಮಕುಡ್ಲ’ ಗೂಡುದೀಪ ಸ್ಪರ್ಧೆಯ ನಿಯಮಗಳು ಇಂತಿವೆ :
ಸಾಂಪ್ರದಾಯಿಕ ವಿಭಾಗ : ಬಣ್ಣದ ಕಾಗದ, ಗ್ಲಾಸ್ ಪೇಪರ್ ಅಥವಾ ಬಟ್ಟೆಯಿಂದ ಗೂಡುದೀಪ ತಯಾರು ಮಾಡಿರಬೇಕು. ಗೂಡುದೀಪಕ್ಕೆ ಬಾಲ ಇರಬೇಕು ಹಾಗೂ ಅದು ನೇತು ಹಾಕುವಂತಿರಬೇಕು. ಗೂಡುದೀಪದ ಒಳಗಿನ ಬೆಳಕು ಹೊರಗೆ ಕಾಣುವಂತೆ ತಯಾರಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಯಾವುದೇ ಆಧುನಿಕ ಪರಿಕರಗಳನ್ನು ಬಳಸುವಂತಿಲ್ಲ. ಬೇಗಡೆಯನ್ನು ಉಪಯೋಗಿಸಲು ಅವಕಾಶ ಇದೆ. ಗೂಡುದೀಪ ಶುದ್ಧವಾಗಿ ಸಾಂಪ್ರದಾಯಿಕವಾಗಿಯೇ ಇರಬೇಕು.
ಆಧುನಿಕ ವಿಭಾಗ : ಆಧುನಿಕ ಗೂಡುದೀಪದಲ್ಲಿ ಯಾವುದೇ ಆಧುನಿಕ ಪರಿಕರಗಳನ್ನು ಬಳಸಬಹುದಾಗಿದೆ. ಆದರೆ, ಸಾಂಪ್ರದಾಯಿಕ ಗೂಡುದೀಪದಂತೆ ಇದೂ ಕೂಡ ನೇತು ಹಾಕುವಂತೆ ಇರಬೇಕು. ಗೂಡುದೀಪದಲ್ಲಿ ಗೂಡು ಇರುವುದು ಕಡ್ಡಾಯವಾಗಿದ್ದು, ಪ್ರತಿಕೃತಿಯ ಹೋಲಿಕೆ ಇರಬಾರದು.
ಪ್ರತಿಕೃತಿ ವಿಭಾಗ : ಇದರಲ್ಲಿ ಯಾವುದೇ ಕಲಾತ್ಮಕ ರಚನೆಗೆ ಅವಕಾಶವಿದೆ. ಯಾವುದೇ ಆಧುನಿಕ ಪರಿಕರಗಳನ್ನು ಇದರಲ್ಲಿ ಬಳಕೆ ಮಾಡಬಹುದಾಗಿದೆ. ಆದಷ್ಟು ಹೊಸತನವನ್ನು ಅಳವಡಿಸಿಕೊಂಡು ಪ್ರತಿಕೃತಿಯ ರಚನೆ ಇರಬೇಕು.