ಅಂಕೋಲ ಚುನಾವಣಾ ಪ್ರಚಾರದ ವೇಳೆ ಚಿಕನ್ ಕಬಾಬ್ ಸವಿದ ರಾಹುಲ್ ಗಾಂಧಿ
ಅಂಕೋಲಾ (ಪ್ರಜಾವಾಣಿ): ಅಂಕೋಲಾದಲ್ಲಿ ಚುನಾವಣೆ ಪ್ರಚಾರ ಅಂಗವಾಗಿ ಗುರುವಾರ ರೋಡ್ ಷೋ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇಲ್ಲಿನ ದಿನಕರ್ ದೇಸಾಯಿ ರಸ್ತೆಯಲ್ಲಿನ ಕಾಮತ್ ಫ್ಲಸ್ ಹೋಟಲ್ ನಲ್ಲಿ ಊಟ ಸವಿದರು.
ಕರಾವಳಿ ವಿಶೇಷ ಆಹಾರವಾದ ಚಿಕನ್ ಕಬಾಬ್, ರಸಂ, ತಂದೂರಿ ಕಬಾಬ್, ವೆಜ್ ಕುರ್ಮಾ, ಚಿಕನ್ ವಿನ್ಲೆಟ್, ಚಿಕನ್ ಮಸಾಲ, ಗ್ರೀನ್ ಸಾಲಡ್, ಬಟರ್ ಮಿಲ್ಕ್, ಸೋಡ ಶರಬತ್ ತಂಪುಪಾನಿಯಗಳನ್ನು ರಾಹುಲ್ ಸವಿದರು.
ವಿಧಾನಸಭೆ ಚುನಾವಣೆ ಪ್ರಚಾರ ಅಂಗವಾಗಿ ಗುರುವಾರ ನಡೆಸಿದ ರೋಡ್ ಷೋ ವೇಳೆ ಮಾತನಾಡಿದ ಅವರು, ಬಿಜೆಪಿ, ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದ ಬಡವರು, ರೈತರು ತಮ್ಮ ಭವಿಷ್ಯಕ್ಕಾಗಿ ದಿನಕ್ಕೆ 8-10 ಗಂಟೆ ದುಡಿಮೆ ಮಾಡುತ್ತಿದ್ದಾರೆ. ಆದ್ದರಿಂದ ಜನರ ತೆರಿಗೆ ಹಣ ಜನರಿಗೆ ಸಿಗಬೇಕು. ಆದ್ದರಿಂದ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ರೈತರು, ಬಡವರು ಸಂಪಾದಿಸಿದ ಹಣವನ್ನು ಕೇಂದ್ರದ ಮೋದಿ ಸರ್ಕಾರ 10-15 ಉದ್ಯಮಿಗಳ ಲಾಭಕ್ಕೆ ನೀಡುತ್ತಿದೆ. ಕಾಂಗ್ರೆಸ್ ಜನರ ಉಪಯೋಗಕ್ಕೆ ಬಳಸುತ್ತಿದೆ. ಇದು ನಮ್ಮ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ ಎಂದರು.
ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ನಮ್ಮ ನೀತಿಯಲ್ಲ ಎನ್ನುತ್ತದೆ ಎಂದು ಟೀಕಿಸಿದರು.
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ, ಅವರ ಮಂತ್ರಿ ಮಂಡಲದ ನಾಲ್ಕೈದು ಸದಸ್ಯರು ಜೈಲಿಗೆ ಹೋದರು. ಅಂತಹವರು ಇಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಆಡಳಿತವನ್ನು ನೀವು ನೋಡಿದಿರಿ. ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಯಡಿಯೂರಪ್ಪ ಜೈಲಿಗೆ ಕೂಡ ಹೋಗಿ ಬಂದರು. ಅದೇ ಕಳಂಕಿತ ವ್ಯಕ್ತಿಯನ್ನು ಮತ್ತೆ ಮುಖ್ಯಮಂತ್ರಿ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಲೂಟಿಕೋರರಿಗೆ ಅಧಿಕಾರ ಕೊಡಬೇಡಿ ಎಂದರು.
ನಾವು ನುಡಿದಂತೆ ನಡೆದಿದ್ದೇವೆ. ದಲಿತ, ಅಲ್ಪಸಂಖ್ಯಾತ, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರಿಗೂ ಸಮಾನ ನ್ಯಾಯ ಒದಗಿಸಿದ್ದೇವೆ ಎಂದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಕೇಂದ್ರದಲ್ಲಿರುವ ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯಲು ರಾಹುಲ್ ಗಾಂಧಿ ಅವರ ಕೈ ಬಲಪಡಿಸಿ ಎಂದರು.
ಇದೇವೇಳೆ ವಾಹನದಿಂದ ಇಳಿದ ರಾಹುಲ್, ಸಿದ್ದರಾಮಯ್ಯ, ದೇಶಪಾಂಡೆ, ವೇಣುಗೋಪಾಲ್ ಮತ್ತಿರರು ಸುಮಾರು ಮುಕ್ಕಾಲು ಕಿಲೋಮೀಟರ್ ಪಾದಯಾತ್ರೆ ಮಾಡಿ ಸಾರ್ವಜನಿಕರನ್ನು ಭೇಟಿ ಮಾಡಿದರು.
Kamat hotel aur chicken kabab? Yeh mein kya sun raha hoon?