ಅಂತರ್ಜಾಲ ಬಳಕೆ ಎಚ್ಚರವಿರಲಿ- ಜಿಲ್ಲಾ ನ್ಯಾಯಾಧೀಶರು
ಉಡುಪಿ: ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿನಿತ್ಯದ ಜೀವನದಲ್ಲಿ ಅಂತರ್ಜಾಲದ ಪ್ರಭಾವ ಅತ್ಯಂತ ಪ್ರಮುಖವಾಗಿದೆ, ಇದನ್ನು ಬಳಸುವಾಗ ಅತ್ಯಂತ ಎಚ್ಚರದಿಂದ ಇರುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ವೆಂಕಟೇಶ ನಾಯ್ಕ್ ಟಿ ಅವರು ತಿಳಿಸಿದ್ದಾರೆ.
ಅವರು ಸೋಮವಾರ ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ(ರಿ), ಸಾರ್ವಜನಿಕ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಅಭಿಯೋಗ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂತರ್ಜಾಲದಿಂದ ಈಗ ಜನರ ನಡುವಿನ ಸಂಪರ್ಕ ಹತ್ತಿರವಾಗಿದೆ, ಜನರಿಗೆ ಹೊಸ ಹೊಸ ವಿಚಾರಗಳು ತಿಳಿಯುತ್ತಿವೆ, ಆನ್ಲೈನ್ ವ್ಯಾಪಾರ, ಬ್ಯಾಂಕಿಂಗ್, ಟಿಕೆಟ್ ಬುಕ್ಕಿಂಗ್ ಅಲ್ಲದೇ ವಿದ್ಯಾಭ್ಯಾಸಕ್ಕೂ ಸಹ ನೆರವಾಗಿದೆ ಆದರೆ ಅಂತರ್ಜಾಲದ ಸರಿಯಾದ ಬಳಕೆಯಿಂದ ಎಷ್ಟು ಉಪಯೋಗವಿದೆಯೋ, ತಪ್ಪು ಉಪಯೋಗದಿಂದ ಅಷ್ಟೇ ದುಷ್ಪರಿಣಾಮವಿದೆ, ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರೇರೇಪಣೆ ನೀಡುವಂತಹ ಯಾವುದೇ ಸಂದೇಶ, ಚಿತ್ರಗಳನ್ನು ಇತರರಿಗೆ ರವಾನಿಸಬೇಡಿ, ಸಂದೇಶಗಳನ್ನು ಕಳುಹಿಸುವ ಮುನ್ನ ಪರಿಶೀಲಿಸಿ, ಫೇಸ್ಬುಕ್, ಇ-ಮೇಲ್, ವ್ಯಾಟ್ಸಪ್ ಗಳನ್ನು ಎಚ್ಚರಿಕೆಯಿಂದ ಬಳಸಿ ಎಂದು ನ್ಯಾಯಾಧೀಶರು ತಿಳಿಸಿದರು.
ಪ್ರತಿಯೊಬ್ಬ ನಾಗರೀಕನೂ ಇಂದಿನ ಸಂಕೀರ್ಣ ಯುಗದಲ್ಲಿ ಒಂದಲ್ಲ ಒಂದು ಕಾನೂನಿನ ತೊಡಕುಗಳನ್ನು ಎದುರಿಸಬೇಕಾಗುತ್ತದೆ, ಅಲ್ಲದೇ ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗದವರಿಗೆ ಕಾನೂನಿನ ಯಾವುದೇ ಅರಿವು ಇಲ್ಲ ಇವರಿಗೆ ಕಾನೂನಿನ ಅರಿವು ನೀಡುವುದಕ್ಕಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯುತ್ತಿದೆ, ಸಮಾಜದಲ್ಲಿ ಜನತೆ ಯಾವ ರೀತಿ ಬದುಕಬೇಕು ಎನ್ನುವ ಕುರಿತು ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ವಿವರವಾಗಿ ತಿಳಿಸಲಾಗಿದೆ, ಮೂಲಭೂತ ಕರ್ತವ್ಯಗಳನ್ನು ಅನುಸರಿಸಿ ಸಂವಿಧಾನದ ಆಶೋತ್ತರಗಳನ್ನು ಪ್ರತಿಯೊಬ್ಬರೂ ಪಾಲಿಸುವಂತೆ ನ್ಯಾಯಾಧೀಶರು ತಿಳಿಸಿದರು.
ಉಡುಪಿ ಸರಕಾರಿ ಪದವಿ ಪೂರ್ವ(ಬೋರ್ಡ್) ಕಾಲೇಜಿನ ಪ್ರಾಂಶುಪಾಲ ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಲತಾ, ವಕೀಲರ ಸಂಘದ ಅಧ್ಯಕ್ಷರಾದ ದಯಾನಂದ ಕೆ ಉಪಸ್ಥಿತರಿದ್ದರು.
ವಕೀಲರಾದ ಗುರುರಾಜ್ ಐತಾಳ್ ಅವರು ‘ಅಂತರ್ಜಾಲದ ದುಷ್ಪರಿಣಾಮಗಳು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗಸೂಚಿ’ ಬಗ್ಗೆ ಉಪನ್ಯಾಸ ನೀಡಿದರು. ಉಪನ್ಯಾಸಕಿ ಅನುರಾಧ ಸ್ವಾಗತಿಸಿದರು, ಸುಮಾ ನಿರೂಪಿಸಿದರು.
ಇದಕ್ಕೂ ಮುಂಚೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಜಿಲ್ಲಾ ನ್ಯಾಯಾಧೀಶರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.