ಅಂಬರ್ ಗ್ರೀಸ್ ಡೀಲ್: ಮಫ್ತಿಯಲ್ಲಿದ್ದ ಅಧಿಕಾರಿಗಳ ಮೇಲೆ ಗಂಭೀರ ಹಲ್ಲೆ

Spread the love

ಅಂಬರ್ ಗ್ರೀಸ್ ಡೀಲ್: ಮಫ್ತಿಯಲ್ಲಿದ್ದ ಅಧಿಕಾರಿಗಳ ಮೇಲೆ ಗಂಭೀರ ಹಲ್ಲೆ

  • ಕುಂದಾಪುರದ ಎಂ. ಕೋಡಿಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಹೈಡ್ರಾಮ
  • ನಕಲಿ ಪೊಲೀಸರೆಂಬ ಶಂಕೆಯಲ್ಲಿ ಸಿಐಡಿ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ
  • ಅಧಿಕಾರಿಗಳ ಮೇಲೆ ತಪ್ಪು ಗ್ರಹಿಕೆಯಿಂದ ಹಲ್ಲೆ ನಡೆದಿರುವ ಶಂಕೆ

ಕುಂದಾಪುರ: ಸಮುದ್ರ ತೀರದಲ್ಲಿ ಅಂಬರ್ ಗ್ರೀಸ್ ಮಾರಾಟದ ಬಗ್ಗೆ ( ತಿಮಿಂಗಿಲ ವಾಂತಿ) ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದ ಅರಣ್ಯ ಇಲಾಖೆ ಸಿಐಡಿ ವೀಕ್ಷಣಾ ದಳದ ಅಧಿಕಾರಿಗಳ ಮೇಲೆ ಸ್ಥಳೀಯರು ಗಂಭೀರ ಹಲ್ಲೆ‌ ನಡೆಸಿದ ಘಟನೆ ತಾಲೂಕಿನ ಎಂ. ಕೋಡಿಯಲ್ಲಿ ಬುಧವಾರ ನಡೆದಿದೆ‌.

ಕೋಡಿಯ ಸೌಹಾರ್ದ ಭವನದಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬುಧವಾರ ಮಧ್ಯಾಹ್ನ 1.40 ರ ವೇಳೆಗೆ ಮಾರುವೇಷದಲ್ಲಿ ಮಂಗಳೂರಿನಿಂದ ಬಂದಿದ್ದ ಅರಣ್ಯ ಸಂಚಾರಿ ದಳದ ಸಿಐಡಿ ವಿಭಾಗದ ಎಸ್.ಐ ಜಾನಕಿ ಹಾಗೂ ಸಿಬ್ಬಂದಿಗಳ ತಂಡ ಶೋಧ ಕಾರ್ಯಾಚರಣೆ ನಡೆಸಿ, ಶಂಕಿತರನ್ನು ವಶಕ್ಕೆ ಪಡೆಯುವ ವೇಳೆ ಅಧಿಕಾರಿಗಳ‌ ತಂಡದ ಮೇಲೆ‌ ತಪ್ಪು ಗ್ರಹಿಕೆ ಮಾಡಿ ಆರೋಪಿಗಳು ಹಾಗೂ ಸ್ಥಳೀಯರು ಸೇರಿ ಹಲ್ಲೆ ನಡೆಸಿ ಇಲಾಖೆಯ ಸೇವಾ ಪಿಸ್ತೂಲ್ ಹಾಗೂ 2 ಮೊಬೈಲ್ ಕಿತ್ತುಕೊಂಡಿರುವ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಾದ ಜಯಕರ ರತ್ನಾಕರ, ಅಬುಬಕ್ಕರ್, ಆಸೀಫ್ ಸೇರಿದಂತೆ ಇತರರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಲ ತಿಂಗಳ ಹಿಂದೆ ಕೋಟ ಮಣೂರಿನಲ್ಲಿ ಉದ್ಯಮಿಯೊಬ್ಬರ ಮನೆಗೆ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ದರೋಡೆಕೋರರ ತಂಡ ದರೋಡೆಗೆ ವಿಫಲ ಪ್ರಯತ್ನ ನಡೆಸಿ ಬಳಿಕ ಆರೋಪಿಗಳ ಬಂಧನ ಆಗಿರುವ ಘಟನೆ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದರಿಂದ ಕೋಡಿಯಲ್ಲಿ ಅಧಿಕಾರಿಗಳ ಮೇಲೆ ತಪ್ಪು ಗ್ರಹಿಕೆಯಿಂದ ಹಲ್ಲೆ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಎಸ್.ಐ ನಂಜಾ ನಾಯ್ಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments