ಅಕ್ರಮ ಮದ್ಯ ಪೊರೈಕೆದಾರರ ವಿರುದ್ದ ಕ್ರಮ: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು: ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ವ್ಯಕ್ತಿಗಳ ಹಾಗೂ ಅಕ್ರಮ ಮದ್ಯ ಪೊರೈಕೆದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು.
ಅವರು ಶುಕ್ರವಾರ ಬಾಳೆ ಹೊನ್ನುರು ಪೋಲಿಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕುರಿತು 200 ಕ್ಕೂ ಅಧಿಕ ಪ್ರಕರಣಗಳನ್ನು ಎರಡು ತಿಂಗಳಲ್ಲಿ ಪತ್ತೆ ಹಚ್ಚಿ ದೂರು ದಾಖಲಿಸಲಾಗಿದೆ. ಅಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿ ಮಾಲಕರ ವಿರುದ್ದವೂ ಕೂಡ ಪ್ರಕರಣ ದಾಖಲಿಸಲಾಗುತ್ತದೆ.
ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಬಿಗಿ ಕ್ರಮ ಕೈಗೊಳ್ಳಲಾಗಿದೆ. ನಿಗದಿಗಿಂತ ಹೆಚ್ಚಿನ ಮದ್ಯ ಮಾರಾಟ ತಡೆಗಟ್ಟಲು ಬಿಗಿ ಕ್ರಮ ಕೈಗೊಳ್ಳಲಾಗಿದೆ. ನಿಗದಿಗಿಂತ ಹೆಚ್ಚಿನ ಮದ್ಯ ನೀಡುವ ಮೂಲಕ ಅಕ್ರಮ ಮದ್ಯ ಮಾರಾಟಕ್ಕೆ ಕಾರಣವಾಗುವ ಅಧಿಕೃತ ಮದ್ಯದ ಅಂಗಡಿ ಮಾಲಿಕರ ವಿರುದ್ದ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಠಾಣೆಗಳಲ್ಲಿ ನೂತನವಾಗಿ 131 ಸಿಬಂದಿ ನೇಮಿಸಿಕೊಳ್ಳುವ ಮೂಲಕ ಕೊರತೆ ಬಹುತೇಕ ನಿಗದಿ ಆಗಿದೆ. ಮುಂದಿನ ವರ್ಷದ ಡಿಸೆಂಬರ್ ಒಳಗೆ ಸಂಪೂರ್ಣ ಸಿಬಂದಿ ಕೊರತೆ ನೀಗಲಿದೆ. ಉತ್ತಮ ಕಾರ್ಯ ನಿರ್ವಹಣೆ ದೃಷ್ಟಿಯಿಂದ ಠಾಣೆಗಳಿಗೆ ಹೊಸ ಯುಪಿಎಸ್ ನೀಡಲಾಗಿದೆ. ಮುಂದಿನ ತಿಂಗಳು ಮೆಣಸಿಹಾಡ್ಯ ಹಾಗೂ ಕುಂದೂರುಗಳಲ್ಲಿ ಜನಸಂಪರ್ಕ ಸಭೆ ನಡೆಸಲು ಯೋಜಿಸಿದ್ದು ದಿನಾಂಕ ನಿಗದಿ ಮಾಡಿ ತಿಳಿಸಲಾಗುವುದು ಎಂದರು.
ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾತನಾಡಿದ ಅವರು ಇತ್ತೀಚೆಗೆ ಬೆಳೆಗಾರರ ಸಂಘಟನೆಯ ಸದಸ್ಯರೊಂದಿಗೆ ಸಭೆ ನಡೆಸಿದ್ದು, ತಮ್ಮ ಬಳಿ ಇರುವ ಹೊರ ರಾಜ್ಯಗಳ ಕಾರ್ಮಿಕರ ಕುರಿತು ಸಂಪೂರ್ಣ ದಾಖಲೆಗಳನ್ನು ಮುಂದಿನ ಹದಿನೈದು ದಿನಗಳ ಒಳಗೆ ಪೋಲಿಸ್ ಇಲಾಖೆಗೆ ನೀಡುವುದಾಗಿ ತಿಳಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣದ ಪೋಲಿಸ್ ವಸತಿ ಗೃಹಗಳು ಮಳೆಗಾಲದಲ್ಲಿ ಸೋರಿಕೆ ಉಂಟಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಸರ್ಕಾರ ಪೋಲಿಸ್ ಇಲಾಖೆಗೆ ಸಾಕಷ್ಟು ಹಣ ನೀಡುತ್ತಿದೆ ಶೀಘ್ರದಲ್ಲೇ ಅದನ್ನು ಪರೀಶೀಲಿಸಿ ಕ್ರಮ ಕೈಗೊಳ್ಳವುದಾಗಿ ಎಂದು ತಿಳಿಸಿದರು.