ಅಕ್ರಮ ಮರಳು ದಂಧೆಕೋರರಿಂದ ಕಂಡ್ಲೂರು ಠಾಣೆಯ ಮೇಲೆ ಕಲ್ಲು ತೂರಾಟ
ಕುಂದಾಪುರ: ಅಕ್ರಮ ಮರಳು ದಂಧೆಕೋರ ಕಿಡಿಗೇಡಿಗಳು ಕುಂದಾಪುರ ಗ್ರಾಮಾಂತರ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಶ್ರೀಧರ್ ನಾಯ್ಕ ಅವರು ಈ ಬಗ್ಗೆ ದೂರು ನೀಡಿದ್ದು ಇದರ ಸಾರಾಂಶ ಇಂತಿದೆ.
ಗುರುವಾರ ಅಕ್ರಮ ಮರಳುಗಾರಿಕೆ ಬಗ್ಗೆ KA-20-M-8231 ನೇ ವಾಹನವನ್ನು ವಶಕ್ಕೆ ಪಡೆದು ಠಾಣೆಗೆ ತಂದಿದ್ದು, ಠಾಣಾ ದಿನಚರಿ ಪ್ರಭಾರ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರು ವಾಹನವನ್ನು ಠಾಣೆಯ ಆವರಣದಲ್ಲಿ ಇರಿಸಿ ಠಾಣೆಯ ಕಡೆ ಬರುತ್ತಿರುವ ವೇಳೆ ಶಾಹಿದ್ ಬೆಟ್ಟೆ (30), ಜಾಕಿರ್ಹುಸೇನ್ (32), ಕರಾಣಿ ಶಾಕಿರ್ (24), ತಬ್ರೇಜ್ ಸಾಹೇಬ್ (26), ನೌಶಾದ್ ಆಲಿ ಕೋಟೆ, ಕರಾಣಿ ಮುಸೀನ್, ಶಾಹಿದ್, ಕರಾಣಿ ನದೀಮ್, ಕರಾಣಿ ಶಾಹಿದ್, ರಯಾನ್, ಕರಾಣಿ ಬಿಲಾಲ್, ಕರಾಣಿ ಮನ್ಸೂರ್, ಮಹಮ್ಮದ್, ಸದಾಕತ್, ಜಿಮ್ಮಿ ಜೆಫ್ರಿ, ಅಬ್ದುಲ್ಲ, ಫಹಾದ್, ನಹೀಮ್, ಹಮೀದ್ಸೇರಿ ಇವರು ಹಲವು ದ್ವಿಚಕ್ರ ವಾಹನಗಳಲ್ಲಿ ಠಾಣೆಯ ಮುಂಬದಿ ಬಂದಿದ್ದು, ಸಿಬ್ಬಂದಿಯವರನ್ನು ಸುತ್ತುವರಿದು ತಡೆದು ನಿಲ್ಲಿಸಿ ಅವರಲ್ಲಿ ನಮ್ಮ ಹುಡುಗರು ಹೊಯಿಗೆ ಸಾಗಾಟ ಮಾಡಿದರೆ ಅವರನ್ನೆ ಹಿಡಿಯುತ್ತೀರಿ, ನಮ್ಮ ವಾಹನದ ಮೇಲೆ ಕೇಸು ಮಾಡಬೇಡಿ, ಬಿಟ್ಟುಬಿಡಿ ಎಂದು ಏರುದನಿಯಲ್ಲಿ ಹೇಳಿ ಅವರನ್ನು ಕೈಯಿಂದ ತಳ್ಳಿರುತ್ತಾರೆ. ಅಕ್ರಮ ಕೂಟದಲ್ಲಿ ಸೇರಿದವರು ಠಾಣೆಯ ಮೇಲೆ ಕಲ್ಲನ್ನು ಎಸೆದಿರುತ್ತಾರೆ. ಅಕ್ರಮ ಕೂಟ ಸೇರಿ ಸಾರ್ವಜನಿಕ ಸೊತ್ತಾಗಿರುವ ಪೊಲೀಸ್ ಠಾಣೆಯ ಕಟ್ಟಡಕ್ಕೆ ಕಲ್ಲುಗಳನ್ನು ಎಸೆದು ಹಾನಿ ಮಾಡಿ, ಇಲಾಖೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ .