ಅಕ್ರಮ-ಸಕ್ರಮ ಯೋಜನೆಯಡಿ ರೈತರಿಗೆ ನ್ಯಾಯ ಸಿಗಲಿ – ವಿಕಾಸ್ ಹೆಗ್ಡೆ
ಕುಂದಾಪುರ: ಅರ್ಜಿದಾರರ ಗಮನಕ್ಕೆ ತಾರದೆ, ಯಾವುದೇ ಮಾಹಿತಿ ನೀಡದೆ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ನಮೂನೆ- 57 ರ ಅಡಿಯಲ್ಲಿ ರೈತರು ಸಲ್ಲಿಸಿದ ಅರ್ಜಿಯನ್ನು ತಿರಸ್ಕಾರ ಮಾಡುತ್ತಿರುವುದಕ್ಕೆ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರ ಗಮನಕ್ಕೆ ತಾರದೆ, ಯಾವುದೇ ಮಾಹಿತಿ ನೀಡದೆ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ನಮೂನೆ- 57 ರ ಅಡಿಯಲ್ಲಿ ರೈತರು ಸಲ್ಲಿಸಿದ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಕಂದಾಯ ಇಲಾಖೆಯಿಂದ ತಿಳಿದುಬರುತ್ತಿದೆ. ಅದೆಷ್ಟೋ ವರ್ಷಗಳಿಂದ ರೈತರು ಕೃಷಿ ಮಾಡಿದ, ಭೂ ಮಾಫಿಯಾದವರಿಂದ ಕಾಪಾಡಿಕೊಂಡು ಬಂದ ಕೃಷಿ ಭೂಮಿಯನ್ನು ರೈತರಿಗೆ ಮಂಜೂರು ಮಾಡದೆ ರೈತರಿಂದ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಇವತ್ತು ಸರ್ಕಾರಿ ಭೂಮಿ ಕೃಷಿ ಭೂಮಿಯಾಗಿ ಉಳಿದುಕೊಂಡಿದ್ದರೆ ಅದಕ್ಕೆ ಏಕೈಕ ಕಾರಣ ರೈತ. ಆದರೆ ಸರ್ಕಾರ ರೈತರಿಗೆ ಆ ಭೂಮಿಯ ಒಡೆತನವನ್ನು ನೀಡದೆ ಅವರಿಂದ ಭೂಮಿ ಕಸಿದುಕೊಳ್ಳುವುದು ರೈತ ವಿರೋಧಿ ಕ್ರಮ ಹಾಗೂ ಪರೋಕ್ಷವಾಗಿ ಭೂ ಮಾಫಿಯಾದವರಿಗೆ ಮಾಡುವ ಸಹಾಯವಾಗಿದೆ. ಜಿಲ್ಲೆಯ ಅಕ್ರಮ-ಸಕ್ರಮ ಸಮಿತಿಯವರು ಕೇವಲ ಅರ್ಜಿ ನಮೂನೆ 50 ಹಾಗೂ 53 ರಲ್ಲಿ ಅಲ್ಪ ಸ್ವಲ್ಪ ಬಾಕಿ ಉಳಿದ ಅರ್ಜಿಯನ್ನು ವಿಲೇವಾರಿ ಮಾಡಿ ಅರ್ಜಿದಾರರಿಗೆ ಹಕ್ಕು ಪತ್ರ ನೀಡುವುದೇ ದೊಡ್ಡ ಸಾಧನೆ ಎಂದು ಪ್ರಚಾರ ಪಡಿಸುವುದನ್ನು ಬಿಟ್ಟು ಆದಷ್ಟು ಬೇಗ ಅರ್ಜಿ ನಮೂನೆ- 57 ರ ಅಡಿ ಅರ್ಜಿ ಸಲ್ಲಿಸಿದ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ..