ಅಕ್ರಮಗಳಿಗೆ ಬ್ರೇಕ್ ಹಾಕುವತ್ತ ಎಸ್ಪಿ ಸಂಜೀವ್ ಪಾಟೀಲ್; ಒಂದೇ ದಿನ 12 ಮಟ್ಕಾ ಕೇಂದ್ರಗಳಿಗೆ ಧಾಳಿ
ಉಡುಪಿ: ಉಡುಪಿ ಜಿಲ್ಲೆಗೆ ನೂತನವಾಗಿ ಬಂದಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ|ಸಂಜೀವ್ ಪಾಟೀಲ್ ಅವರು ಜಿಲ್ಲೆಯಲ್ಲಿ ಇರುವ ಅಕ್ರಮ ದಂಧೆಗಳಾದ ಮಟ್ಕಾ, ಇಸ್ಪಿಟ್, ಅನಧಿಕೃತ ಸಾರಾಯಿ ಮಾರಾಟ ಇವುಗಳಿಗೆ ಬ್ರೇಕ್ ಹಾಕುವತ್ತ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು ಕೇವಲ ಬಾಯಿ ಮಾತಿಗಲ್ಲದೆ ತನ್ನ ಅಧೀನದ ಅಧಿಕಾರಿಗಳ ಮೂಲಕ ಕಾರ್ಯರೂಪಕ್ಕೆ ಇಳಿದಿದ್ದಾರೆ.
ಮಟ್ಕಾ ದಂಧೆ ನಡೆಸುವವರು, ಜೂಜು-ಜುಗಾರಿ ಅಡ್ಡೆ ನಡೆಸುವವರು ಇರಬೇಕಾದ ಸ್ಥಳ ಪೋಲಿಸ್ ಠಾಣೆ ಮತ್ತು ಜೈಲು. ಅನೈತಿಕ ಚಟುವಟಿಕೆ ನಡೆಸುವ ಯಾರನ್ನೂ ಕೂಡ ಬಿಡುವುದಿಲ್ಲ ಎಂದು ಶನಿವಾರವಷ್ಠೆ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಸಂಜೀವ್ ಪಾಟೀಲ್ ಅವರು ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ನೀಡಿದ್ದರು. ಅದರಂತೆ ಇದೀಗ ಕಾರ್ಯಪ್ರವೃತ್ತರಾದ ಜಿಲ್ಲಾ ಪೋಲಿಸ್ ಮಟ್ಕಾ, ಜುಗಾರಿ ಅಡ್ಡೆಗಳಿಗೆ ಧಾಳಿ ನಡೆಸಲು ಆರಂಭಿಸಿದ್ದಾರೆ.
ಸೋಮವಾರ ಒಂದೇ ದಿನದಲ್ಲಿ ಜಿಲ್ಲೆಯ 9 ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 12 ಮಟ್ಕಾ ಜುಗಾರಿ ಕೇಂದ್ರಗಳಿಗೆ ಪೋಲಿಸರು ಧಾಳಿ ನಡೆಸಿ 15 ಮಟ್ಕಾ ಚೀಟಿ ಬರೆಯುತ್ತಿದ್ದ ಮಂದಿಯನ್ನು ಬಂಧಿಸಿ ಅವರಿಂದ ರೂ 13,942.00 ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಬೈಂದೂರು, ಕೋಟ, ಬ್ರಹ್ಮಾವರ, ಪಡುಬಿದ್ರೆ, ಕಾಪು, ಶಂಕರನಾರಾಯಣ, ಗಂಗೊಳ್ಳಿ, ಮಣಿಪಾಲ ಮತ್ತು ಉಡುಪಿ ಠಾಣಾ ವ್ಯಾಪ್ತಿಯಲ್ಲಿ ಪೋಲಿಸರು ಮಟ್ಕಾ ಜುಗಾರಿ ಕೇಂದ್ರಗಳಿಗೆ ಧಾಳಿ ನಡೆಸಿದ್ದಾರೆ.
ಅಲ್ಲದೆ ತ್ರಾಸಿ ಗ್ರಾಮದ ತ್ರಾಸಿ ಫಿಶ್ ಲ್ಯಾಂಡ್ ಹೋಟೆಲ್ ಬಳಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೋಲಿಸರು ಅಲ್ಲಿಯೂ ಕೂಡ ಒರ್ವನನ್ನು ಬಂಧಿಸಿ ರೂ 2,100 ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಕೇರಾಡಿ ಗ್ರಾಮದ ಶೇಡಿಮಕ್ಕಿ ನಿವಾಸಿ ಸಂತೋಷ (36) ಎಂಬಾತನನ್ನು ಬಂಧಿಸಿದ ಪೋಲಿಸರು 180 ಎಂಎಲ್ ನ 15 ಪ್ಯಾಕೆಟ್ ಹಾಗೂ 90 ಎಂಎಲ್ ನ 35 ಪ್ಯಾಕೇಟ್ ಮದ್ಯವನ್ನು ಸ್ವಾಧೀನಪಡಿಸಿಕೊಂಡಿದ್ದು, ಗಂಗೊಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.