ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಮೈನರ್ ಬೆಸಿಲಿಕಾ ವಿಜೃಂಭಣೆಯ ಸಮಾರಂಭಕ್ಕೆ ಚಾಲನೆ
ಮಂಗಳೂರು: ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರವನ್ನು ಕಿರಿಯ (ಮೈನರ್) ಬೆಸಿಲಿಕಾ ಎಂಬುದಾಗಿ ಘೋಷಿಸುವ ಹಾಗೂ ಅದನ್ನು ಭಕ್ತರ ಸೇವೆಗೆ ಸಮರ್ಪಿಸುವ ಸಮಾರಂಭವು ಗಣ್ಯ ಕ್ರೈಸ್ತ ಧರ್ಮಾಧ್ಯಕ್ಷರ ಸಮಕ್ಷಮ ಆಗಸ್ಟ್ 1 ರಂದು ನೆರವೇರಲಿದೆ.
ಈ ಚಾರಿತ್ರಿಕ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೆ| ಜೆರಾಲ್ಡ್ ಐಸಾಕ್ ಲೋಬೊ ಅವರು ಸೋಮವಾರ ಅತ್ತೂರು ಪುಣ್ಯ ಕ್ಷೇತ್ರದಲ್ಲಿ ಅನಾವರಣ ಮಾಡಿದರು. ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಬ್ಯಾಪ್ಟಿಸ್ಟ್ ಮಿನೇಜಸ್, ಕಾರ್ಯಕ್ರಮದ ಸಂಚಾಲಕ ಫಾ| ಲಾರೆನ್ಸ್ ಸಿ. ಡಿ’ಸೋಜಾ, ಕಾರ್ಕಳ ವಲಯದ ಪ್ರಧಾನ ಗುರು ಫಾ| ಜೋಸ್ವಿ ಫೆರ್ನಾಂಡಿಸ್, ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ರೆಕ್ಟರ್ ಫಾ| ಜಾರ್ಜ್ ಡಿ’ಸೋಜಾ, ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ| ಡೆನಿಸ್ ಡೆಸಾ, ದಿವ್ಯ ಜ್ಯೋತಿ ನಿರ್ದೇಶಕ ಫಾ| ಸ್ಟೀಫನ್ ಡಿ’ಸೋಜಾ, ಕಾರ್ಕಳ ವಲಯದ ಧರ್ಮಗುರುಗಳಾದ ಫಾ| ಸುನಿಲ್ ಡಿ’ಸಿಲ್ವಾ, ಫಾ| ಅನಿಲ್ ಕರ್ನೇಲಿಯೊ, ಫಾ| ವಿಜಯ್ ಡಿ’ಸೋಜಾ, ಫಾ| ತೋಮಸ್ ಡಿ’ಸೋಜಾ, ಫಾ| ಜೆರೋಮ್ ಮೊಂತೇರೊ, ಫೋರ್ವಿಂಡ್ಸ್ ಮಾಸ್ ಕಮ್ಯೂನಿಕೇಶನ್ ಸಂಸ್ಥೆಯ ನಿರ್ದೇಶಕ ಇ. ಫೆರ್ನಾಂಡಿಸ್, ಅತ್ತೂರ್ ಚರ್ಚ್ನ ಉಪಾಧ್ಯಕ್ಷ ರಿಚಾರ್ಡ್ ಪಿಂಟೊ ಅವರು ಉಪಸ್ಥಿತರಿದ್ದರು.
ಆ.1 ರ ಕಾರ್ಯಕ್ರಮ
ಆ.1 ರಂದು ಅತ್ತೂರು ಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ದಿವ್ಯ ಬಲಿ ಪೂಜೆ ಹಾಗೂ 11.45ಕ್ಕೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯುವುದು. ಬಲಿ ಪೂಜೆಯಲ್ಲಿ ಮುಂಬಯಿನ ಆರ್ಚ್ ಬಿಷಪ್, ಸಿಸಿಬಿಐ ಮತ್ತು ಎಫ್ಎಬಿಸಿ ಅಧ್ಯಕ್ಷ ಕಾರ್ಡಿನಲ್ ಓಸ್ವಾಲ್ಡ್ ಗ್ರೇಶಿಯಸ್ ನೇತೃತ್ವ ವಹಿಸುವರು. ತಿರುವನಂತಪುರಂನ ಸಿರೋ ಮಲಂಕರ ಕಥೋಲಿಕ್ ಚರ್ಚ್ನ ಮೇಜರ್ ಆರ್ಚ್ ಬಿಷಪ್ ಹಾಗೂ ಭಾರತದ ಕಥೋಲಿಕ್ ಬಿಷಪರ ಮಂಡಳಿ (ಸಿಬಿಸಿಐ)ಯ ಅಧ್ಯಕ್ಷ ಕಾರ್ಡಿನಲ್ ಬಸೆಲಿಯೋಸ್ ಕ್ಲೀಮಿಸ್ ಅವರು ಲ್ಯಾಟಿನ್ ಭಾಷೆಯಲ್ಲಿ ಹಾಗೂ ಉಡುಪಿಯ ಧರ್ಮಾಧ್ಯಕ್ಷ ರೆ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಕೊಂಕಣಿಯಲ್ಲಿ ಮೈನರ್ ಬೆಸಿಲಿಕಾ ಬಗ್ಗೆ ಘೋಷಣೆ ಮಾಡುವರು.
ಬೆಂಗಳೂರು ಆರ್ಚ್ ಬಿಷಪ್ ರೆ| ಡಾ| ಬರ್ನಾರ್ಡ್ ಮೊರಾಸ್ ಪ್ರವಚನ ನೀಡುವರು. ಎರ್ನಾಕುಳಂನ ಸಿರೋ ಮಲಬಾರ್ ಕಥೋಲಿಕ್ ಚರ್ಚ್ನ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಮಾರ್ ಜಾರ್ಜ್ ಅಲಂಚೇರಿ, ರಾಂಚಿಯ ಆರ್ಚ್ ಬಿಷಪ್ ಕಾರ್ಡಿನಲ್ ಟೆಲೆಸ್ಫೋರ್ ಟೊಪೊ, ಮಂಗಳೂರಿನ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಿರಿಯ ಬೆಸಿಲಿಕಾ ಎಂಬುದಾಗಿ ಆಯ್ದ ಕೆಲವು ಕ್ರೈಸ್ತ ಚರ್ಚ್ಗಳನ್ನು ಮಾತ್ರ ಘೋಷಿಸಲಾಗುತ್ತದೆ. ಚರ್ಚ್ನಲ್ಲಿ ನಡೆಯುವ ಆರಾಧನಾ ವಿಧಿಗಳು ಮತ್ತು ವಿವಿಧ ಸಂಸ್ಕಾರಗಳ ಪ್ರದಾನ, ಭಕ್ತರ ಆಕರ್ಷಣೆ ಮುಂತಾದ ಮಾನದಂಡಗಳನ್ನು ಆಧಾರಿಸಿ ಶಿಸ್ತು ಪಾಲನಾ ಮಂಡಳಿ ಸಲ್ಲಿಸುವ ಶಿಫಾರಸುಗಳನ್ನು ಪರಿಗಣಿಸಿ ಕಥೋಲಿಕರ ಪರಮೋಚ್ಛ ಗುರು ಪೋಪ್ ಅವರು ಇದನ್ನು ಘೋಷಿಸುತ್ತಾರೆ. ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರವನ್ನು ಕಿರಿಯ ಬೆಸಿಲಿಕಾವಾಗಿ ಘೋಷಿಸಲಾಗುವುದು ಎಂದು ಪೋಪ್ ಫ್ರಾನ್ಸಿಸ್ ಅವರು ಇತ್ತೀಚೆಗೆ ಪ್ರಕಟಿಸಿದ್ದರು.