ಅಡಿಕೆ ಮತ್ತು ಜೇನು ಸಾಕಾಣಿಕೆ: ಕಾರ್ಯಗಾರ – ಕೃಷಿಗೆ ಕಾಯಕಲ್ಪ ನೀಡುವ ಕ್ಯಾಂಪ್ಕೊ
ಉಜಿರೆ: ಕ್ಯಾಂಪ್ಕೊ ಸಂಸ್ಥೆ ಒಂದು ಲಕ್ಷದ ಎಂಟು ಸಾವಿರ ಮಂದಿ ಸದಸ್ಯರನ್ನು ಹೊಂದಿದ್ದು ಕಳೆದ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 1,700 ಕೋಟಿ ರೂ. ವ್ಯವಹಾರ ನಡೆಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ ಎಂದು ಕ್ಯಾಂಪ್ಕೊ ಉಪಾಧ್ಯಕ್ಷ ಖಂಡಿಗೆ ಶಂಕರನಾರಾಯಣ ಭಟ್ ಹೇಳಿದರು.
ಅವರು ಬುಧವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾಂಪ್ಕೊ ಹಾಗೂ ಮಂಗಳೂರಿನ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಲಾದ “ಅಡಿಕೆ ಕೃಷಿಯಲ್ಲಿ ಹೆಚ್ಚುವರಿ ಉತ್ಪಾದನೆ ಮತ್ತು ಜೇನು ಸಾಕಾಣಿಕೆ” ಬಗ್ಗೆ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅಡಿಕೆ ಬೆಳೆಗಾರರಿಗೆ ಸಕಾಲಿಕ ನೆರವು, ಮಾರ್ಗದರ್ಶನ ನೀಡುವುದಕ್ಕಾಗಿ 1973ರಲ್ಲಿ ವಾರಣಾಸಿ ಸುಬ್ರಾಯ ಭಟ್‍ರ ನೇತೃತ್ವದಲ್ಲಿ ಪ್ರಾರಂಭಿಸಲಾದ ಕ್ಯಾಂಪ್ಕೊ ಈಗ ಕೊಕ್ಕೊ, ರಬ್ಬರು, ಕಾಳುಮೆಣಸು, ಗೇರುಬೀಜ, ತೆಂಗಿನ ಕಾಯಿ ಬೆಳೆಗಾರರಿಗೂ ಬೆಂಬಲ ನೀಡುತ್ತಿದೆ. ಕೃಷಿಕರ ಬೆಳೆ ಉತ್ಪನ್ನಗಳನ್ನು ಖರೀದಿಸಿ, ಸಂಸ್ಕರಿಸಿ, ಸಂರಕ್ಷಣೆಯೊಂದಿಗೆ ಮಾರಾಟ ವ್ಯವಸ್ಥೆಯನ್ನೂ ಕ್ಯಾಂಪ್ಕೊ ಮಾಡುತ್ತಿದೆ.
ಕೃಷಿ ಮತ್ತು ಜೇನು ಸಾಕಾಣಿಕೆ ಪರಸ್ಪರ ಪೂರಕವಾಗಿದ್ದು ಅಡಿಕೆ, ತೆಂಗು, ರಬ್ಬರು, ಕಾಳುಮೆಣಸು ಇತ್ಯಾದಿ ಬೆಳೆಸುವುದರಿಂದ ಆದಾಯ ಹೆಚ್ಚುತ್ತದೆ. ಸಸ್ಯ ಸಂಪತ್ತು ವೃದ್ಧಿಯಾಗುವುದರೊಂದಿಗೆ ಪರಿಸರ ಸಂರಕ್ಷಣೆಯೂ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪುತ್ತೂರಿನಲ್ಲಿರುವ ದ.ಕ. ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಜಿ.ಪಿ. ಶ್ಯಾಮ ಭಟ್ ಮಾತನಾಡಿ, ಹಾಲು ಮತ್ತು ಜೇನು ಅಮೃತಕ್ಕೆ ಸಮಾನವಾಗಿದ್ದು, ವಿಶೇಷ ಔಷಧಿ ಗುಣ ಹೊಂದಿದೆ. ಪರಿಸರ ನಾಶದಿಂದಾಗಿ ಜೇನು ಸಂತತಿಯೂ ವಿನಾಶದಂಚಿನಲ್ಲಿದೆ. ಜೇನು ವ್ಯವಸಾಯದಿಂದ ನಮ್ಮ ಆರೋಗ್ಯ ವರ್ಧನೆಯೊಂದಿಗೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಯುವಜನತೆ ಜೇನು ವ್ಯವಸಾಯದಲ್ಲಿ ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಜೇನು ತುಪ್ಪದ ಉಪ ಉತ್ಪನ್ನಗಳ ಬಳಕೆಯಿಂದ ನಮ್ಮ ಆಯುಷ್ಯ ಹೆಚ್ಚಾಗುತ್ತದೆ, ಸೌಂದರ್ಯ ವರ್ಧನೆಯೂ ಆಗುತ್ತದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ, ಕೃಷಿಯ ಅವಗಣನೆ ಸಲ್ಲದು. ಕೃಷಿ ಮತ್ತು ಕೃಷಿಕರನ್ನು ಗೌರವಿಸಬೇಕು. ರೈತರಿಗೆ ಮಳೆ, ಬೆಳೆ, ಹವಾಮಾನ, ಮಣ್ಣಿನ ಗುಣ, ಮಾರುಕಟ್ಟೆ ವ್ಯವಸ್ಥೆ, ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಅಗತ್ಯ. ಕೃಷಿಯಲ್ಲಿ ಅಧಿಕ ಲಾಭಗಳಿಸಲು ವಿಫುಲ ಅವಕಾಶಗಳಿವೆ ಎಂದು ಅವರು ಹೇಳಿದರು.
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸುರೇಶ್ ಉಪಸ್ಥಿತರಿದ್ದರು.
ಡಾ. ಬಸವ, ಟಿ. ಸ್ವಾಗತಿಸಿದರು. ಪ್ರೊ. ಅವಿನಾಶ್ ಧನ್ಯವಾದವಿತ್ತರು. ಪ್ರೊ. ಬಸವರಾಜ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.
ಬದನಾಜೆ ಶಂಕರಭಟ್, ಅಪೂರ್ವ ಮತ್ತು ಮಂಚಿ ಶ್ರೀನಿವಾಸ ಆಚಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು.