Spread the love
ಅತ್ತೂರು ಬಸಿಲಿಕದ ವಾರ್ಷಿಕ ಮಹೋತ್ಸವ ಮೂರನೇ ದಿನ :`ಬಡವರನ್ನು ಆಧರಿಸಿ ದೈವಕೃಪೆಗೆ ಪಾತ್ರರಾಗೋಣ’: ಬಿಷಪ್ ಕೆ.ಎ. ವಿಲಿಯಂ
ಕಾರ್ಕಳ: ‘ದೇವರು ನಮ್ಮ ತಂದೆಯಾದ್ದರಿಂದ ನಾವೆಲ್ಲಾ ಸಹೋದರ ಸಹೋದರಿಯರು. ಈ ಕಾರಣದಿಂದ ನಮ್ಮ ಬಡ ಸಹೋದರ ಸಹೋದರಿಯರಿಗೆ ಸಹಾಯ ಮಾಡುವುದು ನಮ್ಮ ಜವಾಬ್ದಾರಿ. ಇದರಿಂದ ನಾವು ವಿಮುಖರಾಗಬಾರದು. ಬಡಬಗ್ಗರನ್ನು ಆಧರಿಸುವವರು ಭಾಗ್ಯವಂತರು’ ಎಂದು ಬೈಬಲ್ ಗ್ರಂಥ ಉದ್ದರಿಸಿ ಮಾತನಾಡಿದವರು ಮೈಸೂರಿನ ಧರ್ಮಾಧ್ಯಕ್ಷರಾದ ಡಾ. ಕೆ. ಎ. ವಿಲಿಯಂರವರು. ಅವರು ಮಂಗಳವಾರದಂದು ಅತ್ತೂರು-ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವದ ಮೂರನೇ ದಿನದ ವಿಶೇಷ ದಿವ್ಯಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.
ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಹನ್ನೊಂದು ಪೂಜೆಗಳಿದ್ದು, ಮೂರು ಪೂಜೆಗಳು ಕನ್ನಡ ಭಾಷೆಯಲ್ಲಿ ನೆರವೇರಿದವು. ಭಕ್ತಾದಿಗಳು ಉತ್ಸಾಹದಿಂದ ಬಲಿಪೂಜೆಗಳಲ್ಲಿ ಭಾಗವಹಿಸಿದರು.
ಬುಧವಾರದ ಕಾರ್ಯಕ್ರಮಗಳು
ಕೊಂಕಣಿ ಭಾಷೆಯ ಬಲಿಪೂಜೆಗಳು: ಬೆಳಿಗ್ಗೆ 6.30, 8.00, 10.30; ಮಧ್ಯಾಹ್ನ 1.00, 2.30, 4.00; ಸಂಜೆ 7.00, 10.00, 11.30.
ಕನ್ನಡ ಭಾಷೆಯ ಬಲಿಪೂಜೆಗಳು: ಮಧ್ಯಾಹ್ನ 1.00; ಸಂಜೆ 5.30, 8.30
ಪ್ರಧಾನ ಪೂಜೆ: ಬೆಳಿಗ್ಗೆ 10.30 ಕ್ಕೆ ಮಂಗಳೂರಿನ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ
ಗಣ್ಯರಿಗೆ ಸನ್ಮಾನ ಕಾರ್ಯಕ್ರಮ: ಮಂಗಳವಾರ ಸಂಜೆ 6 ಗಂಟೆಯ ಬಲಿಪೂಜೆಯ ಬಳಿಕ ಪುಣ್ಯಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ನೆರವು ನೀಡಿದ ಗಣ್ಯರಿಗೆ ಸಮಾರಂಭವೊಂದರಲ್ಲಿ ಧರ್ಮಾಧ್ಯಕ್ಷರು ಸನ್ಮಾನಿಸಿ ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಕಾಪು ವಿಧಾನ ಸಭಾ ಸಚಿವ ಶ್ರೀ ವಿನಯ್ಕುಮಾರ್ ಸೊರಕೆ, ಕಾರ್ಕಳದ ಮಾಜಿ ಶಾಸಕ ಶ್ರೀ ಗೋಪಾಲ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀ ಜನಾರ್ಧನ ತೋನ್ಸೆ, ಕಾರ್ಕಳದ ಎಎಸ್ಪಿ ಶ್ರೀ ಹೃಷಿಕೇಶ್ ಸೋನಾವನೆ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು. ಧರ್ಮಾಧ್ಯಕ್ಷರು ಗಣ್ಯರಿಗೆ ಶಾಲು ಹೊದಿಸಿ, ಫಲ-ಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿ ಆಶೀರ್ವದಿಸಿದರು.
—–
ಬೊಕ್ಸ್
ಅತ್ತೂರು ಹಬ್ಬ ಹಾಗೂ ಚಿಕ್ಕಮಗಳೂರು ಘಟ್ಟ ಪ್ರದೇಶಗಳಿಗಿರುವ ನಂಟು
ಅತ್ತೂರು ಮಹೋತ್ಸವಕ್ಕೆ ಕರಾವಳಿ ಪ್ರದೇಶದ ಭಕ್ತಾದಿಗಳು ಮಾತ್ರವಲ್ಲ, ಚಿಕ್ಕಮಗಳೂರು, ಮಡಿಕೇರಿ, ಮೈಸೂರು, ಇನ್ನಿತರ ದೂರದ ಸ್ಥಳಗಳಿಂದ ಮಹೋತ್ಸವಕ್ಕೆ ಆಗಮಿಸಿವುದು ವಿಶೇಷ. ಇದಕ್ಕೊಂದು ಚಾರಿತ್ರಿಕ ಕಾರಣವಿದೆ. ಟಿಪ್ಪು ಸುಲ್ತಾನನ ಮರಣದ ಬಳಿಕ ಶ್ರೀರಂಗಪಟ್ಟಣದ ಸೆರೆಯಿಂದ ಹಿಂದಿರುಗಿದ ಕಥೋಲಿಕ ಕ್ರೈಸ್ತರು, ಕರಾವಳಿಗೆ ಹಿಂದಿರುಗದೆ ಈ ಮೇಲಿನ ಪ್ರದೇಶಗಳಲ್ಲಿ, ವಿಶೇಷವಾಗಿ ಚಿಕ್ಕಮಗಳೂರಿನ ಘಟ್ಟ ಪ್ರದೇಶಗಳಲ್ಲಿ ನೆಲೆನಿಂತು ಕಾಫಿ ತೋಟಗಳಲ್ಲಿ ಮತ್ತು ಇನ್ನಿತರ ಕೆಲಸವನ್ನು ಆರಂಭಿಸಿದರು. ಆದರೂ ವರ್ಷಕ್ಕೊಮ್ಮೆ ತಮ್ಮ ಮೂಲವಾದ ಕರಾವಳಿಗೆ ಭೇಟಿ ನೀಡುತ್ತಿದ್ದರು. ಇವರೆಲ್ಲರೂ ಕಾರ್ಕಳದ ಪುರಾತನ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ಭಕ್ತಾದಿಗಳಾದ್ದರಿಂದ, ಅತ್ತೂರಿಗೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. ಕಾಫಿ ತೋಟಗಳಲ್ಲಿ ಕೆಲಸದ ಕೂಲಿ ದೊರಕುವುದು ತಿಂಗಳಾಂತ್ಯದಲ್ಲಿ ಆದ್ದರಿಂದ, ಇತರ ದಿನಗಳಲ್ಲಿ ಅವರಲ್ಲಿ ಖರ್ಚಿಗೆ ಹಣವಿರುತ್ತಿರಲಿಲ್ಲ. ಅವರು ಹಬ್ಬದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ, ಸಂತ ಲಾರೆನ್ಸರ ಹಬ್ಬವನ್ನು ಜನವರಿ ತಿಂಗಳ ಕೊನೆಯ ವಾರದಲ್ಲಿ ಸ್ಥಿರವಾಯಿತು. ಇದರಲ್ಲಿ ಭಾಗವಹಿಸುವ ಭಕ್ತಾದಿಗಳ ಕೈಯಲ್ಲಿ ಹಬ್ಬವನ್ನು ಸೂಕ್ತವಾಗಿ ಆಚರಿಸಲು ಹಣದ ಕೊರತೆಯಿರುತ್ತಿರಲಿಲ್ಲ.
ಇಂದಿಗೂ ಈ ಮೇಲಿನ ಸಾವಿರಾರು ಭಕ್ತರು ಅತ್ತೂರಿನ ಮಹೋತ್ಸವಕ್ಕೆ ಆಗಮಿಸಿ, ಹಲವಾರು ರಾತ್ರಿ ಪುಣ್ಯಕ್ಷೇತ್ರದಲ್ಲಿಯೇ ಉಳಿದು ಮರುದಿನ ಪೂಜೆಯಲ್ಲಿ ಪಾಲ್ಗೊಂಡು, ವಸ್ತುಗಳನ್ನು ಖರೀದಿಸಿ ತಮ್ಮೂರಿಗೆ ಹಿಂತಿರುಗುತ್ತಾರೆ.
Spread the love