ಅತ್ತೂರು ಬೆಸಿಲಿಕಾ ವಾರ್ಷಿಕ ಮಹೋತ್ಸವ; ನೊವೆನಾ ಪ್ರಾರ್ಥನೆಗೆ ಸುನೀಲ್ ಕುಮಾರ್ ಚಾಲನೆ
ಕಾರ್ಕಳ: ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಅತ್ತೂರು ಸಂತಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ನವದಿನಗಳ ಪೂಜೆ (ನೊವೆನಾ) ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಕಾರ್ಕಳ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಅವರು ನವದಿನಗಳ ನೊವೆನಾ ಪ್ರಾರ್ಥನೆಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸುನೀಲ್ ಕುಮಾರ್ ಇಂದಿನಿಂದ ರಾಜ್ಯ ಹಾಗೂ ದೇಶದ ಗಮನ ಸೆಳೆದ ಅತ್ತೂರು ಬೆಸಿಲಿಕಾದ ವಾರ್ಷಿಕ ಉತ್ಸವಕ್ಕೆ ಚಾಲನೆ ದೊರೆತಿದೆ. ಅತ್ತೂರು ಚರ್ಚಿಗೆ ಬೆಸಿಲಿಕಾದ ಮಾನ್ಯತೆ ಪಡೆದ ಬಳಿಕ ಜಗತ್ತಿನ ಭಕ್ತಾದಿಗಳನ್ನು ಆಕರ್ಷಿಸುತ್ತಿರುವ ಕೇಂದ್ರವಾಗಿ ಬೆಳೆಯುತ್ತಿದೆ. ಸಂತ ಲಾರೆನ್ಸರ ಪವಾಡಗಳ ಮೂಲಕ ಭಕ್ತಾದಿಗಳಿಗೆ ಈ ಭಕ್ತಾದಿಗಳಿಗೆ ದುಃಖ ದುಮ್ಮಾನಗಳನ್ನು ನಿವಾರಿಸುವ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಕ್ಷೇತ್ರ ಇನ್ನಷ್ಟು ಭಕ್ತರನ್ನು ಆಕರ್ಷಿಸುವ ಕೇಂದ್ರವಾಗಿ ಇದು ಮಾರ್ಪಾಡಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ ಅತ್ತೂರು ಪುಣ್ಯ ಕ್ಷೇತ್ರ ಹೆಮ್ಮೆಯ ಕೇಂದ್ರ ಹಾಗೂ ಸಮಾಜದಲ್ಲಿ ಭಾವೈಕ್ಯತೆಯ ಸಂದೇಶವನ್ನು ಜಗತ್ತಿಗೆ ಸಾರುವ ಕೇಂದ್ರ ಇದಾಗಿದೆ. ನಮ್ಮ ದೇಶ ಹಲವು ಭಾಷೆ, ಧರ್ಮಗಳನ್ನು ಸೇರಿಕೊಂಡತೆ ನಮ್ಮ ಕಾರ್ಕಳ ಕೂಡ ಅದೇ ರೀತಿಯಲ್ಲಿ ಸಾಗಿದೆ. ಐದು ದಿನಗಳ ಕಾಲ ನಡೆಯುವ ವಾರ್ಷಿಕ ಮಹೋತ್ಸವದಲ್ಲಿ ಎಲ್ಲಾ ಧರ್ಮದ ಜನ ವಿಶ್ವಾಸ ಶೃದ್ಧೆ ಹಾಗೂ ಭಕ್ತಿಯಿಂದ ಇಲ್ಲಿ ಭಾಗವಹಿಸುವುದನ್ನು ನಾವು ಕಾಣುತ್ತೇವೆ. ಇದರಿಂದಾಗಿ ಸಮಾಜದ ಸೌಹಾರ್ದತೆಯ ಸಂದೇಶದೊಂದಿಗೆ ಮಾನವೀಯ ಮೌಲ್ಯಗಳನ್ನು ಪ್ರತಿಷ್ಠಾಪಿಸಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರದ ನಿರ್ದೇಶಕರಾದ ವಂ| ಜೋರ್ಜ್ ಡಿಸೋಜಾ, ಸಹಾಯಕ ಧರ್ಮಗುರು ವಂ|ಜಾನ್ಸಿಲ್ ಆಳ್ವಾ, ಜಿಪಂ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ತಾಪಂ ಸದಸ್ಯ ಹರೀಶ್ಚಂದ್ರ, ನಿಟ್ಟೆ ಗ್ರಾಪಂ. ಸದಸ್ಯ, ಪಾಲನಾ ಸಮಿತಿಯ ಜಾನ್ ಡಿಸಿಲ್ವಾ, ಸಂತೋಶ್ ಡಿಸಿಲ್ವಾ, ಲೀನಾ ಡಿಸಿಲ್ವಾ ಹಾಗೂ ಇತರರು ಉಪಸ್ಥಿತರಿದ್ದರು.
ಜನವರಿ 27ರಿಂದ 31ರ ತನಕ ನಡೆಯಲಿರುವ ಸಾಂತಮಾರಿ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಐದು ದಿನಗಳ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆ ಇದೆ.
‘27ರಂದು ಬೆಳಿಗ್ಗೆ 7.30ಕ್ಕೆ ಬಲಿಪೂಜೆ, ಮಧ್ಯಾಹ್ನ 3 ಹಾಗೂ 5ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ನಡೆಯಲಿದೆ. 28ರಂದು ಬೆಳಿಗ್ಗೆ 10ಕ್ಕೆ ಹಾಗೂ ಮಧ್ಯಾಹ್ನ 3.30ಕ್ಕೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ ನಡೆಯಲಿದೆ. ಐದು ದಿನಗಳಲ್ಲಿ 35 ಬಲಿಪೂಜೆಗಳು ಕೊಂಕಣಿಯಲ್ಲಿ, 11 ಬಲಿಪೂಜೆಗಳು ಕನ್ನಡದಲ್ಲಿ ನಡೆಯಲಿದ್ದು ಶಿವಮೊಗ್ಗ, ಬೆಳ್ತಂಗಡಿ, ಮೈಸೂರು, ಮಂಗಳೂರು ಹಾಗೂ ಉಡುಪಿ ಧರ್ಮಾಧ್ಯಕ್ಷರು ಬಲಿಪೂಜೆ ಅರ್ಪಿಸಲಿದ್ದಾರೆ’