ಅದ್ದೂರಿಯಾಗಿ ನಡೆದ 20ನೇ ವರ್ಷದ ದುಬೈ ಕನ್ನಡ ರಾಜ್ಯೋತ್ಸವ 

Spread the love

ಅದ್ದೂರಿಯಾಗಿ ನಡೆದ 20ನೇ ವರ್ಷದ ದುಬೈ ಕನ್ನಡ ರಾಜ್ಯೋತ್ಸವ 

ಕನ್ನಡಿಗರ ಕನ್ನಡ ಕೂಟ ದುಬೈ,ಯುಎಇ ವತಿಯಿಂದ 20ನೇ ವರ್ಷದ ಸಂಭ್ರಮಾಚರಣೆಯ ಕರ್ನಾಟಕ ರಾಜ್ಯೋತ್ಸವವು ಇದೇ ನವೆಂಬರ್ 11ರಂದು ಸಂಜೆ 4ರಿಂದ ಅಲ್ ಕ್ವಾಸಿಸ್ ನಲ್ಲಿರುವ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ ಹೊರಾಂಗಣ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಕಾಪ್ಟನ್ ಮತ್ತು ಏರ್ ಡೆಕ್ಕನ್ ಸಂಸ್ಥಾಪಕರಾದ ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಅಂತರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಯನ್ನುನೀಡಿ ಗೌರವಿಸಲಾಯಿತು. ಅಂತರಾಷ್ಟ್ರೀಯ ಕನ್ನಡ ಹಾಸ್ಯ ರತ್ನ ಪ್ರಶಸ್ತಿಯನ್ನು ಖ್ಯಾತ ಹಾಸ್ಯ ಭಾಷಣಕಾರರಾದ ಶ್ರೀಯುತ ಗಂಗಾವತಿ ಪ್ರಾಣೇಶ್ ಅವರಿಗೆ ನೀಡಿ ಗೌರವಿಸಿದರೆ, ಕನ್ನಡಿಗರು ಕನ್ನಡ ಕೂಟ ದುಬೈ ಕೊಡಮಾಡುವ ಅಂತರಾಷ್ಟ್ರೀಯ ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಅನಿವಾಸಿ ಉದ್ಯಮಿ ಜ್ಹೈನ್ ಗ್ರೂಪ್ ಆಫ್ ಹೋಟೆಲ್ಸ್, ದುಬೈ ಮಾಲೀಕರಾದ ಶ್ರೀಯುತ ಝಫರುಲ್ಲಾ ಖಾನ್ ಮಂಡ್ಯ ಅವರಿಗೆ ನೀಡಿ ಸತ್ಕರಿಸಲಾಯಿತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಅಜ್ಮಾನ್ ಆಡಳಿತ ಕುಟುಂಬ ಸದಸ್ಯ ಮೊಹಮ್ಮದ್ ಸಈದ್ ಅಲ್ ನಯೋಮಿ ಮತ್ತು ದುಬೈ ನಾಗರಿಕ ಉದ್ಯಮಿ ದಾವೂದ್ ಅಬ್ದುಲ್ಲಾ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀಯುತ ಸತೀಶ್ ಪೂಜಾರಿ, ಉದ್ಯಮಿಗಳಾದ ಕನಕರಾಜ್ (BM ಗ್ರೂಪ್ ಆಫ್ ಕಂಪನೀಸ್), ಜೋಸೆಫ್ ಮಥಾಯಿಸ್, ಶ್ರೀಯುತ ಗಣಪತಿ ಭಟ್ ಯಕ್ಷಗಾನ ಕಲಾ ಪೋಷಕರು, ಅಲ್ಲದೆ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಇಬ್ರಾಹಿಂ ಖಲೀಲ್, ಶ್ರೀ ರೊನಾಲ್ಡ್ ಮಾರ್ಟಿಸ್, ಶ್ರೀ ಮಂಜುನಾಥ್ ರಾಜನ್, ಶ್ರೀಮತಿ ಛಾಯಾದೇವಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ವೀರೇಂದ್ರ ಬಾಬು ಮತ್ತು ಶ್ರೀಮತಿ ಉಮಾ ವಿದ್ಯಾಧರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸಂಗೀತ ಸಂಜೆಯ ಮೂಲಕ ನೆರೆದವರನ್ನು ಗಾಯಕಿ ಭೂಮಿಕಾ ಮಧುಸೂದನ್ ಅವರು ರಂಜಿಸಿದರು, ಪಾರ್ವತಿ ನೃತ್ಯ ವಿಹಂಗಮ ಬೆಂಗಳೂರು ತಂಡ ಮತ್ತು ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ನೃತ್ಯ ಹಾಡುಗಾರಿಕೆ ಮುಂತಾದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ತಮ್ಮ ಹಾಸ್ಯ ಮಾತುಗಳ ಮೂಲಕ ಶ್ರೀಯುತ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿ ಅವರು ನೆರೆದ ಜನರನ್ನು ರಂಜಿಸಿದರು. ಮಾತೃಭಾಷಾ ಕನ್ನಡ ಪರಿಷತ್ ನ ಚಂದನ್ ಅವರು ಕನ್ನಡ ಕಲಿಕೆ ತಂತ್ರಾಂಶ ಅನಾವರಣಗೊಳಿಸಿದರು. ದುಬೈ ಕನ್ನಡ ಕೂಟದ ಅಧ್ಯಕ್ಷರಾದ ಶ್ರೀಯುತ ಸದನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ನೆಡೆದ ಕಾರ್ಯಕ್ರಮವನ್ನು ಸವಿಪ್ರಕಾಶ್ ಅವರು ನಿರೂಪಿಸಿದರೆ, ವಿನಾಯಕ್ ಹೆಗಡೆಯವರು ನಿರೂಪಣೆಯಲ್ಲಿ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ವೆಂಕಟರಮಣ ಕಾಮತ್ ಅವರು ಸರ್ವರನ್ನು ಸ್ವಾಗತಿಸಿದರೆ, ಜಂಟಿ ಕಾರ್ಯದರ್ಶಿಗಳಾದ ವಿನೀತ್ ರಾಜ್ ಅವರು ಲಕ್ಕಿ ಡಿಪ್ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಅಂತಿಮವಾಗಿ ಚೇತನ್ ಸುಬ್ರಹ್ಮಣ್ಯ ಅವರ ವಂದನಾರ್ಪಣೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.


Spread the love