ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸಿ-ಶ್ಯಾಮಲಾ ಕುಂದರ್  

Spread the love

ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸಿ-ಶ್ಯಾಮಲಾ ಕುಂದರ್  

ಮಂಗಳೂರು: ಅಧಿಕಾರಿಗಳು ಕಾನೂನು ಚೌಕಟ್ಟಿನ ಮಿತಿಯೊಳಗೆ ಕೆಲಸ ನಿರ್ವಹಿಸದೆ ಮಾನವೀಯ ನೆಲೆಯಲ್ಲಿ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.

ಪೊಲೀಸ್ ಇಲಾಖಾ ವತಿಯಿಂದ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಮಾಸಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾನೂನುಗಳು ನಮ್ಮ ರಕ್ಷಣೆಗೋಸ್ಕರ ಇರುವುದು ಹಾಗಾಗಿ ಜನಸಾಮಾನ್ಯರು ತಮ್ಮ ಸಮಸ್ಯೆಯನ್ನು ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು. ಒಂದು ಕಾಲದಲ್ಲಿ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಲು ಭಯಪಡುತ್ತಿದ್ದರು. ಆದರೆ ಇಂದು ಮಹಿಳೆ ಧೈರ್ಯದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದನ್ನು ಗಮನಿಸಬಹುದು ಇದು ಮಹಿಳಾ ಸಬಲೀಕರಣಕ್ಕೆ ಉದಾಹರಣೆ ಎಂದರು. ಪೊಲೀಸ್ ಅಧಿಕಾರಿಗಳು ಜನರ ಸಮಸ್ಯೆಗಳಿಗೆ, ತೊಂದರೆಗಳಿಗೆ ಸ್ಪಂದಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆ ಜನರ ಸಮಸ್ಯೆಗಳನ್ನು ಆಲಿಸಲು ಆಯೋಜಿಸಿರುವ ಈ ಸಭೆಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಭೆಯಲ್ಲಿ ದಲಿತರಿಗೆ ಸರಕಾರಿ ಇಲಾಖೆಯ ಅಧಿಕಾರಿಗಳಿಂದ ದಬ್ಬಾಳಿಕೆ, ಶೋಷಣೆ ನಡೆಯುತ್ತಿದ್ದು, ಜೊತೆಗೆ ಸಭೆಯಲ್ಲಿ ಗೈರು ಹಾಜಾರಾಗಿದ್ದ ವಿವಿಧ ಇಲಾಖೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ಕರೆದು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಆಗ್ರಹಿಸಿದರು.

ಜಿಲ್ಲಾ ಪೊಲೀಸ್ ಆಧೀಕ್ಷಕರು ಲಕ್ಷ್ಮೀ ಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದು, ಈ ಎಲ್ಲಾ ಸಮಸ್ಯೆ, ಕುಂದು ಕೊರತೆಗಳನ್ನು ಆಲಿಸಿ, ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಶೀಘ್ರವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು. ಜೊತೆಗೆ ಪೊಲೀಸ್ ಇಲಾಖೆಯಿಂದ ಯಾವುದೇ ಲೋಪವಾಗದಂತೆ ಎಲ್ಲಾ ರೀತಿಯ ಸಹಕಾರ ನೀಡಿ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಕ್ರಂ ಅಮಾಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Spread the love