ಅನಿಲ ಸಬ್ಸಿಡಿ ಕಡಿತದಿಂದ ಮಹಿಳೆಯರ ಭವಿಷ್ಯ ಹೇಗೆ ಉಜ್ವಲ ? –ಎನ್ಎಫ್ಐಡಬ್ಲ್ಯು
ಮಂಗಳೂರು: ಕೋಟ್ಯಾಂತರ ಬಳಕೆದಾರರು ಉಪಯೋಗಿಸುತ್ತಿರುವ ಅಡುಗೆ ಅನಿಲಕ್ಕೆ ನೀಡುತ್ತಿರುವ ಸಬ್ಸಿಡಿಯನ್ನು ಸಂಪೂರ್ಣ ನಿಲ್ಲಿಸಿ ಸಾವಿರಾರು ಮಹಿಳೆಯರಿಗೆ ಅಡುಗೆ ಅನಿಲ ಠೇವಣಿಯಲ್ಲಿ ರಿಯಾಯಿತಿ ನೀಡಿದಾಕ್ಷಣ ಮಹಿಳೆಯರ ಬದುಕು ಹೇಗೆ ಉಜ್ವಲವಾಗುತ್ತದೆ ? ಉಜ್ವಲ ಯೋಜನೆಯ ನೆಪದಲ್ಲಿ ಅಡುಗೆ ಅನಿಲಕ್ಕೆ ನೀಡುತ್ತಿರುವ ಸಹಾಯಧನವನ್ನು ನಿಲ್ಲಿಸುವ ಮೂಲಕ ಕೇಂದ್ರ ಸರಕಾರ ಭಾರತೀಯ ಮಹಿಳೆಯರನ್ನು ಹಾಗೂ ಜನಸಾಮಾನ್ಯರನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ. 2014ರ ಮಾರ್ಚ್ ತಿಂಗಳಲ್ಲಿ ಸಿಲಿಂಡರ್ ಒಂದರ ದರ ರೂ. 419 ಇದ್ದದ್ದು ಇದೀಗ ರೂ. 731ಕ್ಕೆ ಏರಿಕೆಯಾಗಿದೆ. ಅಂದರೆ ರೂ. 312 ಹೆಚ್ಚಾಗಿದೆ. ಕಳೆದ ಒಂದೇ ತಿಂಗಳಲ್ಲಿ 94 ರೂಪಾಯಿ ಏರಿಕೆಯಾಗಿರುವುದು ಜನಸಮಾನ್ಯರಿಗೆ ಬಗೆದ ದ್ರೋಹವಾಗಿದೆ. ವಾಸ್ತವತೆ ಹೀಗಿರುವಾಗ ತಾನು ಉಜ್ವಲ ಯೋಜನೆಯ ಮೂಲಕ ಭಾರತೀಯ ಮಹಿಳೆಯರ ಜೀವನವನ್ನು ಬೆಳಗಿಸಿದ್ದೇವೆ ಎಂದು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಭಾರತೀಯ ಮಹಿಳೆಯರ ಒಕ್ಕೂಟ (ಎನ್ಎಫ್ಐಡಬ್ಲ್ಯು)ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಭಾರತಿ ಶಂಭೂರು ಪ್ರಶ್ನಿಸಿದ್ದಾರೆ.
ಭಾರತೀಯ ಮಹಿಳೆಯರ ಒಕ್ಕೂಟ (ಎನ್ಎಫ್ಐಡಬ್ಲ್ಯು) ದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅಡುಗೆ ಅನಿಲ ಬೆಲೆಯೇರಿಕೆಯನ್ನು ಪ್ರತಿಭಟಿಸಿ ಇಂದು ದ.ಕ ಜಿಲ್ಲಾಧಿಕಾರಿ ಕಛೇರಿಯೆದುರು ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಒಕ್ಕೂಟದ ಜಿಲ್ಲಾಧ್ಯಕ್ಷೆ ಕುಮಾರಿ ಚಿತ್ರಾಕ್ಷಿ ಮಾತನಾಡುತ್ತಾ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸಬಲೀಕರಣದ ಉದ್ದೇಶವನ್ನಿಟ್ಟುಕೊಂಡು 1954ರಲ್ಲಿ ಸಂಘಟಿತಗೊಂಡ ಸ್ವಾತಂತ್ರ್ಯೋತ್ತರ ಭಾರತದ ಪ್ರಥಮ ಸಂಘಟನೆಯಾಗಿದೆ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್ಎಫ್ಐಡಬ್ಲ್ಯು). ನಮ್ಮನ್ನಾಳುತ್ತಿರುವ ಸರಕಾರಗಳು ತಮ್ಮ ರಾಜಕೀಯ ಸ್ವಾರ್ಥಕ್ಕೋಸ್ಕರ ಮಹಿಳೆಯರ ಸ್ವಾಭಿಮಾನವನ್ನು ಕೆದಕುತ್ತಿರುವುದನ್ನು ಸಹಿಸಲಾಗದು. ಮಹಿಳಾ ದೌರ್ಜನ್ಯದ ವಿರುದ್ದ, ಸಮಾನ ಹಕ್ಕುಗಳಿಗಾಗಿ, ದುಡಿಯುವ ಸ್ಥಳದಲ್ಲಾಗುತ್ತಿರುವ ಅನಾಚಾರದ ವಿರುದ್ಧ ನಮ್ಮ ಸಂಘಟನೆ ಸದಾ ಹೋರಾಟದಲ್ಲಿರುತ್ತದೆ ಎಂದರು.
ಪ್ರಾರಂಭದಲ್ಲಿ ಹೋರಾಟದ ಗೀತೆಯನ್ನು ಹಾಡಲಾಯಿತು. ಒಕ್ಕೂಟದ ನಾಯಕರಾದ ವನಜಾಕ್ಷಿ ಬಿ. ಶೇಖರ್ ಸ್ವಾಗತಿಸಿದರು, ಚಂದ್ರಾವತಿ ಬಿ. ಭಂಡಾರಿ ವಂದಿಸಿದರು. ಶರ್ಮಿಳಾ ಕರುಣಾಕರ್, ಸರಸ್ವತಿ ಕಡೇಶಿವಾಲಯ, ಸಂಜೀವಿ ಹಳೆಯಂಗಡಿ, ಬೇಬಿ ಮಧ್ಯ, ದಯಾವತಿ ಬಂಟ್ವಾಳ, ಸುಲೋಚನ ಕವತ್ತಾರು, ಸೆಲಿಮತ್ ಪಂಜಿಮೊಗರು ಮುಂತಾದವರು ನೇತೃತ್ವ ನೀಡಿದರು.