ಅನ್ಯಾಯ, ಅಸಮಾನತೆ ವಿರುದ್ದ ಹೋರಾಟಕ್ಕೆ ರಾಣಿ ಚೆನ್ನಮ್ಮ ಪ್ರೇರಣೆ – ಡಿಸಿ ಪ್ರಿಯಾಂಕ ಮೇರಿ
ಉಡುಪಿ: ಸಮಾಜದಲ್ಲಿನ ಅನ್ಯಾಯ , ಅಸಮಾನತೆ, ಸಾಮಾಜಿಕ ಪಿಡುಗುಗಳು ನಿವಾರಣೆಯಾಗುವವರೆಗೂ ಹೋರಾಟ ನಿರಂತರವಾಗಿರಬೇಕು, ಇಂತಹ ಹೋರಾಟಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ಮಾದರಿಯಾಗಲಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಮಂಗಳವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ, ವಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟೀಷರು ನಡೆಸುತ್ತಿದ್ದ ಅನ್ಯಾಯ, ಅಸಮಾನತೆಯ ವಿರುದ್ದ ಹೋರಾಟ ಮಾಡಿದವರು, ಸ್ವಾತಂತ್ರ್ಯ ಪೂರ್ವದಲ್ಲಿ ಚೆನ್ನಮ್ಮ ನಡೆಸಿದ ಹೋರಾಟದ ಕಾರಣಗಳು ಇಂದಿನ ಸಮಾಜದಲ್ಲೂ ಮುಂದುವರೆದಿವೆ, ಸಮಾಜದಲ್ಲಿ ಇಂದಿಗೂ ಆಚರಣೆಯಲ್ಲಿರುವ ಸಾಮಾಜಿಕ ಪಿಡುಗು, ಅಸಮಾನತೆ ವಿರುದ್ದ ಹೋರಾಟ ನಡೆಸಲು ಚೆನ್ನಮ್ಮ ಪ್ರೇರಣೆಯಾಗಬೇಕು, ಚೆನ್ನಮ್ಮರ ಬದುಕು ಎಲ್ಲರಿಗೂ ಮಾರ್ಗದರ್ಶಕವಾಗಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಿತ್ತೂರ ರಾಣಿ ಚೆನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀಕಾಂತ ಶೆಟ್ಟಿ, ದೇಶದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮುಂಚೆ ಬ್ರಿಟೀಷರ ವಿರುದ್ದ ಕಿತ್ತೂರ ರಾಣಿ ಚೆನ್ನಮ್ಮ ಹೋರಾಡಿದ್ದರು, ಬ್ರಿಟೀಷರ ನಿರಂತರ ದಬ್ಬಾಳಿಕೆ, ದೌರ್ಜನ್ಯ ವಿರುದ್ದ ಹೋರಾಡಿದ್ದ ಅವರ ಬದುಕು ಯುವ ಜನತೆಗೆ ಪ್ರೇರಣೆಯಾಗಬೇಕು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವ ಬಲಿದಾನ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಎಲ್ಲಾ ಮಹನೀಯರನ್ನು ನೆನೆಯಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆ ವಹಿಸಿದ್ದರು. ಎಎಸ್ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು. ಹಿರಿಯಣ್ಣ ಶೆಟ್ಟಿಗಾರ್ ಮತ್ತು ಬಳಗದವರಿಂದ ಕಿತ್ತೂರ ರಾಣಿ ಚೆನ್ನಮ್ಮ ಯಕ್ಷಗಾನ ಪ್ರಸಂಗ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು, ವಳಕಾಡು ಪ್ರೌಢಶಾಲೆಯ ಮುಖ್ಯೋಪಧ್ಯಾಯನಿ ನಿರ್ಮಲಾ ವಂದಿಸಿದರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿದರು.