ಅಪರಾದ ಚಟುವಟಿಕೆಗಳ ಮೇಲೆ ನಿಗಾ – ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸೂಚನೆ
ಮಂಗಳೂರು : ಜಿಲ್ಲೆಯಲ್ಲಿ ನಡೆಯುವ ಮಾದಕ ವಸ್ತುಗಳ ಚಟುವಟಿಕೆ, ಅಕ್ರಮ ಗೋ ಸಾಗಾಟ ಸೇರಿದಂತೆ ಅಪರಾದ ಚಟುಚಟಿಕೆಗಳ ಮೇಲೆ ಗಂಭೀರವಾಗಿ ನಿಗಾ ಇಟ್ಟು ಅಪರಾಧಿಗಳ ಮೇಲೆ ಕೂಡ ನಿಗಾ ಇಡುವಂತೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಜಿಲ್ಲೆಯ ಶಾಸಕರೊಂದಿಗೆ ಹಾಗೂ ಪೊಲೀಸು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜನತೆಯಲ್ಲಿ ವಿಶ್ವಾಸ ಮೂಡಿಸುವ ಕೆಲಸಗಳು ತುರ್ತಾಗಿ ಆಗಬೇಕು. ಕಾನೂನಿನ ಅನುಷ್ಠಾನ ಸರಿಯಾದ ಆವಧಿಯಲ್ಲಿ ಆಗಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು. ಪದೇಪದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವವರ ಮೇಲೆ ನಿಗಾ ಇಟ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹಾ ವಿದ್ಯಮಾನಗಳನ್ನು ನಿಗ್ರಹಿಸಲು ಪೊಲೀಸು ವರಿಷ್ಠಾಧಿಕಾರಿ ಹಾಗೂ ಪೊಲೀಸು ಆಯುಕ್ತರು ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನಗಳನ್ನು ರೂಪಿಸುವಂತೆ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಅಕ್ರಮ ಚಟುವಟಿಕೆಗಳಿಗೆ ಯಾರ ಬೆಂಬಲವೂ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೇಲ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಸ್ಮಾರ್ಟ್ ಸಿಟಿ – ಅನಗತ್ಯ ಖರ್ಚು ಬೇಡ ಸಚಿವ ಖಾದರ್: ಜಾರಿಯಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಜ್ಯಾರಿಗೆ ತರುವಂತೆ ಸಚಿವ ಯು.ಟಿ ಖಾದರ್ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆಗಳ ಬಗ್ಗೆ ಎಲ್ಲಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಅನುದಾನ ಇದೆ ಎಂದ ಮಾತ್ರಕ್ಕೆ ಪ್ರಾಮುಖ್ಯ ಅಲ್ಲದ ಯೋಜನೆಗಳನ್ನು ಜಾರಿಗೆ ತರುವುದು ಬೇಡ ಎಂದ ಅವರು ಅಧಿಕಾರಿಗಳಿಗೆ ತಾಖೀತು ಮಾಡಿದರು.
ನಗರದ ಬಾವುಟಗುಡ್ಡೆ ಠಾಗೋರು ಪಾರ್ಕ್ ನಲ್ಲಿ ಆಕರ್ಷಕ ಕ್ಲಾಕ್ ಟವರ್ ನಿರ್ಮಾಣ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಲು ಅವರು ಸೂಚಿಸಿದರು.