ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣ; ಆರೋಪಿಗಳ ಬಗ್ಗೆ ಸಾರ್ವಜನಿಕರಿಂದ ಎಸ್ಪಿಗೆ ಮಾಹಿತಿ – ಆರು ಮಂದಿ ಬಂಧನ

Spread the love

ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣ; ಆರೋಪಿಗಳ ಬಗ್ಗೆ ಸಾರ್ವಜನಿಕರಿಂದ ಎಸ್ಪಿಗೆ ಮಾಹಿತಿ – ಆರು ಮಂದಿ ಬಂಧನ

ಉಡುಪಿ: ಇಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಕಾಪು ಮತ್ತು ಶಿರ್ವ ಪೋಲಿಸರು ಮಣಿಪುರ ದೆಂದೂರುಕಟ್ಟೆ ಬಳಿ ಭಾನುವಾರ ಮಧ್ಯರಾತ್ರಿ ಬಂಧಿಸಿದ್ದಾರೆ.

ಬಂಧಿತರನ್ನು ದೆಂದೂರುಕಟ್ಟೆ ನಿವಾಸಿಗಳಾದ ದೀಪಕ್‌(19), ಧೀಕ್ಷಿತ್‌ (20), ಸುಮಂತ್‌(20), ಉಜ್ವಲ್‌ (20), ಸತ್ಯರಾಜ್‌ (23) ಹಾಗೂ ನಿತೇಶ್‌ (28) ಎಂದು ಗುರುತಿಸಲಾಗಿದೆ.

ಸುಭಾಸ್ ನಗರ ನಿವಾಸಿ ಶಿವಪ್ರಸಾದ್ (19)   ಮತ್ತು ಆತನ ಗೆಳೆಯ ಕುರ್ಕಾಲು ನಿವಾಸಿ ಮಂಜುನಾಥ್ ರವರು ಭಾನುವಾರ ಎಕ್ಸೆಸ್ ದ್ವಿಚಕ್ರವಾಹನದಲ್ಲಿ ಬರುತ್ತಿರುವಾಗ ಮಣಿಪುರ ಗುಜ್ಜಿ ಎಂಬಲ್ಲಿ ಆರೋಪಿತರ ಪೈಕಿ ದೀಪಕ್ ಹಾಗೂ ದೀಕ್ಷಿತ್ ಎಂಬವರು ಕೆಎ 19 1428 ಹಾಗೂ ಕೆಎ 20 ಇಜಿ 2431 ನೇ ಮೋಟಾರ್ ಸೈಕಲಿನಲ್ಲಿ ಬಂದು ಶಿವಪ್ರಸಾದ್ ಹಾಗೂ ಮಂಜುನಾಥ್ ರವರು ಬರುತ್ತಿದ್ದ ಮೋಟಾರ್ ಸೈಕಲನ್ನು ತಡೆದು ನಿಲ್ಲಿಸಿ ಬೇವರ್ಸಿ ಎಂದು ಬೈದು ಕೈಯಿಂದ ಹೊಡೆದಿರುತ್ತಾರೆ. ಈ ಘಟನೆಯ ನಂತರ ರಾಜಿ ಪಂಚಾಯಿತಿ ನಡೆಸಿದವರಂತೆ ನಟಿಸಿ ಮತ್ತೆ ಕುರ್ಕಾಲು ಗ್ರಾಮದ ನೂಜಿ ಎಂಬಲ್ಲಿ ಶಿವಪ್ರಸಾದ್ ಹಾಗೂ ಮಂಜುನಾಥ್ ರವರು ಇರುವಾಗ ರಾತ್ರಿಹೊತ್ತಿಗೆ ಇತರ ಆರೋಪಿಗಳಾದ ಸುಮಂತ್, ಸಂದೀಫ್, ಸುಜಿತ್, ಪ್ರಿತೇಶ್, ಮುನ್ನಾ, ಸತ್ಯರಾಜ್, ಉಜ್ವಲ್ ಹಾಗೂ ಗುರು ಎಂಬವರೊಂದಿಗೆ ಅಕ್ರಮ ಕೂಟ ಸೇರಿಕೊಂಡು ಶಿವಪ್ರಸಾದ್ ಹಾಗೂ ಮಂಜುನಾಥ್ ರವರನ್ನು ಕೆಎ 20 ಇಡಿ 7473 ನೇ ಮೋಟಾರ್ ಸೈಕಲ್ ಹಾಗೂ ಇತರ ದ್ವಿಚಕ್ರವಾಹನದಲ್ಲಿ ಬಂದು ಅಪಹರಿಸಿ ಅಲೆವೂರು ಶಾಲೆ ನೆಹರೂ ಮೈದನಾಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮರದ ರೀಪಿನಿಂದ ಹಾಗೂ ಕೈಯಿಂದ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.

ಪ್ರಕರಣ ಆರೋಪಿಗಳ ಇರುವಿಕೆ ಬಗ್ಗೆ ಸಾರ್ವಜನಿಕರೊಬ್ಬರು ಪೊಲೀಸ್‌ ಅಧೀಕ್ಷಕರಿಗೆ ಫೋನಿನಲ್ಲಿ ಮಾಹಿತಿ ನೀಡಿದ್ದು, ಈ ಮಾಹಿತಿಯಂತೆ ಸಹಾಯಕ ಪೊಲೀಸ್‌ ಅಧೀಕ್ಷಕ ರಿಷಿಕೇಶ್ ಸೋನಾವಾನೆ ಐಪಿಎಸ್  ನೇತೃತ್ವದಲ್ಲಿ ಪೊಲೀಸ್‌ ವೃತ್ತ ನಿರೀಕ್ಷಕರು ಕಾಪು ಹಾಗೂ ಅವರ ತಂಡ ಬಂಧಿಸಿ ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಾಲ್ಕು ಮೋಟಾರ್‌ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಇರುವಿಕ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ರೂ ಐದು ಸಾವಿರ ನಗದು ಬಹುಮಾನ ಘೋಷಣೆ ಮಾಡಿರುವುದಾಗಿ ಜಿಲ್ಲಾ ಎಸ್ಪಿ ಡಾ. ಸಂಜೀವ್ ಪಾಟಿಲ್ ತಿಳಿಸಿದ್ದಾರೆ.


Spread the love